ಆ್ಯಪ್ನಗರ

ಮಳೆನೀರುಗಾಲುವೆಗಳಲ್ಲಿ ಇಂಗು ಗುಂಡಿಗಳ ನಿರ್ಮಾಣ

ಬಿಡಿಎ ರಚಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮಳೆನೀರುಗಾಲುವೆ(ಎಸ್‌ಡಬ್ಲ್ಯುಡಿ)ಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಉಪಕ್ರಮ ಕೈಗೊಳ್ಳಲಾಗಿದೆ.

Vijaya Karnataka 26 Jul 2019, 5:00 am
ಬೆಂಗಳೂರು : ಬಿಡಿಎ ರಚಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮಳೆನೀರುಗಾಲುವೆ(ಎಸ್‌ಡಬ್ಲ್ಯುಡಿ)ಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಉಪಕ್ರಮ ಕೈಗೊಳ್ಳಲಾಗಿದೆ.
Vijaya Karnataka Web rain water harvesting at kempegowda layout
ಮಳೆನೀರುಗಾಲುವೆಗಳಲ್ಲಿ ಇಂಗು ಗುಂಡಿಗಳ ನಿರ್ಮಾಣ


ಇದೇ ಮೊದಲ ಬಾರಿಗೆ ಬಿಡಿಎ ತನ್ನ ಬಡಾವಣೆ ನಿರ್ಮಾಣ ಯೋಜನೆಯಲ್ಲಿ ಇಂಥದ್ದೊಂದು ಪರಿಸರಸ್ನೇಹಿ ಪ್ರಯತ್ನವನ್ನು ಕಾರ್ಯರೂಪಕ್ಕೆ ತಂದಿದೆ. ಇಂಗು ಗುಂಡಿಗಳನ್ನು ನಿರ್ಮಿಸುವುದರಿಂದ ಮಳೆನೀರು ನೆಲದಾಳಕ್ಕೆ ಇಳಿದು ಅಂತರ್ಜಲ ಸೇರುತ್ತದೆ. ಮಳೆ ಬಿದ್ದ ಸ್ಥಳದಲ್ಲೇ ನೀರು ಭೂಮಿ ಸೇರಿದಲ್ಲಿ ಆ ಭಾಗದ ಭೂಮಿ ತೇವಾಂಶದ ಪ್ರಮಾಣ ಹೆಚ್ಚುತ್ತದೆ. ಇದು ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿ ಆಗಲಿದೆ ಎಂಬ ಕಾರಣಕ್ಕೆ ಇಂಗು ಗುಂಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಸದ್ಯ ನಗರದಲ್ಲಿರುವ ಮಳೆನೀರುಗಾಲುವೆಗಳಲ್ಲಿ ತ್ಯಾಜ್ಯನೀರು ಹರಿಯುತ್ತಿದೆ. ಮಳೆಗಾಲದಲ್ಲೂ ಸ್ವಚ್ಛ ನೀರು ಹರಿಯುವ ದೃಶ್ಯ ಕಾಣಸಿಗದು. ಮಳೆ ನೀರಿನೊಂದಿಗೆ ತ್ಯಾಜ್ಯ ನೀರು ಸೇರಿಕೊಂಡು ಹರಿವನ್ನು ಇನ್ನಷ್ಟು ಕಲುಷಿತಗೊಳಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಎಸ್‌ಡಬ್ಲ್ಯುಡಿಗಳಲ್ಲಿ ಮಳೆನೀರು ಮಾತ್ರ ಹರಿಯುವಂತೆ ನಿಗಾ ವಹಿಸಲಾಗಿದೆ. ತ್ಯಾಜ್ಯನೀರನ್ನು ಪ್ರತ್ಯೇಕ ಒಳಚರಂಡಿ ಮಾರ್ಗಕ್ಕೆ ಸಂಪರ್ಕಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

200 ಇಂಗು ಗುಂಡಿಗಳ ನಿರ್ಮಾಣ

ಬಡಾವಣೆಯಲ್ಲಿ ಒಟ್ಟು 28 ಕಿ.ಮೀ. ಉದ್ದದ ಮಳೆನೀರುಗಾಲುವೆ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 20 ಕಿ.ಮೀ. ಉದ್ದದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎಸ್‌ಡಬ್ಲ್ಯುಡಿ ಅಗಲ 2.5 ಮೀ. ನಿಂದ 15 ಮೀ. ವರೆಗೆ ಇದ್ದು, ದೊಡ್ಡ ವಿಸ್ತೀರ್ಣದ ಮಳೆನೀರುಗಾಲುವೆಗಳನ್ನು ಮಾತ್ರ ಇಂಗು ಗುಂಡಿಗಳನ್ನು ನಿರ್ಮಿಸಲು ಆಯ್ಕೆಮಾಡಲಾಗಿದೆ. ಈವರೆಗೆ 200 ಇಂಗು ಗುಂಡಿಗಳನ್ನ ರಚಿಸಲಾಗಿದೆ.

ಪ್ರತಿ 50 ಮೀ. ಅಂತರದಲ್ಲಿ 1.2 ಮೀ. ಅಗಲ ಹಾಗೂ 1.5 ಮೀ. ಆಳದ ಇಂಗು ಗುಂಡಿಗಳನ್ನು ಸಿಮೆಂಟ್‌ ರಿಂಗ್‌ ಬಳಸಿ ರಚಿಸಲಾಗಿದೆ. ಗುಂಡಿಯೊಳಗೆ ನಾನಾ ಗಾತ್ರದ ಜಲ್ಲಿಯನ್ನು ತುಂಬಿಸಲಾಗಿದೆ. ಮಳೆನೀರು ಹರಿಯುವ ವೇಳೆ ಈ ಇಂಗು ಗುಂಡಿಗಳೊಳಗೆ ನೀರು ಬಸಿದು ನೆಲ ಸೇರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆದಲ್ಲಿ ಅಂತರ್ಜಲ ವೃದ್ಧಿಗೆ ಅವಕಾಶವಾಗಲಿದೆ ಎಂಬುದು ಬಿಡಿಎ ಅಧಿಕಾರಿಗಳು ಪ್ರತಿಕ್ರಿಯಿಸಿದರು.


ಕೆರೆಗಳಿಗೆ ಹರಿಯಲಿದೆ ಮಳೆನೀರು

ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿ ಹತ್ತು ಕೆರೆಗಳಿವೆ. ಸಿವಿಲ್‌ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಕೆರೆ ಪುನಶ್ಚೇತನ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಆ ವೇಳೆ ಮಳೆನೀರುಗಾಲುವೆಗಳ ಮೂಲಕ ಮಳೆನೀರು ಹಾಗೂ ಸಂಸ್ಕರಿತ ನೀರನ್ನು ಕೆರೆಗೆ ಹರಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಕನ್ನಹಳ್ಳಿಕೆರೆ, ಕೊಡಿಗೇಹಳ್ಳಿ ಕೆರೆ ಹಾಗೂ ರಾಮಸಂದ್ರ ಕೆರೆಗಳ ಒಳ ಹಾಗೂ ಹೊರ ಹರಿವಿನ ಮಳೆನೀರುಗಾಲುವೆಗಳು ಒಂದಕ್ಕೊಂದು ಸಂಪರ್ಕಿಸಲಾಗುತ್ತದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ