ಆ್ಯಪ್ನಗರ

ವಿಧಾನಸೌಧದಲ್ಲಿ ದಶಕದಿಂದಲೂ ನಡೆದಿದೆ ಮಳೆ ಕೊಯ್ಲು

ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಅಳವಡಿಸಿರುವ ಬೃಹತ್‌ ಮಳೆ ನೀರು ಸಂಗ್ರಹ ವ್ಯವಸ್ಥೆ ದಶಕದ ಬಳಿಕವೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.

Vijaya Karnataka 25 Jul 2019, 7:53 am
ಬೆಂಗಳೂರು : ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಅಳವಡಿಸಿರುವ ಬೃಹತ್‌ ಮಳೆ ನೀರು ಸಂಗ್ರಹ ವ್ಯವಸ್ಥೆ ದಶಕದ ಬಳಿಕವೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.
Vijaya Karnataka Web water harvesting in vidhanasoudha


ಸರಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಭಾಗವಾಗಿ ವಿಧಾನಸೌಧದಲ್ಲೂ ಮಳೆ ನೀರು ಕೊಯ್ಲು ನಡೆಸಲಾಗುತ್ತಿದೆ. ನಗರದಲ್ಲಿ ನಾನಾ ಇಲಾಖೆಗಳ ನೂರಕ್ಕೂ ಹೆಚ್ಚು ಕಟ್ಟಡಗಳಿವೆ. ಅವುಗಳಲ್ಲಿ ಹೆಚ್ಚಿನವು ದೊಡ್ಡ ಕಟ್ಟಡಗಳಾಗಿರುವ ಕಾರಣ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲು ಮೊದಲು ವಿಧಾನಸೌಧವನ್ನೇ ಆಯ್ಕೆ ಮಾಡಿಕೊಳ್ಳಲಾಯಿತು. 2006ರಲ್ಲಿ ಇಂಡೋ ನಾರ್ವೆಯನ್‌ ಎನ್ವೈರ್ನಮೆಂಟ್‌ ಪ್ರೊಗ್ರಾಮ್‌(ಐಎನ್‌ಇಪಿ) ಹಾಗೂ ರಾಜ್ಯ ವಿಜ್ಞಾನ ಹಾಗೂ ತಂತ್ರ ವಿದ್ಯಾ ಮಂಡಳಿ(ಕೆಎಸ್‌ಸಿಎಸ್‌ಟಿ) ಜಂಟಿ ಸಹಯೋಗದಲ್ಲಿ ರೂಪಿಸಿದ್ದ ಯೋಜನೆಯ ಫಲವಾಗಿ ದೊಡ್ಡ ಪ್ರಮಾಣದ ಮಳೆ ನೀರು ಸಂಗ್ರಹಿಸಲಾಗುತ್ತಿದೆ ಮಾತ್ರವಲ್ಲದೆ, ಉದ್ಯಾನಕ್ಕೆ ನೀರು ಒದಗಿಸಲು ಸಾಧ್ಯವಾಗಿದೆ.

ವಿಧಾನಸೌಧ ಛಾವಣಿಯ 5,800 ಚ.ಮೀ. ವಿಸ್ತೀರ್ಣವನ್ನು ಬಳಸಿಕೊಂಡು ಮಳೆನೀರನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಆವರಣದಲ್ಲೇ ನಾಲ್ಕು ಲಕ್ಷ ಲೀ. ಸಾಮರ್ಥ್ಯದ ನೆಲಮಟ್ಟದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಕಟ್ಟಡದ ಮೇಲೆ ಬಿದ್ದ ಬಹುತೇಕ ನೀರನ್ನು ಕೊಳವೆಗಳ ಮೂಲಕ ಟ್ಯಾಂಕ್‌ಗೆ ಸಂಪರ್ಕಿಸಲಾಗಿದೆ. ಇದರಿಂದ ವಾರ್ಷಿಕ 57.40 ಲಕ್ಷ ಲೀ. ಮಳೆನೀರನ್ನು ಸಂಗ್ರಹಿಸಬಹುದಾಗಿದೆ.

''ಮಳೆಕೊಯ್ಲು ನೀರಿನಿಂದ ವರ್ಷ ಪೂರ್ತಿ ಉದ್ಯಾನ ನಿರ್ವಹಣೆ ಸಾಧ್ಯವಾಗದು. ಆದರೆ, ನೀರಿನ ಕೊರತೆಯನ್ನು ನೀಗಿಸಿಕೊಳ್ಳಲು ಮಳೆ ಕೊಯ್ಲು ಸಹಕಾರಿಯಾಗಿದೆ. ಮಳೆನೀರು, ಸಂಸ್ಕರಿತ ನೀರನ್ನು ಬಳಸುತ್ತಿರುವ ಕಾರಣ ಪಾರ್ಕ್‌ ಹಾಗೂ ಲಾನ್‌ಗೆ ನೀರು ಹಾಯಿಸಲು ಸಮಸ್ಯೆ ಉಂಟಾಗಿಲ್ಲ,'' ಎಂದು ವಿಧಾನಸೌಧದ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು 'ವಿಕ'ಗೆ ತಿಳಿಸಿದರು.

ಶಾಸಕರ ಭವನದಲ್ಲಿ ಇಂಗುಗುಂಡಿ ನಿರ್ಮಾಣ

ವಿಧಾನಸೌಧದ ಬದಿಯಲ್ಲಿರುವ ಶಾಸಕರ ಭವನದಲ್ಲೂ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿನ ಕಟ್ಟಡಗಳ ಛಾವಣಿಯ ಒಟ್ಟು 201.5 ಘನ ಮೀಟರ್‌ ವಿಸ್ತೀರ್ಣದಲ್ಲಿ ಬಿದ್ದ ಮಳೆನೀರು ನೇರವಾಗಿ ನೆಲದಡಿಯಲ್ಲಿ ನಿರ್ಮಿಸಿರುವ ಏಳು ತೊಟ್ಟಿಗಳಿಗೆ ಹರಿಯುವಂತೆ ಮಾಡಲಾಗಿದೆ. ಇದರ ಜತೆಗೆ ಉದ್ಯಾನದಲ್ಲಿ ನಾಲ್ಕು ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸಲು ಕ್ರಮ ಕೈಗೊಳ್ಳಲಾಗಿದೆ.

ಉದ್ಯಾನಕ್ಕೆ ಮಳೆ ನೀರು ಹಾಗೂ ಸಂಸ್ಕರಿತ ನೀರನ್ನು ಬಳಸಲಾಗುತ್ತಿದೆ. ಸ್ಪಿಂಕ್ಲರ್‌ಗಳನ್ನು ಬಳಸಿ ನೀರು ಪೋಲಾಗದಂತೆ ಎಚ್ಚರವಹಿಸಲಾಗಿದೆ. ಬೇಸಿಗೆ ಸಮಯದಲ್ಲಿ ನೀರಿನ ಕೊರತೆ ಉಂಟಾದಲ್ಲಿ ಮಾತ್ರ ಬೇರೆ ಮೂಲದಿಂದ ನೀರು ಬಳಸಿಕೊಳ್ಳಲಾಗುತ್ತಿದೆ. ಇದರ ಹೊರತಾಗಿಯೂ ರಸ್ತೆ ಮೇಲೆ ಬಿದ್ದ ನೀರನ್ನೂ ವ್ಯರ್ಥವಾಗಿ ಹರಿಯುವುದಕ್ಕೆ ತಡೆ ಒಡ್ಡಿದ್ದಲ್ಲಿ ಇನ್ನಷ್ಟು ಮಳೆ ನೀರನ್ನು ಸಂಗ್ರಹಿಸಲು ಅವಕಾಶ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ