ಆ್ಯಪ್ನಗರ

ಆರ್‌.ಆರ್‌ ನಗರ ಬೈಎಲೆಕ್ಷನ್: ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಿಂದ ಮುನಿರತ್ನಗೆ ಲಾಭ?

ಆರ್‌.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಸ್ಪರ್ಧೆಯಿಂದ ಯಾರಿಗೆ ಲಾಭವಾಗಲಿದೆ ಯಾರಿಗೆ ನಷ್ಟವಾಗಲಿದೆ ಎಂಬ ಚರ್ಚೆ ತೀವ್ರಗೊಂಡಿದೆ. ಅಷ್ಟಕ್ಕೂ ಈ ಚರ್ಚೆ ಹುಟ್ಟಲು ಕಾರಣವೇನು?

Vijaya Karnataka Web 15 Oct 2020, 10:13 am
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆ ಕಾವು ತೀವ್ರಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಈ ನಡುವೆ ಚುನಾವಣಾ ತಂತ್ರ ಪ್ರತಿತಂತ್ರಗಳು ತೀವ್ರಗೊಂಡಿವೆ. ಅದರಲ್ಲೂ ಈ ಕ್ಷೇತ್ರದಲ್ಲಿ ಜಾತಿ ಕಾರ್ಡ್ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಸ್ಪರ್ಧೆಯಿಂದ ಮತ ವಿಭಜನೆಗೊಂಡು ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Vijaya Karnataka Web muniratna and kusuma and jds


ಆರ್‌. ಆರ್‌ ನಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್‌ನಿಂದ ಸ್ಪರ್ಧೆ ನಡೆಸಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಮುನಿರತ್ನ ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಉಪಚುನಾವಣೆ ಗಮನಸೆಳೆಯುತ್ತಿದೆ.


ನಾಮಪತ್ರ ಸಲ್ಲಿಸಿದ ದಿನವೇ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮತ್ತು ಸಿದ್ದರಾಮಯ್ಯ ಕಾರ್‌ ಚಾಲಕ ವಿರುದ್ಧ ಎಫ್‌ಐಆರ್..!

ಆರಂಭದ ಹಂತದಲ್ಲಿ ಮುನಿರತ್ನ ಟಿಕೆಟ್‌ ಸಾಕಷ್ಟು ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಬಿಜೆಪಿಯಲ್ಲಿ ಮುನಿರತ್ನಗೆ ಟಿಕೆಟ್‌ ನೀಡುವ ಸಾಧ್ಯತೆ ಕಡಿಮೆ ಇದೆ ಎಂದೇ ಹೇಳಲಾಗುತ್ತಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿತ್ತು.

ಬಿಜೆಪಿ‌ ಅಭ್ಯರ್ಥಿ ಹೆಸರು ಪ್ರಕಟಗೊಳ್ಳುವವರೆಗೂ ತಮ್ಮ ಪಕ್ಷದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿರಲಿಲ್ಲ. ಈ‌ ನಡುವೆ ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಸಿಗದೇ ಇದ್ದರೆ ಜೆಡಿಎಸ್ ನಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇದೀಗ ಮುನಿರತ್ನಗೆ ಬಿಜೆಪಿ ಟಿಕೆಟ್‌ ಕೂಡಾ ನೀಡಿದ್ದು ಬಿ-ಫಾರಂನ್ನು ನೀಡಿದ್ದು ನಾಮಪತ್ರ ಸಲ್ಲಿಕೆಯೂ ಪೂರ್ಣಗೊಂಡಿದೆ.

ಆರ್‌ಆರ್‌ ನಗರ: ಜೆಡಿಎಸ್‌ನ ಕೃಷ್ಣಮೂರ್ತಿ ಆಸ್ತಿ ಭಾರೀ ಕಡಿಮೆ..! ಸಾಲ ಕೊಟ್ಟಿಲ್ಲ.. ತಗೊಂಡಿಲ್ಲ..!

ಕೃಷ್ಣಮೂರ್ತಿ ಸ್ಪರ್ಧೆಯಿಂದ ಒಕ್ಕಲಿಗ ಮತ ವಿಭಜನೆ!

ರಾಜರಾಜೇಶ್ವರಿ‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿವೆ. ಕ್ಷೇತ್ರದಲ್ಲಿ ಒಟ್ಟು 4 ಲಕ್ಷ ಮತದಾರರ ಪೈಕಿ ಸುಮಾರು 1,20,000 ಒಕ್ಕಲಿಗ ಮತಗಳಿವೆ. ಅಲ್ಪಸಂಖ್ಯಾತ ಮತಗಳು 40,000 ಇದೆ. ಇನ್ನು 40 ರಿಂದ 50 ಸಾವಿರ ಎಸ್‌ಸಿ ಎಸ್‌ಟಿ ಮತಗಳಿವೆ. ಈ ಕಾರಣದಿಂದಾಗಿ ಒಕ್ಕಲಿಗ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಸಂಸದ ಡಿಕೆ ಸುರೇಶ್ ಆರ್‌.ಆರ್‌ ನಗರ ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ್ದಾರೆ.

ಆರ್‌ಆರ್‌ ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ, ಗೆಲುವಿನ ಭ್ರಮೆಯಲ್ಲಿ ಬಿಜೆಪಿ: ಮಾಜಿ ಸಿಎಂ ಎಚ್‌ಡಿಕೆ

ತಮ್ಮ ನಿವಾಸಗಳ ಮೇಲೆ ನಡೆದ ಸಿಬಿಐ ದಾಳಿಯನ್ನು ಚುನಾವಣಾ ಅಖಾಡದಲ್ಲಿ ದಾಳವಾಗಿ ಬಳಕೆ ಮಾಡುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಜಾತಿ ವಿಚಾರ ಆರ್‌ಆರ್‌ ನಗರ ಉಪ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ನಡುವೆ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದ ಒಕ್ಕಲಿಗ ಮತಗಳು ವಿಭಜನೆ ಮಾಡುವ ಉದ್ದೇಶದಿಂದಲೇ ಅವರನ್ನು ಜೆಡಿಎಸ್‌ ಕಣಕ್ಕಿಳಿಸಿದೆ, ಇದರ ಹಿಂದೆ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಉದ್ದೇಶ ಇದೆ ಎಂಬ ಆರೋಪವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಉಪಚುನಾವಣೆಯಲ್ಲಿ ಜಾತಿ ಕಾರ್ಡ್‌ ಎಷ್ಟರ ಮಟ್ಟಿಗೆ ಪಾತ್ರ ವಹಿಸಲಿದೆ ಎಂಬುವುದು ಸದ್ಯದ ಕುತೂಹಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ