ಆ್ಯಪ್ನಗರ

ಬೆಂಗ್ಳೂರಿಂದ ಗಡಿಪಾರಾದವರು ಬಾಂಗ್ಲಾದಿಂದ ಮತ್ತೆ ವಾಪಾಸ್‌!

ಅಕ್ರಮ ವಲಸಿಗರನ್ನು ಮರಳಿ ಭಾರತಕ್ಕೆ ಕಳುಹಿಸಿದ ಕುರಿತು ಬಾಂಗ್ಲಾ ದಿನ ಪತ್ರಿಕೆ 'ಡೈಲಿ ಸ್ಟಾರ್‌'ನಲ್ಲಿ ವರದಿ.

Vijaya Karnataka Web 19 Dec 2019, 11:16 am
ಬೆಂಗಳೂರು: ನಗರದಲ್ಲಿ ಅಕ್ರಮ ವಾಸ್ತವ್ಯದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ 59 ಬಾಂಗ್ಲಾ ಪ್ರಜೆಗಳ ಗಡಿಪಾರು ಪ್ರಕ್ರಿಯೆ ಸಾಕಷ್ಟು ಸೆಣಸಾಟದ ಬಳಿಕ ನೆರವೇರಿದೆ. ಆದರೆ, ಭಾರತದ ಗಡಿ ದಾಟಿದ ಅಕ್ರಮ ವಲಸಿಗರನ್ನು ಮತ್ತೆ ಭಾರತದೊಳಕ್ಕೇ ವಾಪಸ್‌ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ, ಅಕ್ರಮ ವಲಿಸಗರ ಗಡಿಪಾರು ಪ್ರಕ್ರಿಯೆ ಸಮರ್ಪಕವಾಗಿ ನೆರವೇರಿದೆ ಎನ್ನುವ ಖಚಿತ ಮಾಹಿತಿ ಯಾರ ಬಳಿಯೂ ಇಲ್ಲ!
Vijaya Karnataka Web Bangla Infiltrators


59 ಮಂದಿಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳಿಗೆ ಒಪ್ಪಿಸಿ ಬೆಂಗಳೂರು ಪೊಲೀಸರು ವಾಪಸ್ಸಾದರು. ಅವರನ್ನು ಬಾಂಗ್ಲಾ ಗಡಿಗೆ ತಳ್ಳಿದ್ದೂ ಆಯಿತು. ಆದರೆ, ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ್‌ (ಬಿಜಿಬಿ) ಅಧಿಕಾರಿಗಳು ಅವರನ್ನೆಲ್ಲಾ ‘ಭಾರತದಿಂದ ಬಾಂಗ್ಲಾಗೆ ನುಸುಳಿದವರು’ ಎಂದು ವಾಪಸ್‌ ಭಾರತದ ಗಡಿಯೊಳಕ್ಕೇ ಮತ್ತೆ ತಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದೇನಾಯಿತು ಗೊತ್ತಿಲ್ಲ!
ಹೌರಾ ನಿಲ್ದಾಣದಲ್ಲಿ ಎಲ್ಲಾ 59 ಮಂದಿಯನ್ನು ಇಳಿಸುತ್ತಿದ್ದಂತೆಯೇ ಕೋಲ್ಕೊತಾ ಪೊಲೀಸರು ಇವರನ್ನು ತಮ್ಮ ವಶಕ್ಕೆ ಪಡೆಯುವುದಕ್ಕಾಗಲೀ ಅಥವಾ ಗಡಿಪಾರಿನ ಮುಂದಿನ ಪ್ರಕ್ರಿಯೆಗೆ ಸಹಾಯ ಮಾಡುವುದಕ್ಕಾಗಲೀ ಒಪ್ಪಿಕೊಳ್ಳಲೇ ಇಲ್ಲ. ‘ಅಕ್ರಮ ವಲಸಿಗರು ಬಾಂಗ್ಲಾಪ್ರಜೆಗಳು ಎನ್ನುವುದಕ್ಕೆ ಮತ್ತು ಗಡಿಪಾರಿಗೆ ಕರ್ನಾಟಕದ ಯಾವ ನ್ಯಾಯಾಲಯ ಆದೇಶ ನೀಡಿದೆ? ನ್ಯಾಯಾಲಯದ ಪ್ರಕ್ರಿಯೆಯ ದಾಖಲೆಗಳನ್ನು ನೀಡಿ,’’ ಎಂದೆಲ್ಲಾ ಸ್ಥಳೀಯ ಪೊಲೀಸರು ಪ್ರಶ್ನೆಗಳನ್ನು ಕೇಳಿ ಗಡಿಪಾರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

CAA Protest: ರಾಜ್ಯದಲ್ಲೂ ಪೌರತ್ವ ಸಂಘರ್ಷದ ಕಿಚ್ಚು, 3 ದಿನ ನಿಷೇಧಾಜ್ಞೆ ಜಾರಿ

ಈ ಹಂತದಲ್ಲಿ ಬಾಂಗ್ಲಾ ನುಸುಳುಕೋರರ ಗಡಿಪಾರಿಗೆ ನೋಡಲ್‌ ಅಧಿಕಾರಿಯಾಗಿ ನೇಮಕಗೊಂಡಿದ್ದ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರನ್ನೇ ಕೋಲ್ಕತ್ತಾಗೆ ಕಳುಹಿಸಲಾಗಿತ್ತು. ಅವರು ಕೋಲ್ಕತ್ತಾ ತಲುಪಿ ಬಿಎಸ್‌ಎಫ್‌ ಅಧಿಕಾರಿಗಳ ಸುಪರ್ದಿಗೆ ಎಲ್ಲಾ 59 ಮಂದಿಯನ್ನು ಒಪ್ಪಿಸಿ ವಾಪಸ್ಸಾಗಿದ್ದಾರೆ.

ವಾಪಸ್‌ ಭಾರತಕ್ಕೇ ತಳ್ಳಿದರಾ?
ಬಿಎಸ್‌ಎಫ್‌ ಅಧಿಕಾರಿಗಳು 59 ನುಸುಳುಕೋರರನ್ನು ದೌಲತ್‌ಪುರ ಸೇರಿದಂತೆ ನಾನಾ ಭಾಗದ ಗಡಿ ಮೂಲಕ ಬಾಂಗ್ಲಾದೊಳಕ್ಕೆ ಕಳುಹಿಸಲು ಯತ್ನಿಸಿದರೆ, ಇತ್ತ ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶಿ ಅಧಿಕಾರಿಗಳು ಅವರನ್ನು ಕರೆಸಿಕೊಳ್ಳಲು ಸಿದ್ಧವಿಲ್ಲ. ಬಾಂಗ್ಲಾ ಮಾತನಾಡುವ ಭಾರತೀಯರನ್ನು ಅಕ್ರಮವಾಗಿ ತಮ್ಮ ದೇಶಕ್ಕೆ ತಳ್ಳುವ ಪ್ರಯತ್ನ ನಡೆದಿದೆ ಎಂದು ತಕರಾರು ತೆಗೆದು ಅವರನ್ನು ವಾಪಸ್‌ ಭಾರತದ ಗಡಿಯೊಳಕ್ಕೆ ತಳ್ಳಲಾಗಿದೆ.

ಪೌರತ್ವ ಕಾಯ್ದೆ: ಯು ಟಿ ಖಾದರ್ ಅಂಥವರಿಂದ ಪ್ರತಿಭಟನೆ - ಬಿಎಸ್‌ವೈ ಕಿಡಿ

ಬೆಂಗಳೂರಿನಿಂದ ಬಾಂಗ್ಲಾಗಡಿ ತಲುಪಿದ 59 ಮಂದಿಯನ್ನು ಬಾಂಗ್ಲಾ ಅಸಾರಿಗಳು ಭಾರತೀಯರು ಎಂದು ಪರಿಗಣಿಸಿ ವಾಪಸ್‌ ಭಾರತದ ಗಡಿಯೊಳಕ್ಕೇ ತಳ್ಳಿದ್ದಾರೆ. ಬಾಂಗ್ಲಾದ ದಿನ ಪತ್ರಿಕೆ ‘ಡೈಲಿ ಸ್ಟಾರ್‌’ ಈ ವಿಷಯವನ್ನು ವರದಿ ಮಾಡಿದೆ.

‘ಕಳೆದ ಕೆಲವು ವಾರಗಳಿಂದ ಭಾರತದಿಂದ 329 ಮಂದಿಯನ್ನು ಬಾಂಗ್ಲಾ ಗಡಿಯೊಳಕ್ಕೆ ತಳ್ಳುವ ಪ್ರಯತ್ನ ನಡೆದಿದೆ. ಅವರಲ್ಲಿ ಬಹಳಷ್ಟು ಮಂದಿ ಬೆಂಗಾಲಿ ಮಾತನಾಡುವ ಭಾರತೀಯರು, ಅಸ್ಸಾಂ ಮೂಲದವರು, ಕೆಲವು ಕರ್ನಾಟಕದವರು. ಅವರ ಬಳಿ ಬಾಂಗ್ಲಾ ಪ್ರಜೆಗಳು ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಅವರನ್ನೆಲ್ಲಾ ಭಾರತದಿಂದ ಅಕ್ರಮವಾಗಿ ಬಾಂಗ್ಲಾಗೆ ನುಸುಳಿದವರು ಎಂದು ಬಂಧಿಸಲಾಗಿದೆ,’ ಎಂದು ಬಾಂಗ್ಲಾದ ಗಡಿ ಭದ್ರತಾ ಪಡೆ ಅಧಿಕಾರಿಗಳು ಹೇಳಿಕೆ ನೀಡಿದ್ದನ್ನು ಅಲ್ಲಿನ ಪತ್ರಿಕೆಗಳು ವರದಿ ಮಾಡಿದೆ.

ಬೆಂಗಳೂರಿನಿಂದ ಕರೆದೊಯ್ದ ಎಲ್ಲಾ ಬಾಂಗ್ಲಾ ಪ್ರಜೆಗಳನ್ನು ಭಾರತದ ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅವರು ಮುಂದಿನ ಪ್ರಕ್ರಿಯೆ ಕೈಗೊಂಡು ಅವರನ್ನೆಲ್ಲಾ ಭಾರತದ ಗಡಿ ದಾಟಿಸಿದ್ದಾರೆ.
- ಭಾಸ್ಕರರಾವ್‌, ನಗರ ಪೊಲೀಸ್‌ ಕಮಿಷನರ್‌

ಪ್ರಕ್ರಿಯೆಯಲ್ಲಿ ಲೋಪ
- ಬಂಧಿತರು ಬಾಂಗ್ಲಾ ಪ್ರಜೆಗಳು ಎಂದು ಬಂಧಿಸಿದ ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಬಂತರು ನುಸುಳುಕೋರರು ಎಂದು ತೀರ್ಪು ನೀಡಿ, ಗಡಿಪಾರಿಗೆ ಆದೇಶ ನೀಡಬೇಕು.
- ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ರಾಯಭಾರಿ ಕಚೇರಿ ಹಂತದಲ್ಲಿ ಪತ್ರ ವ್ಯವಹಾರ ನಡೆದು, ರಾಜತಾಂತ್ರಿಕ ಪ್ರಕ್ರಿಯೆ ಪೂರ್ಣಗೊಳಿಸಬೇಕು.
- ರಾಜತಾಂತ್ರಿಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಂಗ್ಲಾದೇಶದ ಭಾರತದ ರಾಯಭಾರಿ ಕಚೇರಿ ಮೂಲಕವೇ ಗಡಿಪಾರು ಪ್ರಕ್ರಿಯೆ ಮುಂದುವರಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ