ಆ್ಯಪ್ನಗರ

ಕ್ರಿಮಿನಲ್‌ ಬೇಕೋ, ಸುಸಂಸ್ಕೃತರು ಬೇಕೋ- ಆರ್‌ಆರ್‌ ನಗರದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಪಕ್ಷಕ್ಕೆ ದ್ರೋಹ ಬಗೆದು ಮತದಾರರ ಬೆನ್ನಿಗೆ ಚೂರಿ ಹಾಕಿರುವ ಆರ್‌ಆರ್‌ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದು ಮತದಾರರಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

Vijaya Karnataka 27 Oct 2020, 8:05 pm
ಬೆಂಗಳೂರು: ‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಕ್ರಿಮಿನಲ್‌ ಹಿನ್ನೆಲೆವುಳ್ಳವರು ಶಾಸಕರಾಗಬೇಕೊ ಅಥವಾ ಶುದ್ಧ ಹಸ್ತದ ಸುಸಂಸ್ಕೃತ ಹೆಣ್ಣು ಮಗಳು ವಿಧಾನಸಭೆಗೆ ಹೋಗಬೇಕೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddaramaiah


ಕ್ಷೇತ್ರದ ವಿವಿಧ ಕಡೆಗಳಲ್ಲಿ ಮಂಗಳವಾರ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪರ ಮತಯಾಚಿಸಿದ ಅವರು, "ಪಕ್ಷಕ್ಕೆ ದ್ರೋಹ ಬಗೆದು ಮತದಾರರ ಬೆನ್ನಿಗೆ ಚೂರಿ ಹಾಕಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಾನು ಸಿಎಂ ಆಗಿದ್ದಾಗ ಮುನಿರತ್ನ, ಎಂಟಿಬಿ ನಾಗರಾಜ್‌, ಬೈರತಿ ಬಸವರಾಜು ಹಾಗೂ ಎಸ್‌ಟಿ ಸೋಮಶೇಖರ್‌ ಅವರು ದಿನ ಬೆಳಗಾದರೆ ಮನೆಗೆ ಬರುತ್ತಿದ್ದರು. ಬೆಳಗ್ಗೆ ಏಳುವಾಗ ಮತ್ತು ಸಂಜೆ ಮಲಗುವ ಮೊದಲು ಇವರ ಮುಖ ನೋಡಬೇಕಿತ್ತು. ಈ ಎಲ್ಲರೂ ಯಾರಿಗೂ ಹೇಳದೇ 25 ರಿಂದ 30 ಕೋಟಿ ಪಡೆದುಕೊಂಡು ಬಿಜೆಪಿಗೆ ಹೋದರು. ಕೊನೆಗೆ ಅಪವಾದವನ್ನು ನಾನು ಹೊತ್ತುಕೊಳ್ಳಬೇಕಾಯಿತು. ಇವರಿಂದಾಗಿ ನನಗೆ ಕೆಟ್ಟ ಹೆಸರು ಬಂತು," ಎಂದು ಹೇಳಿದರು.

"ಮುನಿರತ್ನಗೆ ಕಾಂಗ್ರೆಸ್‌ ಎರಡು ಬಾರಿ ಟಿಕೆಟ್‌ ನೀಡಿ ಶಾಸಕರನ್ನಾಗಿ ಮಾಡಿತು. ಅವರು ಈ ರೀತಿ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ ಎಂದು ಮೊದಲೇ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ. ಕ್ರಿಮಿನಲ್‌ ಚಟುವಟಿಕೆಗಳಿಗೆ ಮುನಿರತ್ನ ಹೆಸರುವಾಸಿ ಎಂದು ಹೇಳುತ್ತಾರೆ. ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ಶಾಂತಿಯುತವಾಗಿರಬೇಕು ಎಂದಾದರೆ ಕುಸುಮಾಗೆ ಮತದಾರರು ಆಶೀರ್ವಾದ ಮಾಡಬೇಕು,’’ ಎಂದು ಮನವಿ ಮಾಡಿದರು.

"ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಮಂಜೂರಾಗಿದೆ. ಅನುದಾನ ಪಡೆದುಕೊಳ್ಳಲು ಮುನಿರತ್ನ, ಬೈರತಿ ಬಸವರಾಜು ಹಾಗೂ ಸೋಮಶೇಖರ್‌ ನಡುವೆ ಭಾರಿ ಪೈಪೋಟಿ ನಡೆಯುತ್ತಿತ್ತು. ಕ್ಷೇತ್ರದಲ್ಲಿಏನಾದರೂ ಅಭಿವೃದ್ಧಿ ನಡೆದಿದ್ದರೆ ಅದು ನಮ್ಮ ಸರಕಾರ ನೀಡಿದ ಅನುದಾನದಿಂದ. ಈ ಕುರಿತು ನಾನು ಜೆಡಿಎಸ್‌ ಮತ್ತು ಬಿಜೆಪಿ ಜತೆಗೆ ಚರ್ಚೆಗೂ ಸಿದ್ಧ," ಎಂದು ಸವಾಲು ಹಾಕಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್‌, ನಜೀರ್‌ ಅಹಮದ್‌, ಶಾಸಕ ಬೈರತಿ ಸುರೇಶ್‌, ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಿ ಕುಸುಮಾ ಅವರ ಪರವಾಗಿ ಮತ ಯಾಚಿಸಿದರು.

ಸೋಂಕಿತರ ಸಾವಿಗೆ ರಾಜ್ಯವೇ ಹೊಣೆ

ಕೊರೊನಾದಿಂದ ದೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅದಕ್ಕೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರೇ ಕಾರಣ ಎಂಬ ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸದಾನಂದಗೌಡರ ಹೇಳಿಕೆ ಬಾಲಿಶ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು. ಇದರಿಂದಾಗಿಯೇ ರೈತರು ಬೀದಿಗೆ ಇಳಿಯುವಂತಾಯಿತು. ಹೀಗಾಗಿ ಮಾನ್ಪಡೆಯವರ ಸಾವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ನೇರ ಕಾರಣ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ