ಆ್ಯಪ್ನಗರ

ಸಿಲ್ಕ್‌ ಬೋರ್ಡ್‌ನಲ್ಲಿ ಸಿಗ್ನಲ್‌ರಹಿತ ಕಾರಿಡಾರ್‌ಗೆ ಮರು ಟೆಂಡರ್‌

ಹೆಚ್ಚು ದಟ್ಟಣೆಯ ಪ್ರದೇಶವಾಗಿರುವ ಸಿಲ್ಕ್‌ ಬೋರ್ಡ್‌ ವೃತ್ತದಲ್ಲಿ ಮೆಟ್ರೊ ಮಾರ್ಗದ ಭಾಗವಾದ ನಾಲ್ಕು ಪಥಗಳ ಮೇಲುರಸ್ತೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮರು ಟೆಂಡರ್‌ ಕರೆದಿದೆ.

Vijaya Karnataka Web 1 Aug 2018, 10:39 am
ಬೆಂಗಳೂರು: ಹೆಚ್ಚು ದಟ್ಟಣೆಯ ಪ್ರದೇಶವಾಗಿರುವ ಸಿಲ್ಕ್‌ ಬೋರ್ಡ್‌ ವೃತ್ತದಲ್ಲಿ ಮೆಟ್ರೊ ಮಾರ್ಗದ ಭಾಗವಾದ ನಾಲ್ಕು ಪಥಗಳ ಮೇಲುರಸ್ತೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮರು ಟೆಂಡರ್‌ ಕರೆದಿದೆ. ಚುನಾವಣಾ ನೀತಿ ಸಂಹಿತೆ ಆರಂಭಕ್ಕೆ ಮುನ್ನ ಈ ಟೆಂಡರ್‌ ಕರೆದಿದ್ದರೂ ಬಳಿಕದ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮರು ಟೆಂಡರ್‌ ಕರೆಯಲಾಗಿದೆ.
Vijaya Karnataka Web road


ಎರಡನೇ ಹಂತದಲ್ಲಿ ಸಿಲ್ಕ್‌ ಬೋರ್ಡ್‌-ಕೆ.ಆರ್‌.ಪುರ 19 ಕಿ.ಮೀ. ಉದ್ದದ (1,229 ಕೋಟಿ ರೂ. ವೆಚ್ಚ) ಮೆಟ್ರೊ ಮಾರ್ಗಕ್ಕೆ ಈ ಹಿಂದೆಯೇ ಟೆಂಡರ್‌ ಕರೆದಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ಜತೆಗೆ ಸಿಲ್ಕ್‌ ಬೋರ್ಡ್‌ ವೃತ್ತದ ಟ್ರಾಫಿಕ್‌ ಜಾಮ್‌ ಕಡಿಮೆ ಮಾಡಲು 2.84 ಕಿ.ಮೀ. ಉದ್ದದ ನಾಲ್ಕು ಪಥಗಳ ಮೇಲುರಸ್ತೆ ನಿರ್ಮಿಸಲಾಗುತ್ತಿದೆ. ಅಂದಾಜು 133.54 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಬಿಎಂಆರ್‌ಸಿಎಲ್‌, ಬಿಡಿಎ ನೆರವಿನೊಂದಿಗೆ ನಿರ್ಮಿಸಲಿದೆ. ಅತಿಯಾದ ಟ್ರಾಫಿಕ್‌ ಜಾಮ್‌ ಹೊಂದಿರುವ ಸಿಲ್ಕ್‌ ಬೋರ್ಡ್‌ ವೃತ್ತವನ್ನು ಮೇಲುರಸ್ತೆಯ ಮೂಲಕ ಸಿಗ್ನಲ್‌ ರಹಿತವಾಗಿ ಮಾಡುವುದು ಈ ಯೋಜನೆಯ ಉದ್ದೇಶ. ಒಂದೇ ಕಂಬಗಳನ್ನು (ಪಿಲ್ಲರ್‌) ಬಳಸಿಕೊಂಡು ಮೆಟ್ರೊ ಮಾರ್ಗ ಮತ್ತು ಮೇಲುರಸ್ತೆ ನಿರ್ಮಿಸುವುದು ಈ ಯೋಜನೆಯ ವಿಶೇಷ.
ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ ನಿಲ್ದಾಣದಿಂದ ನಿರ್ಮಾಣವಾಗುತ್ತಿರುವ ಮೆಟ್ರೊ ಮಾರ್ಗವು ರಾಗಿಗುಡ್ಡದ ಮೂಲಕ ಬಿಟಿಎಂ ಲೇಔಟ್‌ ಕಡೆ ಹೋಗಲಿದೆ. ಇದೇ ಭಾಗದಲ್ಲಿ ಕೆ.ಆರ್‌.ಪುರ-ಸಿಲ್ಕ್‌ ಬೋರ್ಡ್‌ ಮೆಟ್ರೊ ಯೋಜನೆ ಹಾಗೂ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೊ ಮಾರ್ಗದ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಹಲವು ಆಧಾರ ಕಂಬಗಳನ್ನು ನಿರ್ಮಿಸಿ, ನೆಲಮಟ್ಟದಿಂದ 8 ಮೀಟರ್‌ ಎತ್ತರದಲ್ಲಿ ಮೇಲುರಸ್ತೆ ಹಾಗೂ 16 ಮೀಟರ್‌ ಎತ್ತರದಲ್ಲಿ ಮೆಟ್ರೊ ಮಾರ್ಗ ನಿರ್ಮಿಸಲಾಗುತ್ತದೆ. ರಾಗಿಗುಡ್ಡದಿಂದ ನಿರ್ಮಾಣವಾಗಲಿರುವ ಮೇಲುರಸ್ತೆಯು ಸಿಲ್ಕ್‌ ಬೋರ್ಡ್‌ ಬಳಿ ಎರಡು ಪಥವಾಗಿ ಮುಂದುವರಿಯಲಿದೆ. ಇದರಲ್ಲಿ ಒಂದು ಪಥವು ಎಚ್‌ಎಸ್‌ಆರ್‌ ಲೇಔಟ್‌ ಕಡೆ ಹೋಗಿ ನೆಲಮಟ್ಟದ ರಸ್ತೆಗೆ ಜೋಡಣೆಯಾಗಲಿದೆ. ಮತ್ತೊಂದು ಪಥವು ಈಗ ಇರುವ ಮೇಲುರಸ್ತೆಗೆ ಜೋಡಣೆಯಾಗಿ ಎಚ್‌ಎಸ್‌ಆರ್‌ ಲೇಔಟ್‌ಗೆ ಹೋಗಿ ನೆಲಮಟ್ಟದ ರಸ್ತೆಗೆ ಜೋಡಣೆಯಾಗಲಿದೆ. ಮತ್ತೊಂದು ಪಥವು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಈ ಎಲ್ಲ ಪಥಗಳು ಸಿಗ್ನಲ್‌ ಮುಕ್ತವಾಗಿರಲಿವೆ.

ಸಿಲ್ಕ್‌ ಬೋರ್ಡ್‌-ಕೆ.ಆರ್‌.ಪುರ ಮೆಟ್ರೊ ಯೋಜನೆಗೆ ಒಟ್ಟು 4,202 ಕೋಟಿ ರೂ. ಖರ್ಚಾಗಲಿದ್ದು, 13 ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಮೆಟ್ರೊ ಮಾರ್ಗದ ಯೋಜನೆಗೆ ಹಿಂದೆಯೇ ಟೆಂಡರ್‌ ಆಹ್ವಾನಿಸಲಾಗಿತ್ತು. ಇದನ್ನು ಮೂರು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದೆ. ಸಿಲ್ಕ್‌ಬೋರ್ಡ್‌-ಬೆಳ್ಳಂದೂರು ಮಾರ್ಗವು 427.29 ಕೋಟಿ ರೂ.ನಲ್ಲಿ, ಬೆಳ್ಳಂದೂರು-ದೊಡ್ಡನೆಕ್ಕುಂದಿ ಮಾರ್ಗವು 416 ಕೋಟಿ ರೂ. ವೆಚ್ಚದಲ್ಲಿ ಹಾಗೂ ದೊಡ್ಡನೆಕ್ಕುಂದಿ-ಕೆ.ಆರ್‌.ಪುರ ಮಾರ್ಗವು 386 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಇಂಟರ್‌ಚೇಂಜ್‌ ನಿಲ್ದಾಣ

ಸಿಲ್ಕ್‌ ಬೋರ್ಡ್‌ನಲ್ಲಿ 4 ಸಾವಿರ ಚದರ ಮೀಟರ್‌ ವಿಸ್ತೀರ್ಣದ ಇಂಟರ್‌ಚೇಂಜ್‌ ನಿಲ್ದಾಣ ಬರಲಿದೆ. 135 ಮೀಟರ್‌ ಉದ್ದವಿರುವ ಈ ನಿಲ್ದಾಣವು ನೆಲದಿಂದ 16.9 ಮೀಟರ್‌ ಎತ್ತರದಲ್ಲಿ ನಿರ್ಮಾಣವಾಗಲಿದೆ. ಈ ನಿಲ್ದಾಣದಿಂದ ಪ್ರತಿ ದಿನ 1.42 ಲಕ್ಷ ಜನರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ. ಮೆಜೆಸ್ಟಿಕ್‌, ಜಯನಗರ ಮೆಟ್ರೊ ನಿಲ್ದಾಣಗಳಿಂದ ಬರುವ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ರೈಲು ಬದಲಿಸಿ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಬಹುದು. ಕೆ.ಆರ್‌.ಪುರದಿಂದ ಬರುವವರು ಕೂಡಾ ಇಲ್ಲಿ ರೈಲು ಬದಲಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ