ಆ್ಯಪ್ನಗರ

ಸಿರ್ಸಿ ಮೇಲು ರಸ್ತೆಯಲ್ಲಿ ಮರು ಡಾಂಬರೀಕರಣ ಆರಂಭ

ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲುರಸ್ತೆ ದುರಸ್ತಿ ಕಾಮಗಾರಿಯು ಶುಕ್ರವಾರ ರಾತ್ರಿ ಆರಂಭವಾಯಿತು. ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ಪಾಶ್ರ್ವದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

Vijaya Karnataka 29 Dec 2018, 5:00 am
ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲುರಸ್ತೆ ದುರಸ್ತಿ ಕಾಮಗಾರಿಯು ಶುಕ್ರವಾರ ರಾತ್ರಿ ಆರಂಭವಾಯಿತು. ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ಪಾಶ್ರ್ವದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
Vijaya Karnataka Web 35059E3E-3C06-4E21-B2C9-2C51B766FD30


40 ದಿನಗಳ ಕಾಮಗಾರಿ ನಡೆಯಲಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮೊದಲಿಗೆ ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆ ಕಡೆ ಸಾಗುವ ಮಾರ್ಗದಲ್ಲಿ ಕಾಮಗಾರಿ ಶುರು ಮಾಡಲಾಗಿದ್ದು, ರಸ್ತೆ ಬಂದ್‌ ಮಾಡಲಾಗಿದೆ. ಪುರಭವನದಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಮೇಲುರಸ್ತೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 3ರಿಂದ ಮರು ದಿನ ಬೆಳಗ್ಗೆ 6ರವರೆಗೆ ಟೌನ್‌ಹಾಲ್‌ನಿಂದ ಮೈಸೂರು ರಸ್ತೆ ಕಡೆ ತೆರಳುವ ವಾಹನಗಳಿಗೆ ಮೇಲುರಸ್ತೆ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಪುರಭವನದತ್ತ ಬರುವ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಶುಕ್ರವಾರ ರಾತ್ರಿ ಗುಡ್ಡದಹಳ್ಳಿ ಮತ್ತು ಪುರಭವನದ ಕಡೆ ಮೇಲುರಸ್ತೆ ಪ್ರವೇಶ ದ್ವಾರದಿಂದ ಹಿಂದಕ್ಕೆ 80 ಅಡಿ ಉದ್ದ ರಸ್ತೆ ವಿಭಜಕಗಳನ್ನು ತೆರವುಗೊಳಿಸಲಾಯಿತು. ಶನಿವಾರ ಬೆಳಗ್ಗೆಯಿಂದ ಮಿಲ್ಲಿಂಗ್‌ ಯಂತ್ರದ ಮೂಲಕ 2 ಇಂಚು ಡಾಂಬರು ಪದರ ತೆಗೆಯುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ.

''ಡಾಂಬರಿನ ಒಂದು ಪದರ ತೆಗೆದು, ಮರು ಡಾಂಬರೀಕರಣ ಮಾಡಲಾಗುವುದು. 40 ದಿನದಲ್ಲಿ ಕೆಲಸ ಮುಗಿಸಲು ಉದ್ದೇಶಿಸಲಾಗಿದೆ. ಸಂಜೆಯ ಬಳಿಕ ನಗರದಿಂದ ಹೊರಹೋಗುವ ವಾಹನಗಳ ಸಂಖ್ಯೆ ಜಾಸ್ತಿ. ಹೀಗಾಗಿ, ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಮಧ್ಯಾಹ್ನ 3ರಿಂದ ಮರುದಿನ ಬೆಳಗ್ಗೆ 6ರವರೆಗೆ ನಿರ್ಬಂಧಿಸಲಾಗಿದೆ,'' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪರ್ಯಾಯ ಮಾರ್ಗಗಳು:
* ಬಸವನಗುಡಿ, ಗಾಂಧಿಬಜಾರ್‌, ಹನುಮಂತನಗರ, ಶ್ರೀನಗರ ಕಡೆ ತೆರಳುವವರು ಹಡ್ಸನ್‌ ವೃತ್ತದಿಂದ ದೇವಾಂಗ ಸಮಾಜ ರಸ್ತೆ, ಲಾಲ್‌ಬಾಗ್‌ ಮುಖ್ಯರಸ್ತೆ, ಕೃಂಬಿಗಲ್‌ ರಸ್ತೆಯಲ್ಲಿ ಸಾಗಿ ಲಾಲ್‌ಬಾಗ್‌ ಪಶ್ಚಿಮ ದ್ವಾರದ ಎದುರಿನ ವಾಣಿವಿಲಾಸ್‌ ರಸ್ತೆ ಮಾರ್ಗವಾಗಿ ಸಂಚರಿಸಬಹುದು.
* ಚಾಮರಾಜಪೇಟೆ, ಬ್ಯಾಟರಾಯಪುರ, ವಿಜಯನಗರ, ಮೈಸೂರು ರಸ್ತೆ ಕಡೆ ಹೋಗುವವರು ಪುರಭವನ, ಎನ್‌.ಆರ್‌.ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ ಮಾರ್ಗವಾಗಿ ಬಂದು, ಅಯ್ಯಪ್ಪ ದೇವಸ್ಥಾನದ ಬಳಿ ಬಲಕ್ಕೆ ತಿರುಗಿ ಟಿಪ್ಪು ಸುಲ್ತಾನ್‌ ಅರಮನೆ ರಸ್ತೆ, ರಾಯನ್‌ ವೃತ್ತದ ಮೂಲಕ ತೆರಳಬಹುದು.
* ಟೌನ್‌ಹಾಲ್‌ ಕಡೆಯಿಂದ ಬರುವ ವಾಹನಗಳು ಮೇಲುರಸ್ತೆಯ ಕೆಳಭಾಗದ ಮೂಲಕ ಕೆ.ಆರ್‌.ಮಾರುಕಟ್ಟೆ, ಬ್ರಿಯಾಂಡ್‌ ವೃತ್ತದ ಮಾರ್ಗವಾಗಿ ಮೈಸೂರು ರಸ್ತೆ ಕಡೆ ಸಂಚರಿಸಬಹುದು. ಬ್ರಿಯಾಂಡ್‌ ವೃತ್ತದಲ್ಲಿ ಎಡಕ್ಕೆ ತಿರುಗಿ ರಾಯನ್‌ ವೃತ್ತದ ಮೂಲಕ ಚಾಮರಾಜಪೇಟೆ, ಬಸವನಗುಡಿ, ಶ್ರೀನಗರ, ಪ್ಯಾಲೇಸ್‌ ಗುಟ್ಟಹಳ್ಳಿ ಕಡೆ ತೆರಳಬಹುದು.
* ವಿಧಾನಸೌಧ, ಮೆಜೆಸ್ಟಿಕ್‌ನಿಂದ ಚಾಮರಾಜಪೇಟೆ, ಮೈಸೂರು ರಸ್ತೆ ಕಡೆ ತೆರಳುವವರು ಕಾಟನ್‌ಪೇಟೆ ಮುಖ್ಯ ರಸ್ತೆ, ಬ್ರಿಯಾಂಡ್‌ ವೃತ್ತದ ಮೂಲಕ ಸಾಗಬಹುದು.
* ಮೈಸೂರು ರಸ್ತೆ, ಬ್ಯಾಟರಾಯನಪುರ, ಗುಡ್ಡದಹಳ್ಳಿ ಕಡೆಯಿಂದ ಮೆಜೆಸ್ಟಿಕ್‌ಗೆ ತೆರಳುವವರು ಗೂಡ್ಸ್‌ ಶೆಡ್‌ ರಸ್ತೆ ಮೂಲಕ ಸಂಚರಿಸಬಹುದು. ಇಲ್ಲವೇ ಮೈಸೂರು ರಸ್ತೆ ವೃತ್ತದಲ್ಲಿ ಎಡಕ್ಕೆ ತಿರುಗಿ ಬಿನ್ನಿಮಿಲ್‌, ಗೂಡ್ಸ್‌ಶೆಡ್‌ ರಸ್ತೆ ಮಾರ್ಗವಾಗಿ ತೆರಳಬಹುದು.
* ಮೈಸೂರು ರಸ್ತೆ ಕಡೆಯಿಂದ ಕೆ.ಆರ್‌.ಮಾರುಕಟ್ಟೆ, ಪುರಭವನದ ಕಡೆ ತೆರಳುವವರು ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ಸಂಚರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ