ಆ್ಯಪ್ನಗರ

ಲೆಫ್ಟ್, ರೈಟ್ ಅಲ್ಲದ ನೇರ ಮನಸ್ಥಿತಿ ಇರುವವರನ್ನು‌ ಪಠ್ಯ ಪುಸ್ತಕ ಸಮಿತಿಗೆ ನೇಮಕ ಮಾಡಿ: ನಂಜಾವಧೂತ ಸ್ವಾಮೀಜಿ

karnataka textbook row: ಕುವೆಂಪು, ಕೆಂಪೇಗೌಡ, ಬಸವಣ್ಣ ಅಂಬೇಡ್ಕರ್ ಅವರಿಗೆ ಬಹಳಷ್ಟು ದಶಕಗಳಿಂದ ಅವಮಾನ ಆಗುತ್ತಾ ಬಂದಿದೆ. ಆದರೆ ಈ ಬಾರಿ ದೊಡ್ಡ ರೂಪ ಪಡೆಯಿತು. ಈ ನಿಟ್ಟಿನಲ್ಲಿ ಪಠ್ಯ ಪರಿಷ್ಕರಣೆ ಸಮಿತಿಗೆ ನೇಮಿಸಬೇಕಾದರೆ, ವಿಶಾಲ ಮನಸ್ಸಿನ, ಆಳವಾದ ಅಧ್ಯಯನ ಶೀಲರನ್ನು, ಲೆಫ್ಟ್ -ರೈಟ್ ಸಿದ್ದಾಂತ ಇಲ್ಲದ ನೇರ ಮನಸ್ಥಿತಿ ಇರುವರನ್ನು‌ ಪಠ್ಯ ಪುಸ್ತಕ ಸಮಿತಿಗೆ ನೇಮಕ ಮಾಡಬೇಕು ಎಂದು ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 27 Jun 2022, 2:31 pm
ಬೆಂಗಳೂರು: ಲೆಫ್ಟ್, ರೈಟ್ ಅಲ್ಲದ ನೇರ ಮನಸ್ಥಿತಿ ಇರುವರನ್ನು‌ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.
Vijaya Karnataka Web Nanjavadutha-Swamiji


ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ 513 ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪರೋಕ್ಷವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕುವೆಂಪು, ಕೆಂಪೇಗೌಡ, ಬಸವಣ್ಣ ಅಂಬೇಡ್ಕರ್ ಅವರಿಗೆ ಬಹಳಷ್ಟು ದಶಕಗಳಿಂದ ಅವಮಾನ ಆಗುತ್ತಾ ಬಂದಿದೆ. ಆದರೆ ಈ ಬಾರಿ ದೊಡ್ಡ ರೂಪ ಪಡೆಯಿತು. ಈ ನಿಟ್ಟಿನಲ್ಲಿ ಪಠ್ಯ ಪರಿಷ್ಕರಣೆ ಸಮಿತಿಗೆ ನೇಮಿಸಬೇಕಾದರೆ, ವಿಶಾಲ ಮನಸ್ಸಿನ, ಆಳವಾದ ಅಧ್ಯಯನ ಶೀಲರನ್ನು, ಲೆಫ್ಟ್ -ರೈಟ್ ಸಿದ್ದಾಂತ ಇಲ್ಲದ ನೇರ ಮನಸ್ಥಿತಿ ಇರುವರನ್ನು‌ ಪಠ್ಯ ಪುಸ್ತಕ ಸಮಿತಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಹೀಗಾಗದಿದ್ದಲ್ಲಿ ಅವರ ವಿಲಕ್ಷಣಗಳನ್ನು ನೋಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದಕ್ಕೆ ನಾಡಧ್ವಜಕ್ಕೆ ಹೋಲಿಕೆ ಮಾಡುತ್ತಾರೆ ಎಂದರೆ ಎಷ್ಟು ನೋವು ತರುವ ಸಂಗತಿ ಎಂದ ನಂಜಾವಧೂತ ಸ್ವಾಮೀಜಿ, ಸರ್ಕಾರ ಏನು‌ ಕೊಡುತ್ತದೆ ಅದನ್ನು ಮಕ್ಕಳು ಕಲಿಯಬೇಕಾಗಿದೆ. ಸರ್ಕಾರದ ಮಾನದಂಡದಂತೆ ಮಕ್ಕಳು ಓದಬೇಕಾಗಿದೆ. ತಪ್ಪು ಓದಿ ತಪ್ಪು ಉತ್ತರವನ್ನು ಮಕ್ಕಳಿಂದ ಬರಿಸಬಾರದು. ಬಸವಣ್ಣ, ಅಂಬೇಡ್ಕರ್ ಅವರಿಗೆ ಗೌರವ ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು.
ಚಕ್ರತೀರ್ಥ ಸಮಿತಿ ಪರಿಷ್ಕಾರ ಮಾಡಿದ ಪಠ್ಯ ವಾಪಸ್‌ ಪಡೆಯಿರಿ: ಸಿಎಂ ಬೊಮ್ಮಾಯಿಗೆ ದೇವೇಗೌಡರಿಂದ ಪತ್ರ
ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಿ
ಇದೇ ಸಂದರ್ಭದಲ್ಲಿ ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಿ ಎಂದು ಆಗ್ರಹಿಸಿದ ನಂಜಾವಧೂತ ಸ್ವಾಮೀಜಿ, ಇಷ್ಟೇ ಅಲ್ಲ, ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕೆಂಪೇಗೌಡರ ಕುರಿತಾದ ಒಂದು ಪಠ್ಯವನ್ನು‌ ಸೇರಿಸಬೇಕು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮ್ಯೂಸಿಯಂ ಅಥವಾ ಲೈಬ್ರರಿ ಮಾಡಿ ಅದರ ಮೇಲೆ ‌ಕೆಂಪೇಗೌಡ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕೆಂಪೇಗೌಡರ ಇತಿಹಾಸ ಓದಿದರೆ ಬುದ್ಧ, ಬಸವ, ಅಂಬೇಡ್ಕರ್ ಕನಸನ್ನು ಅರ್ಥ ಮಾಡಿಕೊಂಡ ಮಹಾನ್ ರಾಜನಾಗಿದ್ದವರು. ಈ‌ ನಿಟ್ಟಿನಲ್ಲಿ ವಿಧಾನಸೌಧದ ಯಾವುದಾದರೊಂದು ದ್ವಾರದಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಿ ಎಂದು ಮನವಿ ಮಾಡಿದ ಸ್ವಾಮೀಜಿ, ಬಸವಣ್ಣ ಚಿಂತನೆ ಬೇರೆ ಅಲ್ಲ ಕೆಂಪೇಗೌಡ ಆದರ್ಶ ಬೇರೆಯಲ್ಲ. ಬಸವಣ್ಣ ನೆನೆದರೆ ಇನ್ನೊಂದು ರೀತಿಯಲ್ಲಿ ಕೆಂಪೇಗೌಡ ಅವರನ್ನು ನೆನೆದ ಹಾಗೆ ಎಂದು ವ್ಯಾಖ್ಯಾನಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಸರಕಾರ ವಿಷ ಉಣಿಸುತ್ತಿದೆ: ರಮೇಶ್ ಕುಮಾರ್
ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಸರಿಯಾದ ರೂಪ ಪಡೆದಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ರಿವ್ಯೂ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ‌ ಅದರ ವೇಗ ಹೆಚ್ಚಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ ಅವರು, ಒಕ್ಕಲಿಗ ಹಾಗೂ ವೀರಶೈವ ಸಮುದಾಯವನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಒತ್ತು ಕೊಡಬಾರದು. ಸಣ್ಣ ಪುಟ್ಟ ಅಸಮಾಧಾನ ಬಗೆಹರಿಸುವ ನಿಟ್ಟಿನಲ್ಲಿ ಸೂಚನೆ ನೀಡಬೇಕು ಹಾಗೂ ಸಮುದಾಯದ ಉಪ ಜಾತಿಗಳ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ