ಆ್ಯಪ್ನಗರ

ಮೆಟ್ರೊ ಎರಡನೇ ಹಂತಕ್ಕೆ 216 ಬೋಗಿ ಖರೀದಿಗೆ ಟೆಂಡರ್‌ ಆಹ್ವಾನ

'ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆಗಾಗಿ 216 ಬೋಗಿಗಳನ್ನು ಖರೀದಿಸಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದ್ದು, 3 ವರ್ಷ 11 ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲಿದೆ.

Vijaya Karnataka 26 Feb 2019, 5:00 am
ಬೆಂಗಳೂರು: 'ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆಗಾಗಿ 216 ಬೋಗಿಗಳನ್ನು ಖರೀದಿಸಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದ್ದು, 3 ವರ್ಷ 11 ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲಿದೆ.
Vijaya Karnataka Web metro doolu


72 ಕಿ.ಮೀ. ಉದ್ದದ ಎರಡನೇ ಹಂತದ ಯೋಜನೆಯಲ್ಲಿ ಕಾರ್ಯಾಚರಿಸಲು 216 ಬೋಗಿಗಳನ್ನು (6 ಬೋಗಿಯ 36 ರೈಲುಗಳು) ಖರೀದಿಸಲಾಗುತ್ತಿದೆ. ಒಂದನೇ ಹಂತದಲ್ಲಿ ಮೂರು ಬೋಗಿಯ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿಸಲು ಬಿಇಎಂಎಲ್‌ನಿಂದ 150 ಬೋಗಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಬೋಗಿಗೆ 10 ಕೋಟಿ ರೂ. ಅಂದಾಜು ವೆಚ್ಚವೆಂದು ಲೆಕ್ಕ ಹಾಕಲಾಗಿದೆ. ಎರಡನೇ ಹಂತದಲ್ಲೂ ಇದೇ ವೆಚ್ಚವನ್ನು ಪರಿಗಣಿಸಿ ಬೋಗಿ ಖರೀದಿ ನಡೆಯಲಿದೆ.

2 ನೇ ಹಂತದಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿ-ಕೆಂಗೇರಿ ಹಾಗೂ ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌ ಮಾರ್ಗಗಳು ಮೊದಲು ಸಂಚಾರಕ್ಕೆ ಮುಕ್ತವಾಗಲಿವೆ. ಮೈಸೂರು ರಸ್ತೆಯ ಮೆಟ್ರೊ ಕಾಮಗಾರಿ ಶೇ.81 ರಷ್ಟು ಮುಗಿದಿದೆ. ಕನಕಪುರ ರಸ್ತೆಯ ಮೆಟ್ರೊ ಕಾಮಗಾರಿ ಶೇ.75 ರಷ್ಟು ಪೂರ್ಣಗೊಂಡಿದೆ. 2020-2021ರಲ್ಲಿ ಈ ಮಾರ್ಗಗಳಲ್ಲಿ ರೈಲು ಸೇವೆ ಆರಂಭವಾಗಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಬೋಗಿಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಕಡಿಮೆ ದರ ಹಾಗೂ ಉತ್ತಮ ತಂತ್ರಜ್ಞಾನ ಹೊಂದಿರುವ ಬೋಗಿಗಳನ್ನು ಉತ್ಪಾದಿಸುವ ಕಂಪನಿ ಜತೆ ಒಪ್ಪಂದ ನಡೆದ ಬಳಿಕ ಹಂತಹಂತವಾಗಿ ಬೋಗಿ ಪಡೆಯಲಾಗುತ್ತದೆ. 3 ವರ್ಷ 11 ತಿಂಗಳಲ್ಲಿ ಎಲ್ಲ ಬೋಗಿಗಳನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಮೇನಲ್ಲಿ ಪ್ರಕ್ರಿಯೆ ಆರಂಭ: ಟೆಂಡರ್‌ ಪ್ರಕ್ರಿಯೆ ಮೇ ತಿಂಗಳಲ್ಲಿ ಮುಗಿಯಲಿದೆ. ನಂತರ ಅರ್ಜಿಗಳನ್ನು ಪರಿಶೀಲಿಸಿ ಕಡಿಮೆ ದರದಲ್ಲಿ ಬೋಗಿ ಪೂರೈಸುವ ಕಂಪನಿಯನ್ನು ಆರಿಸಲಾಗುತ್ತದೆ. ಎರಡನೇ ಹಂತದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಇಷ್ಟೇ ರೈಲುಗಳು ಸಾಲುವುದಿಲ್ಲ. ಒಂದನೇ ಹಂತದಂತೆ ಈ ಹಂತದಲ್ಲೂ ಆರು ಬೋಗಿಗಳ ರೈಲುಗಳನ್ನು ಓಡಿಸಲಾಗುತ್ತದೆ. ಹಂತಹಂತವಾಗಿ ಮತ್ತಷ್ಟು ಬೋಗಿಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯಲಿದೆ.

ಮೂರು ಬೋಗಿಗಳ 50 ರೈಲುಗಳು ಬಿಎಂಆರ್‌ಸಿಎಲ್‌ ಬಳಿ ಇದೆ. ಇದರಲ್ಲಿ ಐದು ರೈಲುಗಳನ್ನು ಆರು ಬೋಗಿ ರೈಲಾಗಿ ಪರಿವರ್ತಿಸಲಾಗಿದೆ. ಎರಡನೇ ಹಂತದ ಮಾರ್ಗಗಳು ಸಂಚಾರಕ್ಕೆ ಮುಕ್ತವಾದಾಗ ಹೊಸ ಬೋಗಿಗಳು ಹಸ್ತಾಂತರವಾಗುವುದು ತಡವಾದರೆ, ಒಂದನೇ ಹಂತದ ರೈಲುಗಳನ್ನೇ ಬಳಸಿಕೊಳ್ಳಲಾಗುತ್ತದೆ.

ನಾಯಂಡಹಳ್ಳಿ-ಕೆಂಗೇರಿ ಮಾರ್ಗವು ಈಗ ಇರುವ ಮೈಸೂರು ರಸ್ತೆ ನಿಲ್ದಾಣದ ಮುಂದುವರಿದ ಭಾಗವಾಗಿದೆ. ಬೈಯ್ಯಪ್ಪನಹಳ್ಳಿ ಡಿಪೊದಿಂದ ಹೊರಡುವ ರೈಲುಗಳು ಮೈಸೂರು ರಸ್ತೆ ನಿಲ್ದಾಣದವರೆಗೆ ಕಾರ್ಯಾಚರಿಸುತ್ತಿದೆ. ಹೊಸ ಮಾರ್ಗ ಲೋಕಾರ್ಪಣೆಯಾಗದ ಬಳಿಕ ರೈಲಿನ ಮಾರ್ಗವೂ ಉದ್ದವಾಗಲಿದೆ. ಈ ರೈಲು ಅದೇ ಮಾರ್ಗದಲ್ಲಿ ವಾಪಸ್‌ ಬರುವಾಗ ತಡವಾಗುತ್ತದೆ. ಹೀಗಾಗಿ ಹೆಚ್ಚುವರಿ ರೈಲುಗಳು ಬೇಕಾಗುತ್ತದೆ.

ಎರಡು ಬಗೆಯ ಬೋಗಿಗಳು: ಸಿಗ್ನಲಿಂಗ್‌ ತಂತ್ರಜ್ಞಾನದ ಆಧಾರದಲ್ಲಿ ಎರಡು ಬಗೆಯ ರೈಲು ಬೋಗಿಗಳನ್ನು ಖರೀದಿಸಲಾಗುತ್ತಿದೆ. ಕಮ್ಯುನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌ (ಸಿಬಿಟಿಸಿ) ತಂತ್ರಜ್ಞಾನ ಹೊಂದಿರುವ 90 ಬೋಗಿ ಹಾಗೂ ಡಿಸ್ಟ್ಯಾನ್ಸ್‌ ಟು ಗೊ ಸಿಗ್ನಲಿಂಗ್‌ (ಡಿಟಿಜಿ) ತಂತ್ರಜ್ಞಾನ ಹೊಂದಿರುವ 126 ಬೋಗಿಗಳ ಖರೀದಿ ನಡೆಯಲಿದೆ.

ಸಿಬಿಟಿಸಿ ತಂತ್ರಜ್ಞಾನದಲ್ಲಿ ಎರಡು ರೈಲುಗಳ ನಡುವಿನ ಅಂತರವನ್ನು ವಯರ್‌ಲೆಸ್‌ ಸಂಪರ್ಕ ಮೂಲಕ ಸಂವಹನ ಮಾಡಲಾಗುತ್ತದೆ. ರೈಲಿನ ಲೋಕೊ ಪೈಲೆಟ್‌ಗೆ ಮುಂದೆ ಹೋಗುತ್ತಿರುವ ರೈಲು ಎಷ್ಟು ದೂರದಲ್ಲಿದೆ ಎಂದು ನಿರಂತರವಾಗಿ ಮಾಹಿತಿ ದೊರೆಯುತ್ತಿರುತ್ತದೆ. ಡಿಟಿಜಿ ತಂತ್ರಜ್ಞಾನದ ಬೋಗಿ ಹಳಿಯಲ್ಲಿ ಬಳಸುವ ಸಿಗ್ನಲ್‌ನಿಂದ ಕಾರ್ಯನಿರ್ವಹಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ