ಆ್ಯಪ್ನಗರ

ಬಸ್‌ಗೆ ಡಿಕ್ಕಿ ಹೊಡೆದು ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

ಆಟೋ ಚಾಲಕನೊಬ್ಬ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದದ್ದಲ್ಲದೆ, ಬಸ್‌ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಬಸ್‌ನ ಗಾಜು ಜಖಂಗೊಳಿಸಿರುವ ಘಟನೆ ಬೆಳ್ಳಂದೂರು ಬಳಿಯ ಕೈಕೊಂಡನಹಳ್ಳಿಯಲ್ಲಿ ನಡೆದಿದೆ.

Vijaya Karnataka 10 Jun 2018, 5:00 am
ಬೆಂಗಳೂರು: ಆಟೋ ಚಾಲಕನೊಬ್ಬ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದದ್ದಲ್ಲದೆ, ಬಸ್‌ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಬಸ್‌ನ ಗಾಜು ಜಖಂಗೊಳಿಸಿರುವ ಘಟನೆ ಬೆಳ್ಳಂದೂರು ಬಳಿಯ ಕೈಕೊಂಡನಹಳ್ಳಿಯಲ್ಲಿ ನಡೆದಿದೆ.
Vijaya Karnataka Web bmtc


ಬಿಎಂಟಿಸಿ ಬಸ್‌ ಚಾಲಕ ಅಶೋಕ್‌ ಕುಮಾರ್‌ ಮತ್ತು ನಿರ್ವಾಹಕ ಮಲ್ಲಿಕಾರ್ಜುನ ಹಲ್ಲೆಗೊಳಗಾದವರು. ಆರೋಪಿ ಆಟೋ ಚಾಲಕ ಬಸವ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.6 ರಂದು ಸಂಜೆ 4.20ರ ಸುಮಾರಿಗೆ 342ಎಫ್‌ ಮಾರ್ಗದ ಬಿಎಂಟಿಸಿ ಬಸ್‌ ಮೆಜೆಸ್ಟಿಕ್‌ನಿಂದ ಸರ್ಜಾಪುರಕ್ಕೆ ತೆರಳುತ್ತಿತ್ತು. ಕೈಕೊಂಡನಹಳ್ಳಿ ಬಸ್‌ ನಿಲ್ದಾಣದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಆಟೋ, ಬಸ್‌ಗೆ ಡಿಕ್ಕಿ ಹೊಡಿದಿದೆ. ಡಿಕ್ಕಿಯ ಸದ್ದು ಕೇಳಿದ ನಿರ್ವಾಹಕ ಮಲ್ಲಿಕಾರ್ಜುನ ಕೆಳಗೆ ಇಳಿದು ಏನಾಗಿದೆ ಎಂದು ನೋಡಲು ಮುಂದಾಗಿದ್ದಾರೆ.

ಈ ವೇಳೆ ಆಟೋದಿಂದ ಇಳಿದ ಚಾಲಕ ಮನಬಂದಂತೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ದೊಡ್ಡ ಕಲ್ಲಿನಿಂದ ಬಸ್‌ನ ಗಾಜುಗಳನ್ನು ಒಡೆದು ಹಾಕಿದ. ಈ ವೇಳೆ ಬಸ್‌ನಲ್ಲಿದ್ದ ಸುಮಾರು 60 ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಹೆದರಿದ ಬಸ್‌ ಚಾಲಕ ಬಸ್‌ನಿಂದ ಕೆಳಗೆ ಇಳಿದಿರಲಿಲ್ಲ. ಈ ವೇಳೆ ದೊಡ್ಡ ಕಲ್ಲಿನಿಂದ ಬಸ್‌ನ ಮುಂಭಾಗದ ಗಾಜಿಗೆ ಹೊಡೆದಾಗ ಚಾಲಕನಿಗೂ ಗಾಯಗಳಾಗಿವೆ. ದುಷ್ಕೃತ್ಯದ ಬಳಿಕ ಆಟೋ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಸಂಚಾರ ಪೊಲೀಸ್‌ ಪೇದೆಯೊಬ್ಬರು ಬಸ್‌ ಚಾಲಕ ಮತ್ತು ನಿರ್ವಾಹಕನನ್ನು ಬೆಳ್ಳಂದೂರು ಕಾನೂನು ಸುವ್ಯವಸ್ಥೆ ಠಾಣೆಗೆ ಕರೆದೊಯ್ದಿದ್ದಾರೆ.

ಆಚೋ ಚಾಲಕ ಹಲ್ಲೆ ನಡೆಸಿ, ಬಸ್‌ನ ಗಾಜುಗಳನ್ನು ಪುಡಿ-ಪುಡಿ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಯಾವೊಬ್ಬ ಪ್ರಯಾಣಿಕನೂ ರಕ್ಷಣೆಗೆ ಧಾವಿಸಲಿಲ್ಲ ಎಂದು ಚಾಲಕ ಅಶೋಕ್‌ ಕುಮಾರ್‌ ತಿಳಿಸಿದರು.

ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಬೆದರಿಕೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಆರೋಪದಲ್ಲಿ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಳಾಸ ಪತ್ತೆಯಾಗಿದೆ. ತಲೆಮರೆಸಿಕೊಂಡಿರುವ ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ