ಆ್ಯಪ್ನಗರ

ಶೇ.26 ಹಿರಿಯರಿಗೆ ನಿಂದನೆಯ ಸಂಕಷ್ಟ

ಬೆಂಗಳೂರು ನಗರದಲ್ಲಿ ಶೇ.26ರಷ್ಟು ಹಿರಿಯ ನಾಗರೀಕರು ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೆಲ್ಪ್‌ಏಜ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

Vijaya Karnataka 15 Jun 2018, 10:07 am
ಬೆಂಗಳೂರು: ಬೆಂಗಳೂರು ನಗರದಲ್ಲಿ ಶೇ.26ರಷ್ಟು ಹಿರಿಯ ನಾಗರೀಕರು ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೆಲ್ಪ್‌ಏಜ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
Vijaya Karnataka Web oldage


ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನದ ಅಂಗವಾಗಿ ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಈ ವರದಿ ಬಿಡುಗಡೆ ಮಾಡಿದರು.

ಹೆಲ್ಪ್‌ ಏಜ್‌ ಇಂಡಿಯಾ ಸಂಸ್ಥೆ ದೇಶದ ಪ್ರತಿ ನಗರದಲ್ಲಿ 218 ಹಿರಿಯರಂತೆ 23 ನಗರಗಳಲ್ಲಿ ಒಟ್ಟು 5014 ಹಿರಿಯರನ್ನು ಸಮೀಕ್ಷೆ ನಡೆಸಿ ಈ ವರದಿ ಸಿದ್ದಪಡಿಸಿದೆ. ರಾಜ್ಯದಲ್ಲಿ ಮಂಗಳೂರು ನಗರದಲ್ಲಿ ಶೇ.47 ರಷ್ಟು ಹಿರಿಯರು ನಿಂದನೆಗೊಳಗಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಶೇ.26ರಷ್ಟು ಪ್ರಕರಣ ವರದಿಯಾಗಿವೆ. ಅತಿ ಕಡಿಮೆ ಶೇ.12ರಷ್ಟು ಪ್ರಕರಣಗಳು ಜಮ್ಮುವಿನಲ್ಲಿ ನಡೆಯುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೂರು ನೀಡುವುದಿಲ್ಲ

ಅಗೌರವಕ್ಕೆ ಸಂಬಂಧಿಸಿದಂತೆ ಶೇ.56ರಷ್ಟು ಮಂದಿ, ಶೇ.49ರಷ್ಟು ನಿಂದನೆ ಮತ್ತು ಶೇ.33ರಷ್ಟು ಹಿರಿಯರು ನಿರ್ಲಕ್ಷ್ಯಕ್ಕೊಳಗಾಗಿರುವುದಾಗಿ ಸಮೀಕ್ಷೆ ವೇಳೆ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ನು ಶೇ.82ರಷ್ಟು ಮಂದಿ ಹಿರಿಯರು ತಮ್ಮ ಮೇಲಾಗುವ ನಿಂದನೆ ಬಗ್ಗೆ ದೂರು ನೀಡಲು ಮುಂದಾಗಿಲ್ಲ ಎಂದು ವರದಿ ತಿಳಿಸಿದೆ.

ಹಿರಿಯರಿಗೆ ವೈಯಕ್ತಿಕ ನಿಂದನೆ ಪ್ರಮಾಣ ಶೇ.25ರಷ್ಟಿದೆ. ಮಕ್ಕಳಿಂದ ಹಿರಿಯರಿಗೆ ನಿಂದನೆ ಶೇ.52ರಷ್ಟು ಮತ್ತು ಸೊಸೆಯಂದಿರಿಂದ ಶೇ.34 ನಿಂದನೆ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಶೇ.85 ರಷ್ಟು ಮಂದಿ ಹಿರಿಯರು ಕುಟುಂಬದ ಜತೆ ವಾಸವಿದ್ದರೆ, ಶೇ.69 ರಷ್ಟು ಹಿರಿಯರ ಹೆಸರಿನಲ್ಲಿ ಮನೆಗಳಿವೆ. ನಿಂದನೆಗೆ ಒಳಗಾಗುವವರ ಪೈಕಿ ಶೇ.50ರಷ್ಟು ಮಂದಿ ಕೌಶಲವಂತರು ಮತ್ತು ವೃತ್ತಿಪರರಾಗಿದ್ದಾರೆ. ಈ ಹಿರಿಯರು ಕಳೆದ 5 ವರ್ಷಗಳಿಂದ ನಿಂದನೆಗೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕುಟುಂಬದ ಗೌರವಕ್ಕೆ ಚ್ಯುತಿ ಬರಬಾರದೆಂದು ಹಿರಿಯರು ದೂರು ನೀಡಲು ಹಿಂಜರಿಯುತ್ತಾರೆ. ಶೇ. 33 ಮಂದಿ ಹಿರಿಯರಿಗೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವಿನ ಕೊರತೆಯಿದೆ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

'ಮನಸ್ಸಿಗೆ ನೋವು ತಂದಿದೆ'

ನನ್ನ ಊರು ಮಂಗಳೂರಿನಲ್ಲಿ ಶೇ.47ರಷ್ಟು ಹಿರಿಯರ ಮೇಲೆ ನಿಂದನೆ ನಡೆಯುತ್ತಿರುವುದು ತಿಳಿದು ಅಚ್ಚರಿಯಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿ ನಗರ ಮುಂದುವರಿದಿದೆ. ಇಂತಹ ನಗರದಲ್ಲಿ ಹಿರಿಯರ ನಿಂದನೆ ಪ್ರಕರಣಗಳು ಹೆಚ್ಚಾಗಿರುವುದು ಕೇಳಿ ಮನಸ್ಸಿಗೆ ನೋವುಂಟಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಹಿರಿಯರ ನಿಂದನೆ ಪ್ರಕರಣಗಳು

ಮಂಗಳೂರು ಶೇ.47

ಅಹಮದಾಬಾದ್‌ ಶೇ.46

ಭೋಪಾಲ್‌ ಶೇ.39

ಅಮೃತ್‌ಸರ್‌ ಶೇ.35

ದಿಲ್ಲಿ ಶೇ.33

ಕಾನ್ಪುರ ಶೇ.30

ಚೆನ್ನೈ ಶೇ.27

ಬೆಂಗಳೂರು ಶೇ.26

ಹೈದರಾಬಾದ್‌ ಶೇ.24

ಕೋಲ್ಕತ್ತ ಶೇ.23

ಜಮ್ಮು ಶೇ.12

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ