ಆ್ಯಪ್ನಗರ

ಬೆಂಗಳೂರಿನ 2869 ಮನೆಗಳಲ್ಲಿ ಶೌಚಾಲಯವೇ ಇಲ್ಲ! ಬಯಲು ಬಹಿರ್ದೆಸೆ ಮುಕ್ತ ಘೋಷಣೆ ಸುಳ್ಳಾ?

ಸ್ವಚ್ಛ ಸರ್ವೇಕ್ಷಣಾ ಸರ್ವೇಯಲ್ಲಿ ಬೆಂಗಳೂರಿಗೆ ಕಳೆದ ಬಾರಿ 194ನೇ ಸ್ಥಾನ ಬಂದಿದೆ. ಇದಕ್ಕೆ ಹಲವು ಕಾರಣಗಳು ಇದೆ. ಇದಕ್ಕೆ ಪ್ರುಖ ಕಾರಣ ನಗರದ ಸಾವಿರಾರು ಮನೆಗಳಲ್ಲಿ ಶೌಚಾಲಯವಿಲ್ಲವೆಂಬುದು ಸಹ ಗಮನಾರ್ಹ.

Vijaya Karnataka 13 Aug 2019, 10:12 am
ನಾಗಪ್ಪ ನಾಗನಾಯಕನಹಳ್ಳಿ
Vijaya Karnataka Web swacch toilet


ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ನಗರಿ ಎಂದೇ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರಿನಲ್ಲಿ 2869 ಮನೆಗಳಲ್ಲಿ ಶೌಚಾಲಯಗಳೇ ಇಲ್ಲ. ಹೀಗಾಗಿ, ಬಿಬಿಎಂಪಿಯು ಸ್ವಚ್ಛ ಸರ್ವೇಕ್ಷಣಾ ಸರ್ವೇಯಲ್ಲಿ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ!

ಪಾಲಿಕೆಯ 198 ವಾರ್ಡ್‌ಗಳೂ ಬಯಲು ಬಹಿರ್ದೆಸೆ ಮುಕ್ತವಾಗಿವೆ ಎಂದು ಸ್ವಯಂ ಘೋಷಿಸಿಕೊಂಡು, 2018ರ ಡಿ. 27ರಂದು ನಡೆದ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ವಾಸ್ತವವಾಗಿ ಸಿಲಿಕಾನ್‌ ಸಿಟಿಗೆ ಈ ಸೌಭಾಗ್ಯ ಸಿಕ್ಕಿಲ್ಲ. ಇದರಿಂದಾಗಿಯೇ ಕಳೆದ ವರ್ಷ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಿಗದಿಪಡಿಸಿದ್ದ ಪೂರ್ಣ 250 ಅಂಕ ಪಡೆಯುವಲ್ಲಿ ವಿಫಲವಾಗಿ ಅಗ್ರ 50ರೊಳಗಿನ ಶ್ರೇಯಾಂಕ ಪಡೆಯುವ ಕನಸು ನುಚ್ಚು ನೂರಾಗಿತ್ತು. ಅಂತಿಮವಾಗಿ 194ನೇ ಸ್ಥಾನ ಪಡೆದುಕೊಂಡಿತು.

ಪಾಲಿಕೆಗೆ ಈವರೆಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ನೆರವು ಕೋರಿ 4466 ಅರ್ಜಿಗಳು ಬಂದಿದ್ದು, 3188ಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ 2018 ಶೌಚಾಲಯಗಳ ನಿರ್ಮಾಣ ಕಾರ್ಯವಷ್ಟೇ ಪೂರ್ಣಗೊಂಡಿದೆ. ಬಾಕಿ ಉಳಿದ 2869 ಶೌಚಾಲಯಗಳ ನಿರ್ಮಾಣ ಕಾರ್ಯ ಮುಗಿದರಷ್ಟೇ ಒಡಿಎಫ್‌ ಶ್ರೇಯಾಂಕ ಲಭಿಸಲಿದೆ. 2020ರ ಸ್ವಚ್ಛ ಸರ್ವೇಕ್ಷಣಾ ಸರ್ವೇಗಾಗಿ ಡಿಸೆಂಬರ್‌ ಅಂತ್ಯದೊಳಗೆ ದಾಖಲೆಗಳನ್ನು ಒದಗಿಸಬೇಕಿದೆ. ಹೀಗಾಗಿ, ಬಿಬಿಎಂಪಿಯು ಡಿಸೆಂಬರ್‌ ಒಳಗೆ ಬಾಕಿ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ.

ಶೇ 90ರಷ್ಟು ಗುರಿ ಮುಟ್ಟದ ಬಿಬಿಎಂಪಿ:
ಸ್ವಚ್ಛ ಭಾರತ ಮಿಷನ್‌ ಮನೆಗಳ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಶೇ 90ರಷ್ಟು ಗುರಿ ನಿಗದಿಪಡಿಸಿದೆ. ಆದರೆ, ಇದರಲ್ಲಿ ಪಾಲಿಕೆಯು ಈವರೆಗೆ ಶೇ 63ರಷ್ಟು ಪ್ರಗತಿ ಸಾಧಿಸಲಷ್ಟೇ ಸಫಲವಾಗಿದೆ. ವಾರ್ಡ್‌ನ ಪ್ರತಿ ಮನೆಗೆ ಶೌಚಾಲಯ ಸಂಪರ್ಕ ಕಲ್ಪಿಸುವುದು, ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳಾವಕಾವಿಲ್ಲದ ಕಡೆಗಳಲ್ಲಿ ಸಾರ್ವಜನಿಕ
ಶೌಚಾಲಯಗಳನ್ನು ಕಟ್ಟುವುದು, ಇವು ಬೆಳಗ್ಗೆ 4 ರಿಂದ ರಾತ್ರಿ 10ರವರೆಗೆ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಹಾಗೂ ಇವುಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಅಂಶಗಳನ್ನು ಆಧರಿಸಿ, ಒಡಿಎಫ್‌ ಮುಕ್ತವೆಂಬ ಮನ್ನಣೆ ನೀಡಲಾಗುತ್ತದೆ.

1253 ಸಹಾಯಧನ ಅರ್ಜಿ ತಿರಸ್ಕೃತ:

ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲದಿರುವುದು, ಒಂಟಿ ಮನೆ ಯೋಜನೆಯಡಿ ಸಬ್ಸಿಡಿ ಪಡೆದುಕೊಂಡಿರುವವರು ಮತ್ತೆ ನೆರವಿಗಾಗಿ ಅರ್ಜಿ ಸಲ್ಲಿಸಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಗಾಗಿ 1253 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ 15 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.

416 ಸಾರ್ವಜನಿಕ ಶೌಚಾಲಯ ನಿರ್ಮಾಣ:
ಅಗ್ರ ಶ್ರೇಯಾಂಕ ಪಡೆಯಲು ಕಸರತ್ತು ನಡೆಸುತ್ತಿರುವ ಬಿಬಿಎಂಪಿಯು, ಹೊಸದಾಗಿ 416 ಸಾರ್ವಜನಿಕ ಮತ್ತು 46 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ.

ಶೌಚಾಲಯಗಳ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ವಿನ್ಯಾಸ ಕೂಡ ಸಿದ್ಧಪಡಿಸಲಾಗುತ್ತಿದೆ. ನವ ಬೆಂಗಳೂರು ಯೋಜನೆಯಡಿ 25 ಕೋಟಿ ರೂ. ಮತ್ತು ಪಾಲಿಕೆಯ ಯೋಜನೆ ವಿಭಾಗದಿಂದ 50 ಕೋಟಿ ರೂ. ಅನುದಾನ ಲಭಿಸಿದೆ.

ಸ್ವಚ್ಛ ಭಾರತದ ಮಾನದಂಡಗಳ ಪ್ರಕಾರ ಪ್ರತಿ 100 ಪುರುಷರಿಗೆ ಒಂದು ಮತ್ತು 100 ಮಹಿಳೆಯರಿಗೆ 2 ಶೌಚಾಲಯ ಕೊಠಡಿಗಳಿರಬೇಕು. ಇದಲ್ಲದೇ ಪ್ರತಿ 7 ಕಿ.ಮೀ ಗೆ ಒಂದು ಸಾರ್ವಜನಿಕ ಶೌಚಾಲಯವಿರಬೇಕು. ಆದರೆ, ನಗರದಲ್ಲಿ 613 ಸಾರ್ವಜನಿಕ ಶೌಚಾಲಯಗಳಷ್ಟೇ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ