ಆ್ಯಪ್ನಗರ

ಬಲವಂತವಾಗಿ ಇಳಿಸಿದ್ದಕ್ಕೆ ರೊಚ್ಚಿಗೆದ್ದು ಬಿಎಂಟಿಸಿ ಬಸ್‌ಗೆ ಕಲ್ಲು ತೂರಿದ ಪ್ರಯಾಣಿಕ

ತಾನು ಇಳಿದುಕೊಳ್ಳಬೇಕಾದ ಸ್ಟಾಪ್‌ನಿಂದ ಒಂದು ಸ್ಟಾಪ್‌ ಮುಂದೆ ನಿಲ್ಲಿಸಿದರು ಎನ್ನುವ ಕಾರಣದಿಂದ ಕಿಡಿಗೇಡಿಯೊಬ್ಬ ದೊಡ್ಡ ಗಾತ್ರದ ಕಲ್ಲುಗಳನ್ನು ಬಿಎಂಟಿಸಿ ಬಸ್‌ ಮೇಲೆ ತೂರಿ ನಿರ್ವಾಹಕ ಮತ್ತು ಪ್ರಯಾಣಿಕರನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಬಗ್ಗೆ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 27 May 2019, 5:00 am
ಬೆಂಗಳೂರು : ತಾನು ಇಳಿದುಕೊಳ್ಳಬೇಕಾದ ಸ್ಟಾಪ್‌ನಿಂದ ಒಂದು ಸ್ಟಾಪ್‌ ಮುಂದೆ ನಿಲ್ಲಿಸಿದರು ಎನ್ನುವ ಕಾರಣದಿಂದ ಕಿಡಿಗೇಡಿಯೊಬ್ಬ ದೊಡ್ಡ ಗಾತ್ರದ ಕಲ್ಲುಗಳನ್ನು ಬಿಎಂಟಿಸಿ ಬಸ್‌ ಮೇಲೆ ತೂರಿ ನಿರ್ವಾಹಕ ಮತ್ತು ಪ್ರಯಾಣಿಕರನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಬಗ್ಗೆ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web youth pelted stone towards bmtc bus
ಬಲವಂತವಾಗಿ ಇಳಿಸಿದ್ದಕ್ಕೆ ರೊಚ್ಚಿಗೆದ್ದು ಬಿಎಂಟಿಸಿ ಬಸ್‌ಗೆ ಕಲ್ಲು ತೂರಿದ ಪ್ರಯಾಣಿಕ


ಬಸ್ಸಿನ ಮೇಲೆ ಕಲ್ಲು ತೂರುತ್ತಿರುವುದನ್ನು ಗಮನಿಸಿದ ಮತ್ತೊಂದು ಬಿಎಂಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರೇ ಸೇರಿ ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೋಲಾರ ಜಿಲ್ಲೆ ಮಾಲೂರಿನ ಮುರಳಿ ಹಡಪದ ಕಲ್ಲು ತೂರಿದ್ದು, ಈತ ಚಾಳಿ ಬಿದ್ದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?

ಸಿಟಿ ಮಾರ್ಕೆಟ್‌ನಿಂದ ಕಣ್ಣೂರಿಗೆ ತೆರಳುವ ಬಿಎಂಟಿಸಿ ಮಾರ್ಗ ಸಂಖ್ಯೆ 280ಎ/1 ಬಸ್ಸಿಗೆ ಮುರಳಿ ಹತ್ತಿದ್ದ. ಕೋಲ್ಸ್‌ಪಾರ್ಕ್‌ ಕಡೆಗೆ ಬಸ್ಸು ಹೋಗುತ್ತದೆಯೇ ಎಂದು ಚಾಲಕರ ಬಳಿ ಮೊದಲೇ ಕೇಳಿ ಖಚಿತಪಡಿಸಿದ ನಂತರವಷ್ಟೇ ಆರೋಪಿ ಬಸ್ಸಿಗೆ ಹತ್ತಿಕೊಂಡಿದ್ದ. ಕೋಲ್ಸ್‌ಪಾರ್ಕ್‌ಗೆಂದು ಟಿಕೆಟ್‌ ಕೂಡ ಖರೀದಿಸಿದ್ದ. ಈ ಹಿನ್ನೆಲೆಯಲ್ಲಿ ಕೋಲ್ಸ್‌ಪಾರ್ಕ್‌ ನಿಲ್ದಾಣ ಬಂದ ಕೂಡಲೇ ನಿರ್ವಾಹಕ ಕೆ.ಎಚ್‌.ಅಂಜನಪ್ಪ ಅವರೇ ಮುರಳಿಗೆ ''ನಿಮ್ಮ ಸ್ಟಾಪ್‌ ಬಂತು ಇಳಿದುಕೊಳ್ಳಿ'' ಎಂದು ಹೇಳಿದ್ದರು. ಆದರೆ ಆರೋಪಿ ಆ ಸ್ಟಾಪ್‌ನಲ್ಲಿ ಇಳಿಯಲು ಸಿದ್ಧನಿರಲಿಲ್ಲ. ಸ್ವಲ್ಪ ಮುಂದೆ ಇಳಿದುಕೊಳ್ಳುತ್ತೇನೆ ಎಂದು ತಕರಾರು ತೆಗೆದಿದ್ದ. ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರು ಕೂಡ ಇದೇ ಕೋಲ್ಸ್‌ಪಾರ್ಕ್‌ ಎಂದು ಹೇಳಿದರೂ ಆತ ಇಳಿಯಲು ಸಿದ್ಧನಿರಲಿಲ್ಲ. ಆ ವೇಳೆ ಆಂಜನಪ್ಪ ಅವರು, ''ಮುಂದೆ ಇಳಿಯುವುದಾದರೆ ಅಲ್ಲಿಗೆ ಟಿಕೆಟ್‌ ತಗೊಳ್ಳಿ'' ಎಂದು ಕೇಳಿದರು. ಟಿಕೆಟ್‌ ಖರೀದಿಸಲೂ ಆರೋಪಿ ಸಿದ್ಧನಿರಲಿಲ್ಲ. ಈ ಕಾರಣದಿಂದ ಆತನನ್ನು ಬಲವಂತವಾಗಿ ಇಳಿಸಿ ಬಸ್ಸು ಮುಂದಕ್ಕೆ ಹೋಗಿತ್ತು. ಕೆಲವೇ ಕ್ಷಣಗಳಲ್ಲಿ ದೊಡ್ಡ ಸದ್ದು ಕೇಳಿಸಿತು. ಅದರ ಬೆನ್ನಲ್ಲೇ ಬಸ್ಸಿನ ಹಿಂಬದಿ ಗಾಜು ಪುಡಿಯಾಯಿತು ಎಂದು ಇತರೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೆಳಗೆ ಇಳಿದಿದ್ದ ಆರೋಪಿ ದೊಡ್ಡ ಕಲ್ಲುಗಳನ್ನು ಬಸ್ಸಿನ ಮೇಲೆ ತೂರಿದ್ದ. ಪರಿಣಾಮ ಒಂದು ಕಲ್ಲು ಹಿಂಬದಿ ಗಾಜನ್ನು ಪುಡಿಗೈದಿದ್ದರೆ, ಉಳಿದ ಕಲ್ಲುಗಳು ಪ್ರಯಾಣಿಕರಿಗೆ ಮತ್ತು ನಿರ್ವಾಹಕನ ತಲೆಗೆ ಅಪ್ಪಳಿಸಿತ್ತು. ನಿರ್ವಾಹಕ ಆಂಜನಪ್ಪ ಅವರ ತಲೆಯಿಂದ ರಕ್ತ ಸುರಿಯತೊಡಗಿದಾಗ ಅವರು ಬಸ್ಸನ್ನು ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕರಿಗೆ ಸೂಚಿಸಿದ್ದರು. ಅಷ್ಟೊತ್ತಿಗೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಸೇರಿ ಕಲ್ಲು ತೂರುತ್ತಿದ್ದ ಮುರಳಿಯನ್ನು ಹಿಡಿದು ಬಸ್ಸಿಗೆ ಹತ್ತಿಸಿಕೊಂಡದ್ದಲ್ಲದೆ, ಬಸ್ಸನ್ನು ಸೀದಾ ಭಾರತೀನಗರ ಪೊಲೀಸ್‌ ಠಾಣೆ ಎದುರು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು.

54 ವರ್ಷದ ನಿರ್ವಾಹಕ ಆಂಜನಪ್ಪ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಆರೋಪಿ ಮುರಳಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಚಾಳಿ ಬಿದ್ದ ಆರೋಪಿ ಎನ್ನುವುದು ಖಚಿತವಾಗಿದೆ. ಆತನ ವಿರುದ್ಧ ಹಲ್ಲೆ, ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಭಾರತೀನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ