ಆ್ಯಪ್ನಗರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್,‌ 15 ದಿನಗಳಿಂದ ದಾಖಲಾಗಿಲ್ಲ ಪ್ರಕರಣ!

ಜಿಲ್ಲೆಯಲ್ಲಿ ಕೊರೊನಾ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸತತ 15 ದಿನಗಳಿಂದ ಯಾವುದೇ ಹೊಸ ಪ್ರಕರಣ ದಾಖಲಾಗದಿರುವುದು ಮತ್ತು ಕೊರೊನಾ ಸೋಂಕಿತರಲ್ಲಿ ನಾಲ್ವರು ಗುಣಮುಖ ಆಗಿರುವುದು ಜಿಲ್ಲೆಯ ಜನತೆ ಹಾಗೂ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿದೆ.

Vijaya Karnataka Web 28 Apr 2020, 6:56 am
ಎನ್‌.ಪ್ರಸನ್ನಕುಮಾರ್‌ ಬೆಂಗಳೂರು ಗ್ರಾಮಾಂತರ
Vijaya Karnataka Web coronavirus

ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ರುದ್ರ ನರ್ತನ ಮುಂದುವರಿಸಿದರೆ, ಜಿಲ್ಲೆಯಲ್ಲಿ ಮಾತ್ರ ಕೊರೊನಾ ಬಹುತೇಕ ನಿಯಂತ್ರಣಕ್ಕೆ ಬಂದಂತಿರುವುದರಿಂದ ಜನತೆ ಕೊಂಚ ನಿರಾಳರಾಗಿದ್ದಾರೆ.

ಏ.13ರಂದು ದೊಡ್ಡಬಳ್ಳಾಪುರ ಕೋಡಿಪಾಳ್ಯದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಐದಕ್ಕೇರಿತ್ತು. ಅಲ್ಲಿಂದ ಇಲ್ಲಿಯವರೆಗೆ ಮತ್ತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸತತ 15 ದಿನಗಳಿಂದ ಯಾವುದೇ ಹೊಸ ಪ್ರಕರಣ ದಾಖಲಾಗದಿರುವುದು ಮತ್ತು ಕೊರೊನಾ ಸೋಂಕಿತರಲ್ಲಿ ನಾಲ್ವರು ಗುಣಮುಖ ಆಗಿರುವುದು ಜಿಲ್ಲೆಯ ಜನತೆ ಹಾಗೂ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಲಾಕ್‌ ಡೌನ್‌ ಕಟ್ಟುನಿಟ್ಟಿನ ಪಾಲನೆ ಹಾಗೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕಾಳಜಿ ವಹಿಸಿದ್ದರ ಫಲವಾಗಿ ಇದೀಗ ಜಿಲ್ಲೆಆರೆಂಜ್‌ ವಲಯದಲ್ಲಿ ಗುರುತಿಸಿಕೊಂಡಿದೆ.

ದಿಲ್ಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ತಂಗಿ ವಾಪಾಸದ ನಾಲ್ವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಜನತೆ ಆತಂಕಕ್ಕೆ ಒಳಗಾದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಆಸ್ಪತ್ರೆಗೆ ದಾಖಲಿಸುವುದರ ಜತೆಗೆ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಅವರನ್ನು ಸ್ಥಳೀಯ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಿ, ಬೈಲಾನರಸಾಪುರ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಯಿತು. ಗ್ರಾಮಸ್ಥರು ಹಾಗೂ ಸೋಂಕಿತರ ಸಂಪರ್ಕ ಹೊಂದಿದ್ದವರ ತಪಾಸಣೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಫಲವಾಗಿ ಸದ್ಯಕ್ಕೆ ಕೊರೊನಾ ನಿಯಂತ್ರಣದಲ್ಲಿದೆ.

ಜಿಲ್ಲೆಯಲ್ಲಿ ಇದುವರೆಗೂ 12 ಪ್ರಕರಣಗಳು ದಾಖಲಾಗಿವೆ. ಆದರೆ ಇದರಲ್ಲಿ ಐದು ಪ್ರಕರಣಗಳು ಜಿಲ್ಲೆಯದ್ದಾಗಿದ್ದರೆ ಉಳಿದ 7 ಪ್ರಕರಣಗಳು ಹೊರ ರಾಜ್ಯ ಅಥವಾ ಅನ್ಯ ಜಿಲ್ಲೆಗೆ ಸಂಬಂಧಿಸಿದ್ದಾಗಿದೆ. 12ರಲ್ಲಿ8 ಗುಣಮುಖವಾಗಿದ್ದು, ಇದರಲ್ಲಿ ನಾಲ್ಕು ಜಿಲ್ಲೆಯದ್ದಾಗಿದೆ. ದಿಲ್ಲಿಯ ನಿಜಾಮುದ್ದೀನ್‌ ಮಸೀದಿಯಿಂದ ಹಿಂದಿರುಗಿದ್ದ 113 ಹಾಗೂ 440 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಇವುಗಳಲ್ಲಿ 109 ತಬ್ಲಿ ಹಾಗೂ 341 ನೆಗೆಟಿವ್‌ ಬಂದಿದ್ದು 91 ಫಲಿತಾಂಶ ನಿರೀಕ್ಷೆಯಲ್ಲಿದೆ.

ತಬ್ಲಿಘಿಘಿ 150 ಹಾಗೂ ಇತರೆ 333 ಮಂದಿಗೆ ಕಡ್ಡಾಯ ಗೃಹ ಬಂಧನ ವಿಧಿಸಲಾಗಿದ್ದು, 35 ಮಂದಿಯನ್ನು ಆಸ್ಪತ್ರೆ ಕ್ವಾರಂಟೈನ್‌ನಲ್ಲಿಇರಿಸಲಾಗಿದೆ.

ದೇವನಹಳ್ಳಿ ತಾಲೂಕು ಆಸ್ಪತ್ರೆ ಹಾಗೂ ಆಕಾಶ್‌, ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ, ನೆಲಮಂಗಲ ತಾಲೂಕು ಆಸ್ಪತ್ರೆ ಹಾಗೂ ಸಿದ್ದಾರ್ಥ ಮೆಡಿಕಲ್‌ ಕಾಲೇಜ್‌ ಮತ್ತು ಹೊಸಕೋಟೆ ತಾಲೂಕು ಆಸ್ಪತ್ರೆ ಮತ್ತು ಎಂವಿಜೆ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ಹೊರ ರಾಜ್ಯಗಳ ಕಾರ್ಮಿಕರಿಗೆ ಹಾಸ್ಟೆಲ್‌ಗಳಲ್ಲಿ ಊಟ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಅವಶ್ಯಕವಾಗಿ ಓಡಾಡುವುದಕ್ಕೆ ಬ್ರೇಕ್‌ ಹಾಕಿರುವುದು ಮಾತ್ರವಲ್ಲದೆ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದರಿಂದ ಜನರು ರಸ್ತೆಗೆ ಬರದಂತಾಗಿದೆ. ಪರಿಣಾಮ ಲಾಕ್‌ಡೌನ್‌ ಕಟ್ಟುನಿಟ್ಟಿನ ಪಾಲನೆಯಿಂದ ಕೊರೊನಾ ಕಂಟ್ರೋಲ್‌ ಗೆ ಬಂದಂತಾಗಿದ್ದು ಲಾಕ್‌ಡೌನ್‌ ಅಂತ್ಯದವರೆಗೆ ಇದೇ ರೀತಿ ಮುಂದುವರಿದರೆ ಜಿಲ್ಲೆಯು ಹಸಿರು ವಲಯ ಪಟ್ಟಿಗೆ ಸೇರುವ ಸಾಧ್ಯತೆ ದಟ್ಟವಾಗಿದೆ.

ಮೇ 3ರ ಬಳಿಕ ಕೊಂಚ ಸಡಿಲಿಕೆ?
ಜಿಲ್ಲೆಯು ಆರೆಂಜ್‌ ವಲಯದಲ್ಲಿ ಇರುವುದರಿಂದ ಮೇ 3 ರ ಬಳಿಕ ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಗತ್ಯ ವಸ್ತುಗಳ ಸೇವೆಗೆ ಅವಕಾಶ ಕಲ್ಪಿಸಿರುವುದರ ಜತೆಗೆ ಕೆಲವು ವಲಯಗಳಿಗೆ ವಿನಾಯಿತಿ ನೀಡಬಹುದು. ಆದರೆ ಯಾವ ವಲಯಗಳು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರದಲ್ಲಿ ಅಷ್ಟೊಂದು ಏಫೆಕ್ಟ್ ಇಲ್ಲ. ಜಿಲ್ಲೆಗೆ ಅನ್ಯ ಜಿಲ್ಲೆಯವರ ಪ್ರವೇಶ, ಜನತೆ ಲಾಕ್‌ಡೌನ್‌ ಕಟ್ಟುನಿಟ್ಟಿನ ಪಾಲನೆಯಿಂದ ಜಿಲ್ಲೆಆರೆಂಜ್‌ ವಲಯದಲ್ಲಿದೆ.
- ರವೀಂದ್ರ ಪಿ.ಎನ್‌. | ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ