ಆ್ಯಪ್ನಗರ

ರೈತರು ಬೇಸಾಯದಿಂದ ವಿಮುಖರಾಗದಿರಲಿ

ರೈತರು ದೇಶದ ಬೆನ್ನೆಲುಬು. ಕೃಷಿ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗದು. ಆದ್ದರಿಂದ ರೈತರು ಬೇಸಾಯದಿಂದ ಯಾವುದೇ ಕಾರಣಕ್ಕೂ ವಿಮುಖವಾಗಬಾರದು ಎಂದು ಕೃಷಿ ಅಧಿಕಾರಿ ಅನಸೂಯಾದೇವಿ ತಿಳಿಸಿದರು.

Vijaya Karnataka 22 Oct 2018, 2:15 pm
ದಾಬಸಪೇಟೆ: ರೈತರು ದೇಶದ ಬೆನ್ನೆಲುಬು. ಕೃಷಿ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗದು. ಆದ್ದರಿಂದ ರೈತರು ಬೇಸಾಯದಿಂದ ಯಾವುದೇ ಕಾರಣಕ್ಕೂ ವಿಮುಖವಾಗಬಾರದು ಎಂದು ಕೃಷಿ ಅಧಿಕಾರಿ ಅನಸೂಯಾದೇವಿ ತಿಳಿಸಿದರು.
Vijaya Karnataka Web farmers should not turn back to farming
ರೈತರು ಬೇಸಾಯದಿಂದ ವಿಮುಖರಾಗದಿರಲಿ


ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ರೈ ತಾಂತ್ರಿಕ ಕೃಷಿ ವಿಜ್ಞಾನ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣ, ಕೃಷಿ ವೈಭವ 2018 ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರಿಗಾಗಿ ಇಂದು ಸರಕಾರ ಸಾಕಷ್ಟು ರೀತಿಯಲ್ಲಿ ಅನುಕೂಲಗಳನ್ನು ನೀಡುತ್ತಿದ್ದು ಈ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವು ರೈತರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಕೃಷಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ಮಾಹಿತಿ ನೀಡಿ, ಎಲ್ಲರಿಗೂ ಸರಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ನೂತನ ತಾಂತ್ರಿಕ ಬೇಸಾಯ ಪದ್ಧತಿ ಮತ್ತು ಬೆಲೆಗಳ ಮಾಹಿತಿ ಪಡೆದುಕೊಳ್ಳಲು ಹಾಗೂ ತಮ್ಮ ಭೂಮಿಯಲ್ಲಿನ ಮಣ್ಣು ಅದರ ಪರೀಕ್ಷೆಗೆ ತಕ್ಕಂತೆ ಬೆಳೆ ಬೆಳೆಯುವುದು, ಗೊಬ್ಬರ ನೀಡುವುದರ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಿ ಎಂದರು.

ಈ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ವಿದ್ಯಾರ್ಥಿಗಳು ಸಾಕಷ್ಟು ಕಸರತ್ತು ನಡೆಸಿ ಕೃಷಿ ಕ್ಷೇತ್ರದಲ್ಲಿ ತಾವೇ ಬೆಳೆದ ಬೆಳೆ ಮತ್ತು ಬೇಸಾಯದಲ್ಲಿ ಅಳವಡಿಸಿಕೊಳ್ಳಬಹುದಾದ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ವಿಧಾನವನ್ನು ಪ್ರಯೋಗಿಕವಾಗಿ ತಿಳಿಸುತ್ತಿದ್ದಾರೆ. ಈ ಬಗ್ಗೆ ರೈತರು ಹೆಚ್ಚಿನ ಮಾಹಿತಿ ಪಡೆದು ತಾವೂ ತಮ್ಮ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬೇಸಾಯದಿಂದ ವಿಮುಖರಾಗಬೇಡಿ: ಬೇಸಾಯ ಶಾಸ್ತ್ರಜ್ಞ ಅಂದಾನಿಗೌಡ ಮಾತನಾಡಿ, ಇಂದು ರೈತರು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಕಾರಣ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೆಚ್ಚಿನ ಖರ್ಚು ವೆಚ್ಚವನ್ನು ಭರಿಸುವುದು ಹಾಗೂ ಕಾರ್ಮಿಕರ ಕೊರತೆ ಇದೆ ಎನ್ನುತ್ತಾರೆ. ಆದರೆ ನಿಜವಾದ ಕಾರಣ ಬೇರೆಯೇ ಆಗಿರುತ್ತದೆ ಎನ್ನುತ್ತಾರೆ. ಕೆಲವು ಅನುಭವಿ ರೈತರು ಕೃಷಿ ಬಗ್ಗೆ ಹೆಚ್ಚಿನ ಅರಿವು ಮತ್ತು ಸರಕಾರ ನೀಡುತ್ತಿರುವ ಸೌಲಭ್ಯಗಳು, ನೂತನ ತಂತ್ರಜ್ಞಾನ, ಹನಿ ನೀರಾವರಿ ಪದ್ಧತಿ, ಸೋಲಾರ್‌ ಸಿಸ್ಟಮ್‌, ಕ್ರಿಮಿನಾಶಕ, ಕೀಟ ಹಾಗೂ ರೋಗ ಬಾಧೆಯ ಅರಿವಿಲ್ಲದೆ ತಮಗೆ ತೋಚಿದ ರೀತಿ ಬೇಸಾಯ ಮಾಡುವುದರಿಂದ ರೈತರಿಗೆ ಸಹಜವಾಗಿಯೇ ನಷ್ಟವಾಗುತ್ತದೆ. ಆದ್ದರಿಂದ ರೈತರು ಆಗಿಂದಾಗ್ಗೆ ಕೃಷಿ ಅಧಿಕಾರಿಗಳನ್ನು ಮತ್ತು ಪ್ರಗತಿಪರ ರೈತರ ಜಮೀನಿಗೆ ಭೇಟಿ ನೀಡುವ ಮೂಲಕ ತಾವು ಸಹ ಉತ್ತಮ ಬೆಳೆ ಬೆಳೆಯಲು ಮುಂದಾಗಿ ಎಂದು ಸಲಹೆ ನೀಡಿದರು.

ಕೃಷಿ ವಿಸ್ತರಣಾಧಿಕಾರಿ ಮುರಹರಿ ನಾಯಕ್‌ ಮಾತನಾಡಿ, ರೈತರಿಗಾಗಿ ಸಾಕಷ್ಟು ರೀತಿಯಲ್ಲಿ ಮಾಹಿತಿ ನೀಡಲು ಸರಕಾರ ಬದ್ಧವಾಗಿದೆ. ಈಗ ಈ ಕಾರ್ಯಾಗಾರದಲ್ಲಿ ಎರೆಗೊಬ್ಬರ, ಸಾವಯವ ಕೃಷಿ, ಮಣ್ಣಿನ ಪರೀಕ್ಷೆ, ಹೈಡ್ರೋಫೋನಿಕ್ಸ್‌, ಕೃಷಿ ಹೊಂಡ, ಅಜೋಲ, ಪಾಲಿಹೌಸ್‌, ಮಳೆಕೊಯ್ಲು, ನೂತನ ಕೃಷಿ ತಂತ್ರಜ್ಞಾನದ ಮಾದರಿ ಮತ್ತು ಕೃಷಿಗೆ ಸಂಬಂಧಿಸಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಇಲ್ಲಿ ನಿಮಗೆ ಯಾವುದೇ ರೀತಿಯ ಅನುಮಾನಗಳು ಬಂದರೆ ವಿಚಾರಿಸಿ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣ ಕೃಷಿ ವೈಭವ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ರೈತರು ಭೇಟಿ ನೀಡಿ ವಸ್ತು ಪ್ರದರ್ಶನದಲ್ಲಿ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷ ರು, ಸದಸ್ಯರು, ಜನಪ್ರತಿನಿಧಿಗಳು, ಕೃಷಿ ಅಧಿಕಾರಿಗಳು, ಹೈನುಗಾರಿಕೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು, ಕೀಟ ಶಾಸ್ತ್ರಜ್ಞರು, ಬೇಸಾಯ ಪರಿಣಿತರು, ಕೃಷಿ ಶಿಬಿರಾರ್ಥಿಗಳು, ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ