ಆ್ಯಪ್ನಗರ

ವಾರದಿಂದ ಜಿಲ್ಲೆಯಾದ್ಯಂತ ಚುಮುಚುಮು ಚಳಿ

ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಚುಮು ಚುಮು ಚಳಿಗೆ ಜನ ಥಂಡಾ ಹೊಡೆದಿದ್ದಾರೆ. ಶೀತ ಗಾಳಿ ಜತೆಗೆ ಮೈ ನಡುಗಿಸುವ ಚಳಿಗೆ ಮುಂಜಾನೆ ಮತ್ತು ಮುಸ್ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆಯಲ್ಲೂ ತಣ್ಣನೆ ವಾತಾವರಣ ನಿರ್ಮಾಣವಾಗಿದ್ದು ಜನ ಸ್ವೆಟರ್‌, ಜಾಕೆಟ್‌ ಸೇರಿದಂತೆ ಬೆಚ್ಚನೆ ವಸ್ತ್ರಗಳ ಮೊರೆ ಹೋಗುತ್ತಿದ್ದಾರೆ.

Vijaya Karnataka 20 Dec 2018, 5:00 am
ಬೆಂಗಳೂರು ಗ್ರಾಮಾಂತರ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಚುಮು ಚುಮು ಚಳಿಗೆ ಜನ ಥಂಡಾ ಹೊಡೆದಿದ್ದಾರೆ. ಶೀತ ಗಾಳಿ ಜತೆಗೆ ಮೈ ನಡುಗಿಸುವ ಚಳಿಗೆ ಮುಂಜಾನೆ ಮತ್ತು ಮುಸ್ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆಯಲ್ಲೂ ತಣ್ಣನೆ ವಾತಾವರಣ ನಿರ್ಮಾಣವಾಗಿದ್ದು ಜನ ಸ್ವೆಟರ್‌, ಜಾಕೆಟ್‌ ಸೇರಿದಂತೆ ಬೆಚ್ಚನೆ ವಸ್ತ್ರಗಳ ಮೊರೆ ಹೋಗುತ್ತಿದ್ದಾರೆ.
Vijaya Karnataka Web severe cold in bangalore rural district tourists in nandi hill increases
ವಾರದಿಂದ ಜಿಲ್ಲೆಯಾದ್ಯಂತ ಚುಮುಚುಮು ಚಳಿ


ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಚಳಿ ಇರುತ್ತದೆಯಾದರೂ ಈ ವರ್ಷ ಮಾತ್ರ ತುಸು ಜಾಸ್ತಿಯೇ ಇದೆ ಎಂಬುದು ನಾಗರಿಕರ ಅಭಿಪ್ರಾಯ. ಬೆಳಗ್ಗೆ 6 ಗಂಟೆಯಾದರೆ ರಸ್ತೆಯೆಲ್ಲಾ ಮಂಜಿನಲ್ಲಿ ಮುಸುಕಿದ್ದು ಜನರು ಬೆಳಗ್ಗೆ ವಾಕಿಂಗ್‌ಗೆ ಹೋಗದೆ ಮನೆಯಲ್ಲೇ ಬೆಚ್ಚನೆ ನಿದ್ದೆಗೆ ಜಾರುತ್ತಿದ್ದರೆ ಸಂಜೆ ಆರಕ್ಕೆಲ್ಲಾ ಬಹುತೇಕ ಮಂದಿ ಮನೆ ಸೇರಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ತಾಪಮಾನ ಕಳೆದೊಂದು ವಾರದಿಂದ 23 ಡಿಗ್ರಿಯಿಂದ ಕನಿಷ್ಠ 16-17 ಡಿಗ್ರಿವರೆಗೆ ದಾಖಲಾಗಿದ್ದು ಇನ್ನೂ ಒಂದು ವಾರ ಚಳಿಗೆ ಜನ ನಡುಕಬೇಕಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೆಥಾಯ್‌ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರಿದೆ. ಆಂಧ್ರ ಪ್ರದೇಶಕ್ಕೆ ಪೆಥಾಯ್‌ ಕಾಲಿಟ್ಟಿದ್ದರಿಂದ ಕಳೆದ 3 ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಚಳಿ ಹೆಚ್ಚಾಗುತ್ತಿದೆ. ಸಂಜೆ ಆರೇಳು ಗಂಟೆಗೆ 18 ಡಿಗ್ರಿಗೆ ತಲುಪುವ ತಾಪಮಾನ ಬೆಳಗ್ಗೆ 6 ಗಂಟೆಗೆ 16 ಡಿಗ್ರಿಗೆ ಇಳಿಯುತ್ತಿರುವುದರ ಪರಿಣಾಮ ಜಿಲ್ಲೆಯು ಇಬ್ಬನಿಯಲ್ಲಿ ತೋಯುವಂತಾಗಿದೆ.

ವಾಹನ ಸವಾರರ ಪರದಾಟ: ಮುಂಜಾನೆ ರಸ್ತೆಗಳು ಮಂಜಿನಲ್ಲಿ ಮುಸುಕಿರುವುದರಿಂದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುವಂತಾಗಿದೆ. ಕೇವಲ 50 ಮೀಟರ್‌ ದೂರದವರೆಗಷ್ಟೇ ರಸ್ತೆ ಕಾಣುವುದರಿಂದ ಎದುರುಗಡೆ ಬರುವ ವಾಹನಗಳು ಕಾಣದ ಹಿನ್ನೆಲೆಯಲ್ಲಿ ಅಪಘಾತಕ್ಕೀಡಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಸವಾರರು ಬಹಳಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತಾಗಿದೆ. ಅದರಲ್ಲೂ ಪೇಪರ್‌ ಹಂಚುವವರಂತೂ ಕೊರೆಯುವ ಚಳಿಯಲ್ಲಿ ಮಬ್ಬುಗತ್ತಲಿನಲ್ಲಿ ಪತ್ರಿಕೆ ಹಂಚುವಂತಹ ಸಂದರ್ಭ ಬಂದೊದಗಿದೆ.

ಸ್ವೆಟರ್‌ ಮೊರೆ: ಚಳಿ ಹೆಚ್ಚಳವಾಗಿರುವುದರಿಂದ ಆಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ವೆಟರ್‌, ಜಾಕೆಟ್‌ಗಳ ಮೊರೆ ಹೋಗಿದ್ದಾರೆ. ಸಂಜೆಯಾಯಿತೆಂದರೆ ಜನರು ಬಜ್ಜಿ, ಬೊಂಡದಂಗಡಿ ಮುಂದೆ ನಿಂತಿದ್ದರೆ ಬೆಳಗಿನ ಜಾವ ಟೀ ಅಂಗಡಿ ಮುಂದೆ ಜಾಮಾಯಿಸಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ.

ಅವರೆಗೆ ವರದಾನ: ಜಿಲ್ಲೆಯಲ್ಲಿ ಮಂಜಿನ ಕಣ್ಣಾಮುಚ್ಚಲೆಗೆ ಜನ ಗಡಗಡ ನಡುಗಿದರೆ ಇತ್ತ ಅವರೆ ಬೆಳೆದ ರೈತನ ಮೊಗದಲ್ಲಿ ನಗು ಮೂಡಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಅವರೆ ಬೆಳೆಯಲಾಗಿದ್ದು ಇದೀಗ ಬೀಳುತ್ತಿರುವ ಇಬ್ಬನಿಯಿಂದ ಸೊನೆ ತುಂಬಾ ಚೆನ್ನಾಗಿ ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅವರೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಜನರು ಸಹ ಖರೀದಿಗೆ ಮುಗಿಬಿದ್ದಿದ್ದಾರೆ.

ಪಂಚಗಿರಿಯಲ್ಲಿ ರಮಣೀಯ ದೃಶ್ಯ: ನಂದಿಬೆಟ್ಟ ಸೇರಿದಂತೆ ಪಂಚಗಿರಿಗಳಿಗೆ ಹೊಂದಿಕೊಂಡಿರುವ ದೇವನಹಳ್ಳಿ ತಾಲೂಕಿನಲ್ಲಿ ಮಂಜಿನ ಕಣ್ಣಾಮುಚ್ಚಾಲೆಯಾಟ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದೆ. ನಂದಿಬೆಟ್ಟಕ್ಕೆ ಸಾಗುವ ಮಾರ್ಗ ಮಂಜಿನಿಂದ ಕೂಡಿರುವುದು ಮಾತ್ರವಲ್ಲದೆ ಬೆಟ್ಟದ ಸಂಪೂರ್ಣ ಭಾಗ ಮಂಜಿನಿಂದ ಆವೃತ್ತವಾಗಿದ್ದು ಮಲೆನಾಡಿನ ಚಿತ್ರಣವನ್ನು ನೆನಪಿಸುತ್ತದೆ. ಇಂತಹ ರಮಣೀಯ ಸೌಂದರ್ಯ ಸವಿಯಲು ಸಾಕಷ್ಟು ಪ್ರವಾಸಿಗರು ನಂದಿಬೆಟ್ಟದತ್ತ ತೆರಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ