ಆ್ಯಪ್ನಗರ

ಔರಾದ್‌: ಗುಳೆ ತಡೆದು, ಬರ ಎದುರಿಸಲು ತಾಕೀತು

ಔರಾದ್‌ ತಾಲೂಕಿನಲ್ಲಿ ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಗಳನ್ನು ನೀಗಿಸಿದರೆ ಬರಗಾಲ ಯಶಸ್ವಿಯಾಗಿ ಎದುರಿಸಬಹುದು ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅಧಿಕಾರಿಗಳಿಗೆ ತಾಕೀತು ಮಾಡಿದರು.

Vijaya Karnataka 20 Dec 2018, 5:00 am
ಔರಾದ್‌ :ತಾಲೂಕಿನಲ್ಲಿ ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಗಳನ್ನು ನೀಗಿಸಿದರೆ ಬರಗಾಲ ಯಶಸ್ವಿಯಾಗಿ ಎದುರಿಸಬಹುದು ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅಧಿಕಾರಿಗಳಿಗೆ ತಾಕೀತು ಮಾಡಿದರು.
Vijaya Karnataka Web aurad to stop the ditch he asked to face drought
ಔರಾದ್‌: ಗುಳೆ ತಡೆದು, ಬರ ಎದುರಿಸಲು ತಾಕೀತು


ಪಟ್ಟಣದ ಅಮರೇಶ್ವರ ಪದವಿ ಕಾಲೇಜು ಸಭಾಂಗಣದಲ್ಲಿ ಬರ ಪರಾಮರ್ಶೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಬರದ ತೀವ್ರತೆ ತಿಳಿಸುವಲ್ಲಿ ವಿಫಲರಾಗಿದ್ದಾರೆ, ಅಲ್ಲದೆ ತಾಲೂಕಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನ-ಜಾನುವಾರುಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದ್ದು, ಅಧಿಕಾರಿಗಳು ಜಾಗೃತರಾಗಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಕರ್ತವ್ಯ ನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.

ಬರಗಾಲ ಬಂದರೆ ಹಣ ಎತ್ತಿ ಹಾಕಲು ಅಧಿಕಾರಿಗಳು ಹೊಂಚು ಹಾಕುವುದು ಸಾಮಾನ್ಯವಾದಂತಾಗಿದೆ. ಯಾರು ಇಂಥ ಕಾರ್ಯಕ್ಕೆ ಕೈ ಹಾಕದೆ ಸಮಸ್ಯೆ ನಿವಾರಣೆ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಬರ ಪರಿಸ್ಥಿತಿ ತೀರ ಗಂಭೀರವಾಗಿದೆ. ಆದರೆ, ಇದುವರೆಗೂ ಸಭೆಯಲ್ಲಿದ್ದ ಅಧಿಕಾರಿಗಳ್ಯಾರೂ ಬರದ ತೀವ್ರತೆ ಬಗ್ಗೆ ಹೇಳದ್ದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಟ್ಯಾಂಕರ್‌ ನೀರು ಅನಾರೋಗ್ಯಕ್ಕೆ ಕಾರಣವಾಗಿದ್ದು ಟ್ಯಾಂಕರ ಮೂಲಕ ನೀರು ಒದಗಿಸದೆ ಎಲ್ಲಿ ನೀರಿನ ಮೂಲವಿದೆ ಅಲ್ಲಿನ ನೀರು ಬಳಕೆಗೆ ಒತ್ತು ನೀಡುವಂತೆ ಹೇಳಿದರು.

ಇಟಗ್ಯಾಳ ಗ್ರಾಮದಲ್ಲಿನ ಬಾವಿ ಬತ್ತಿದೆ, ಹೆಡಗಾಪೂರ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸುವುದು, ನಿಟ್ಟೂರ(ಕೆ) ನಲ್ಲಿನ ನೀರಿನ ಸಮಸ್ಯೆ ಬಗ್ಗೆ ಪಿಡಿಒ ಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಅಲ್ಲದೆ ಕರಕ್ಯಾಳ ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗ್ಗೆ ಕೃಷಿ ಅಧಿಕಾರಿ ಡಿಸಿ ಗಮನಕ್ಕೆ ತಂದರು.

ಕಮಲನಗರ ತಾಲೂಕು ಆದರೂ ಅಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ. ಶಾಲೆ ಮಕ್ಕಳ ಗೋಳು ಕೇಳುವವರಿಲ್ಲ, ಕಂದಗೂಳ ಶಾಲಾ ಆವರಣದಲ್ಲಿ ಗಿಡಗಳು ನೀರಿಲ್ಲದೆ ಸೋರಗುತ್ತಿವೆ ಎಂದ ಶಾಲಾ ಶಿಕ್ಷಕರು, ಸಮಸ್ಯೆಯನ್ನು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಜಿಪಂ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವು ಕಲ್ಪಿಸಲು ಒತ್ತು ಕೊಡಬೇಕು, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ತಲೆದೋರುವ ಸಂಭವವಿದೆ. ನರೆಗಾದಡಿ ಜನತೆಗೆ ಉದ್ಯೋಗ ಕಲ್ಪಿಸಲು ಯಾವುದೇ ಲೋಪವಾಗದಂತೆ ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಹೆಚ್ಚಿನ ಒತ್ತು ನೀಡುವಂತೆ ಗ್ರಾಪಂ ಪಿಡಿಒಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಪಶುಪಾಲನಾ ಅಧಿಕಾರಿ ರವಿಕುಮಾರ ಭೂರೆ ಮಾತನಾಡಿ, ಮೇವು ಮಿತವಾಗಿ ಬಳಸಿ, ನೀರಿನ ಮೂಲವಿರುವ ರೈತರಿಗೆ ಉಚಿತ ಮೇವಿನ ಬೀಜ ವಿತರಿಸಿ, ಅವರಿಂದಲೇ ಮೇವು ಖರಿದಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದ ಅವರು, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ವಿದ್ಯಾನಂದ, ತಹಸೀಲ್ದಾರ ಎಂ. ಚಂದ್ರಶೇಖರ, ತಾಪಂ ಇಒ ಜಗನ್ನಾಥ ಮೂರ್ತಿ, ಗ್ರಾಪಂ ಪಿಡಿಒ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಮುಖ್ಯ ಗುರುಗಳು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ