ಆ್ಯಪ್ನಗರ

ಬೀದರ್‌ ಉತ್ಸವ ರದ್ದಿಗೆ ಸಿಎಂಗೆ ಮನವಿ

ಬರದ ಸಂದರ್ಭದಲ್ಲಿ ಜನ ಹಿತ ಕಡೆಗಣಿಸಿ ಬೀದರ್‌ ಉತ್ಸವ ಆಚರಿಸುತ್ತಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Vijaya Karnataka 11 Dec 2018, 5:00 am
ಬೀದರ್‌ :ಬರದ ಸಂದರ್ಭದಲ್ಲಿ ಜನ ಹಿತ ಕಡೆಗಣಿಸಿ ಬೀದರ್‌ ಉತ್ಸವ ಆಚರಿಸುತ್ತಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Vijaya Karnataka Web bidar casts appeal to cm
ಬೀದರ್‌ ಉತ್ಸವ ರದ್ದಿಗೆ ಸಿಎಂಗೆ ಮನವಿ


ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಮುಸ್ಲಿಮ್‌ ಹ್ಯೂಮನ್‌ ರೈಟ್ಸ್‌ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ ಸೈಯದ್‌ ವಹೀದ್‌ ಲಖನ್‌, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಬುರಾವ್‌ ಹೊನ್ನಾ, ಕರ್ನಾಟಕ ಮುಸ್ಲಿಮ್‌ ಕೌನ್ಸಿಲ್‌ ಜಿಲ್ಲಾ ಉಪಾಧ್ಯಕ್ಷ ಸೈಯದ್‌ ಗಾಲೀಬ್‌ ಹಾಸ್ಮಿ, ಕರವೇ ಜಿಲ್ಲಾಧ್ಯಕ್ಷ ಶಿವಕುಮಾರ ತುಂಗಾ, ಎಚ್‌ಆರ್‌ಎಫ್‌ಡಿಎಲ್‌ ಕರ್ನಾಟಕದ ಕಲಬುರಗಿ ವಿಭಾಗೀಯ ಸಂಯೋಜಕ ರವಿಕುಮಾರ ವಾಘಮಾರೆ ಈ ಕುರಿತು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ಅರ್ಧಕ್ಕೂ ಅಧಿಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇರುವ ರಾಜ್ಯದಲ್ಲಿ ಈ ಬಾರಿ ನಡೆಯಲಿದ್ದ ಎಲ್ಲ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಆದರೆ, ಬೀದರ್‌ ಜಿಲ್ಲಾಡಳಿತವು ಬರದ ಕರಾಳ ಛಾಯೆಯ ನಡುವೆಯೂ ಬೀದರ್‌ ಉತ್ಸವ ನಡೆಸಲು ಹೊರಟಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರೇ ಉತ್ಸವದ ಬಗ್ಗೆ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬರದಿಂದಾಗಿ ಐದು ವರ್ಷದಿಂದ ಬೀದರ್‌ ಉತ್ಸವ ನಡೆದಿಲ್ಲ. ಆದರೆ, ಜಿಲ್ಲಾಡಳಿತ ಉತ್ಸವಕ್ಕಾಗಿ ಈಗಾಗಲೇ ಒಂದೆರಡು ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಬೆಂಬಲಿಗರು, ಕಲಾವಿದರ ಬುಕ್ಕಿಂಗ್‌, ವೇದಿಕೆ ನಿರ್ಮಾಣ ಮೊದಲಾದ ಕೆಲಸಗಳ ಮೂಲಕ ಲಾಭ ಮಾಡಿಕೊಳ್ಳುವಂತಹವರು ಮಾತ್ರ ಭಾಗವಹಿಸಿದ್ದಾರೆ. ಜನರ ನಾಡಿಮಿಡಿತ ಅರಿಯದೇ, ಸಭೆಗಳಲ್ಲಿ ತಾವೇ ಉತ್ಸವ ನಡೆಸುವ ನಿರ್ಣಯ ಕೈಗೊಂಡಿದ್ದಾರೆ. ದಿನಾಂಕಗಳನ್ನೂ ನಿಗದಿಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಕಾರ್ಮಿಕರ ಕೈಗೆ ಕೆಲಸ

ಮಹಾರಾಷ್ಟ್ರ, ತೆಲಂಗಾಣದಿಂದ ಜಿಲ್ಲೆಗೆ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾದ ಮರಳು ತಂದು ಮಾರಾಟ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಗಣಿಗಾರಿಕೆ ನೆಪದಲ್ಲಿ ಮರಳನ್ನು ಜಪ್ತಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವರು ಮೂರು ಪಟ್ಟು ಬೆಲೆಗೆ ಮರಳು ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ನೀರು ಹಾಗೂ ಮರಳಿನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಸಂಪೂರ್ಣ ನಿಂತು ಹೋಗಿದೆ. ಬಹಳಷ್ಟು ಜನ ಕೆಲಸ ಅರಸಿ ಹೈದರಾಬಾದ್‌ ಹಾಗೂ ಮುಂಬೈಗೆ ಗುಳೆ ಹೋಗಿದ್ದಾರೆ. ಕೆಲ ಕಾರ್ಮಿಕರು ಇಂಟರ್‌ಸಿಟಿ ರೈಲು ಬಳಸಿಕೊಂಡು ನಿತ್ಯ ಹೈದರಾಬಾದ್‌ಗೆ ಹೋಗಿ ಕೂಲಿ ಕೆಲಸ ಮಾಡಿ ಮರಳುತ್ತಿದ್ದಾರೆ. ಯಾವುದೇ ಅಂಗಡಿಗಳಲ್ಲಿ ಶೇ. 25ಕ್ಕೂ ಹೆಚ್ಚು ವ್ಯಾಪಾರ ಇಲ್ಲ. ವ್ಯಾಪಾರಿಗಳು ಕಾರ್ಮಿಕರಿಗೆ ವೇತನ ಕೊಡದಂತಹ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಗೈಡ್‌ಗಳಿಲ್ಲ, ಜನಾಕರ್ಷಣೆಯೂ ಇಲ್ಲ

ಐತಿಹಾಸಿಕ ಸ್ಮಾರಕಗಳತ್ತ ಪ್ರವಾಸಿಗರನ್ನು ಆಕರ್ಷಿಸಲು ಬೀದರ್‌ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, 2006 ರಿಂದ ಈವರೆಗೆ ಬೀದರ್‌ ಉತ್ಸವಕ್ಕಾಗಿಯೇ ಕೋಟ್ಯಂತರ ರೂ ಖರ್ಚು ಮಾಡಿ ನಟರಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದರೂ, ಬೀದರ್‌ನಿಂದ 150 ಕಿ.ಮೀ. ದೂರದಲ್ಲಿರುವ ಹೈದರಾಬಾದ್‌ಗೆ ಪ್ರತಿ ದಿನ ನೂರಾರು ವಾಹನಗಳಲ್ಲಿ ಬರುವ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೀದರ್‌ನ ಸ್ಮಾರಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಬಲ್ಲ ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಭಾಷೆಯ ಗೈಡ್‌ಗಳನ್ನು ನೇಮಕ ಮಾಡಲು ಆಡಳಿತಕ್ಕೆ ಸಾಧ್ಯವಾಗಿಲ್ಲ. ಗೈಡ್‌ಗಳನ್ನು ನೇಮಿಸದೆ ಉತ್ಸವ ನಡೆಸುವುದರಿಂದ ಪ್ರವಾಸೋದ್ಯಮದ ಬೆಳವಣಿಗೆ ಆಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಣಿತ ಗೈಡ್‌ಗಳನ್ನು ನಿಯೋಜಿಸಿದರೆ ಜನ ತಾನಾಗಿಯೇ ಬೀದರ್‌ನ ಸ್ಮಾರಕಗಳತ್ತ ಬರುತ್ತಾರೆಯೇ ವಿನಃ ಎರಡು ದಿನಗಳ ಬೀದರ್‌ ಉತ್ಸವದಿಂದ ಅಲ್ಲ ಎಂದಿದ್ದಾರೆ. ಜ ನ ಹಿತವನ್ನು ಕಡೆಗಣಿಸಿ ಬೀದರ್‌ ಉತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ನಡೆಸಲು ಅಧಿಕಾರಿಗಳಿಗೆ ಸಚಿವರು ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ