ಆ್ಯಪ್ನಗರ

ಬೀದರ್‌ ಜನ ಭಾಗ್ಯಶಾಲಿಗಳು: ಪ್ರಧಾನಿ

ಮಹಾತ್ಮ ಬಸವೇಶ್ವರರು ಪ್ರಜಾಪ್ರಭುತ್ವದ ಜನಕರು. ಬೀದರ್‌ನ ಪುಣ್ಯ ಭೂಮಿಯಲ್ಲೇ ಪ್ರಜಾಪ್ರಭುತ್ವ ಜನ್ಮ ತಾಳಿದೆ. ಇದನ್ನು ನಾನು ಹೋದಲ್ಲೆಲ್ಲ ಜಗತ್ತಿಗೆ ತಿಳಿ ಹೇಳುತ್ತಿದ್ದೇನೆ. 12ನೇ ಶತಮಾನದಲ್ಲಿ ಅನುಭವ ಮಂಟಪವು ಮೊದಲ ಬಾರಿಗೆ ಮಹಿಳಾ ಸಮಾನತೆಯನ್ನು ಸಾರಿತು. ಬಸವಣ್ಣನವರು ಸ್ವಾತಂತ್ರ್ಯ ನೀಡಿದ್ದರು. ಹೀಗಾಗಿ ಬೀದರ್‌ನಲ್ಲಿ ಜನಿಸಿದ ನೀವೇ ಭಾಗ್ಯವಂತರು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

Vijaya Karnataka 31 Dec 2018, 5:42 pm
ಬೀದರ್‌ :ಮಹಾತ್ಮ ಬಸವೇಶ್ವರರು ಪ್ರಜಾಪ್ರಭುತ್ವದ ಜನಕರು. ಬೀದರ್‌ನ ಪುಣ್ಯ ಭೂಮಿಯಲ್ಲೇ ಪ್ರಜಾಪ್ರಭುತ್ವ ಜನ್ಮ ತಾಳಿದೆ. ಇದನ್ನು ನಾನು ಹೋದಲ್ಲೆಲ್ಲ ಜಗತ್ತಿಗೆ ತಿಳಿ ಹೇಳುತ್ತಿದ್ದೇನೆ. 12ನೇ ಶತಮಾನದಲ್ಲಿ ಅನುಭವ ಮಂಟಪವು ಮೊದಲ ಬಾರಿಗೆ ಮಹಿಳಾ ಸಮಾನತೆಯನ್ನು ಸಾರಿತು. ಬಸವಣ್ಣನವರು ಸ್ವಾತಂತ್ರ್ಯ ನೀಡಿದ್ದರು. ಹೀಗಾಗಿ ಬೀದರ್‌ನಲ್ಲಿ ಜನಿಸಿದ ನೀವೇ ಭಾಗ್ಯವಂತರು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ನಗರದ ಐಎಂಎ ಹಾಲ್‌ನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮೇರಾ ಬೂತ್‌ ಸಬ್‌ ಸೇ ಮಜಬೂತ್‌, ಬೂತ್‌ ಮಟ್ಟದ ಕಾರ‍್ಯಕರ್ತರೊಂದಿಗೆ ನೇರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡುವಾಗ ಇದನ್ನು ಉಲ್ಲೇಖಿಸಿದರು.
Vijaya Karnataka Web bidar is great people prime minister
ಬೀದರ್‌ ಜನ ಭಾಗ್ಯಶಾಲಿಗಳು: ಪ್ರಧಾನಿ


''ಬಸವೇಶ್ವರರ ಅಂದಿನ ಸಾಧನೆಗಳ ಕುರಿತು ವಿದೇಶಿಗರಿಗೆ ನಾನು ತಿಳಿಸಿದಾಗ ಅವರು ಆಶ್ಚರ್ಯಚಕಿತರಾಗುತ್ತಾರೆ''ಎಂದರು.

ಇದಕ್ಕೂ ಮುನ್ನ ಬಸವಕಲ್ಯಾಣ ನಗರ ಘಟಕ ಬಿಜೆಪಿ ಅಧ್ಯಕ್ಷ ಶಿವಪುತ್ರ ಗೌರ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, ''ಬಸವಕಲ್ಯಾಣದ ಅನುಭವ ಮಂಟಪವು ಜಗತ್ತಿನ ಮೊದಲ ಸಂಸತ್ತಾಗಿದೆ. ದೇಶಕ್ಕಾಗಿ ಸಬ್‌ ಕೇ ಸಾಥ್‌ ಸಬ್‌ಕಾ ವಿಕಾಸ್‌ನಡಿ ಸಾಕಷ್ಟು ಕೆಲಸ ಮಾಡಿದ್ದೀರಿ. ಅಂತೆಯೇ ಸಣ್ಣ ಮತ್ತು ಮಧ್ಯಮ ಉದ್ಯಮದ (ಎಂಎಸ್‌ಎಂಇ) ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ, ಜನರಿಗೆ ನಾವು ಏನು ಹೇಳಬೇಕು '' ಎಂದು ಪ್ರಶ್ನಿಸಿದರು.

ಗೌರ ಅವರ ಪ್ರಶ್ನೆಗೆ ಉತ್ತರಿಸಿದ ಮೋದಿ ಅವರು, ''ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಂದು ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿವೆ. ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿವೆ. ಈ ವಲಯದ ವಾಣಿಜ್ಯೋದ್ಯಮಿಗಳಿಗಾಗಿ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದೆ. ಕರ್ನಾಟಕದಲ್ಲಿ ಲಕ್ಷಾಂತರ ವಾಣಿಜ್ಯೋದ್ಯಮಿಗಳು ಸಾಲ ಪಡೆದು, ಎಂಎಸ್‌ಎಂಇ ವಲಯವನ್ನು ಅಭಿವೃದ್ಧಿ ಪಡಿಸುವುದಲ್ಲದೇ, ಹೊಸ ಆವಿಷ್ಕಾರಗಳನ್ನು ಮಾಡುವುದಷ್ಟೇ ಅಲ್ಲದೇ, ಉದ್ಯೋಗವನ್ನೂ ನೀಡುತ್ತಿದ್ದಾರೆ''ಎಂದು ಮೋದಿ ಹೇಳಿದರು.

''2018ರ ದೀಪಾವಳಿ ಹಬ್ಬದ ವೇಳೆ ಭಾರತ ಸರಕಾರವು ಜಾರಿಗೆ ತಂದ ಹೊಸದೊಂದು ಯೋಜನೆಯಿಂದಾಗಿ ವಾಣಿಜ್ಯೋದ್ಯಮಿಗಳಿಗಾಗಿ ಕೇವಲ 59 ನಿಮಿಷದಲ್ಲೇ ಸಾಲ ಮಂಜೂರಾತಿ ಮಾಡಲಾಗುತ್ತಿದೆ. ಅಲ್ಲದೆ, ಈ ವಲಯದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುತ್ತಿದೆ''ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆರಂಭದಲ್ಲಿ ಮಾತನಾಡಿ, ಮೋದಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ತಿಳಿಸಿ, ಮುಂದಿನ ಅವಧಿಗೂ ನೀವೇ (ಮೋದಿ) ಪ್ರಧಾನಿಯಾಗಬೇಕು ಎಂದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಂಸದ ಭಗವಂತ ಖೂಬಾ, ಮಾಜಿ ಶಾಸಕ ಸುಭಾಷ್‌ ಕಲ್ಲೂರು, ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಬಾಬು ವಾಲಿ, ಸೋಮನಾಥ ಪಾಟೀಲ್‌, ಬಾಬುರಾವ್‌ ಕಾರಭಾರಿ, ಈಶ್ವರಸಿಂಗ್‌ ಠಾಕೂರ್‌, ಬಾಬುರಾವ್‌ ಮದಕಟ್ಟಿ, ಸೂರ‍್ಯಕಾಂತ ಚಿಲ್ಲಾಬಟ್ಟೆ, ಅಶೋಕ ಹೊಕ್ರಾಣೆ ಹಾಗೂ ಪಕ್ಷದ ಕಾರ‍್ಯಕರ್ತರು ಇದ್ದರು.

ರಾಜ್ಯ ಸರಕಾರದ ವಿರುದ್ಧ ಪ್ರಧಾನಿ ಟೀಕೆ

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬೆಳಗಾವಿಯ ಕಾರ‍್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ ಅವರು, ''ಕರ್ನಾಟಕ ಸರಕಾರವು ಕುರ್ಚಿಗಾಗಿ ಕಿತ್ತಾಡುತ್ತಿದೆ. ಜನರ ದನಿಯಾಗಿ ಕೆಲಸ ಮಾಡುತ್ತಿಲ್ಲ ''ಎಂದು ಆರೋಪಿಸಿದರು.

''ಜನರ ಭಾವನೆಗಳಿಗೆ ಸ್ಪಂದಿಸಿ, ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಬಿಜೆಪಿ ಮಾಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕರ್ನಾಟಕದ ಜನರು ಬಯಸುತ್ತಿದ್ದಾರೆ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಕರ್ನಾಟಕದ ಅದರಲ್ಲೂ ಬೆಳಗಾವಿಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ