ಆ್ಯಪ್ನಗರ

ಬೀದರ್ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಂಡ ಅಧಿಕಾರಿಗಳ ತಂಡ

ಕೇಂದ್ರದ ಬರ ಅಧ್ಯಯನ ತಂಡದ ಸದಸ್ಯರಾದ ಡಾ. ಸುಪರ್ಣಾ ಪಚೌರಿ, ಆರ್‌.ಬಿ.ಕೌಲ್‌, ಡಾ.ಶಾಲಿನಿ ಸಕ್ಸೇನಾ ಅವರುಗಳು ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದಲ್ಲಿ ಬತ್ತಿ ಹೋಗಿರುವ ಕೆರೆಯನ್ನು ಗುರುವಾರ ವೀಕ್ಷಿಸಿದರು. ಡಿಸಿ ಮಹದೇವ್‌, ಸಿಇಒ ಮಹಾಂತೇಶ್‌ ಬೀಳಗಿ ಮತ್ತಿತರರು ಇದ್ದರು.

Vijaya Karnataka Web 28 Feb 2019, 8:49 pm
ಬೀದರ್‌: ಹಿರಿಯ ಅಧಿಕಾರಿಗಳಾದ ಡಾ. ಸುಪರ್ಣಾ ಪಚೌರಿ, ಆರ್‌.ಬಿ.ಕೌಲ್‌, ಡಾ.ಶಾಲಿನಿ ಸಕ್ಸೆನಾ ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು ಗುರುವಾರ ಬೀದರ್‌ ಜಿಲ್ಲೆಗೆ ಭೇಟಿ ನೀಡಿತು.
Vijaya Karnataka Web 22


ಇಲ್ಲಿನ ಹುಮನಾಬಾದ್‌, ಭಾಲ್ಕಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹಿಂಗಾರು ಹಂಗಾಮಿನ ಮಳೆ-ಬೆಳೆ ಪರಿಸ್ಥಿತಿ, ಮೇವು ಹಾಗೂ ಕುಡಿಯುವ ನೀರಿನ ಲಭ್ಯತೆ, ಉದ್ಯೋಗ ಖಾತರಿ ಯೋಜನೆ, ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ, ಬರಗಾಲದ ಹಿನ್ನೆಲೆಯ ಇನ್ನುಳಿದ ಕಾಮಗಾರಿಗಳ ಪರಿಶೀಲನೆ ನಡೆಸಿತು.

ಮೊದಲಿಗೆ ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ.ಕೆ ಗ್ರಾಮದ ಕೆರೆ ವೀಕ್ಷ ಣೆ ನಡೆಸಿದ ತಂಡವು, ಅಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳ ಜಾಬ್‌ಕಾರ್ಡ್‌ ಹಾಗೂ ಕೆಲಸದ ವಿವರ ಪರಿಶೀಲಿಸಿದರು. ಬಳಿಕ ಮುಸ್ತಾಪುರ ಕ್ರಾಸ್‌ ಬಳಿಯ, ನೀರಿಲ್ಲದೆ ಬತ್ತಿಹೋದ ತೆರೆದ ಬಾವಿ ವೀಕ್ಷಿಸಿದರು. ನಂತರ ಕನಕಟ್ಟಾ ಕೆರೆಗೆ ತೆರಳಿ ಅಲ್ಲಿ ಕೆಲಸ ಮಾಡುತ್ತಿದ್ದ ನರೇಗಾ ಫಲಾನುಭವಿಗಳೊಂದಿಗೆ ಮಾತನಾಡಿದರು. ಕೆಲಸದಲ್ಲಿ ನಿರತರಾಗಿದ್ದ ಮಹಿಳೆಯರನ್ನು ಕಂಡು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಜನರೊಂದಿಗೆ ಮಾತನಾಡಿಸಿದ ಅಧಿಕಾರಿಗಳು, ನಿಮಗೆ ಕೆಲಸ ಸಿಕ್ಕಿದೆಯಾ ? ದನಗಳಿಗೆ ಹಾಕಲಿಕ್ಕೆ ಮೇವು ಇದೆಯಾ ? ಬೆಳೆ ವಿಮಾ ತುಂಬಿದ್ದೀರಾ? ಬೆಳೆ ವಿಮೆ ಪರಿಹಾರ ಸಿಕ್ಕಿದೆಯಾ ? ಎಂದು ಮಾಹಿತಿ ಪಡೆದುಕೊಂಡರು.

ಹುಮನಾಬಾದ್‌ ತಾಲೂಕಿನ ದುಬಲಗುಂಡಿ ವ್ಯಾಪ್ತಿಯ ಹೊಲವೊಂದರಲ್ಲಿ ಜೋಳ ಬೆಳೆ ಹಾನಿ ಪರಿಶೀಲಿಸಿದರು. ಬೆಳೆಹಾನಿ ಪರಿಹಾರವನ್ನು ಸರಕಾರ ಸಮರ್ಪಕವಾಗಿ ನೀಡಬೇಕು ಎಂದು ರೈತರು ಕೋರಿದರು. ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆಯೂ ರೈತರು ಡಿಸಿಗೆ ಕೇಳಿದರು.

ಸಿಕಂದ್ರಾಬಾದ್‌ ವಾಡಿ ಗ್ರಾಮದ ರೈತನ ಹೊಲವೊಂದಕ್ಕೆ ಭೇಟಿ ನೀಡಿದ ತಂಡವು, ರೈತನಿಂದ ಮೇವು ಲಭ್ಯತೆ ಬಗ್ಗೆ ಮಾಹಿತಿ ಪಡೆದರು.

ಪ್ರಾತ್ಯಕ್ಷಿಕೆ ವೀಕ್ಷಣೆ

ಇದಕ್ಕೂ ಮುನ್ನ ಅಧಿಕಾರಿಗಳ ತಂಡವು ಹುಮನಾಬಾದ್‌ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತವು ಬರಗಾಲ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿತು. ಹಿಂಗಾರು ಹಂಗಾಮಿನಲ್ಲಿನ ಬಿತ್ತನೆ ಕ್ಷೇತ್ರ, ಬೆಳೆಹಾನಿ ಸಮೀಕ್ಷೆ ವಿವರ, ಮಳೆ ವಿವರ, ಬೆಳೆ ವಿವರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತಂಡಕ್ಕೆ ಮನವರಿಕೆ ಮಾಡಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ. ಹೆಚ್‌.ಆರ್‌.ಮಹಾದೇವ, ಜಿಪಂ ಸಿಇಒ ಮಹಾಂತೇಶ ಬೀಳಗಿ, ಬಸವಕಲ್ಯಾಣ ಎಸಿ ಗ್ಯಾನೇಂದ್ರಕುಮಾರ ಗಂಗವಾರ, ತಹಸೀಲ್ದಾರರು, ತಾಪಂ ಇಒಗಳು, ಕೃಷಿ ಇಲಾಖೆಯ ಅಧಿಕಾರಿಗಳಾದ ವಿದ್ಯಾನಂದ.ಸಿ., ಸೋಮಶೇಖರ ಬಿರಾದಾರ, ತೋಟಗಾರಿಕೆ ಇಲಾಖೆಯ ಮಲ್ಲಿಕಾರ್ಜುನ ಬಾವುಗೆ ಹಾಗೂ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ