ಆ್ಯಪ್ನಗರ

ದುಶ್ಚಟಗಳ ದಮನದಿಂದ ಅಪರಾಧಗಳ ನಿಯಂತ್ರಣ

ದುಶ್ಚಟಗಳ ದಮನದಿಂದ ಅಪರಾಧಗಳ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಆರ್‌.ರಾಘವೇಂದ್ರ ತಿಳಿಸಿದರು.

Vijaya Karnataka 17 May 2019, 5:39 pm
ಬೀದರ್‌ :ದುಶ್ಚಟಗಳ ದಮನದಿಂದ ಅಪರಾಧಗಳ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಆರ್‌.ರಾಘವೇಂದ್ರ ತಿಳಿಸಿದರು.
Vijaya Karnataka Web control of crimes with repression of evils
ದುಶ್ಚಟಗಳ ದಮನದಿಂದ ಅಪರಾಧಗಳ ನಿಯಂತ್ರಣ


ಗುರುವಾರ ನಗರದ ಜನವಾಡಾ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರ ಪಾವನಧಾಮದ ಅವರಣದಲ್ಲಿ ಪರಮಾತ್ಮನ ಶಕ್ತಿಯ ಮೂಲಕ ಸ್ವರ್ಣಿಮ ಯುಗದ ಸ್ಥಾಪನೆ ಎಂಬ 2019-20ನೇ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಲಯಗಳು ಹಾಗೂ ಪೋಲಿಸ್‌ ಇಲಾಖೆ ಅಪರಾಧವಾದಾಗ ಶಿಕ್ಷೆ ನೀಡುತ್ತವೆ. ಆದರೆ, ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಪರಾಧ ಹುಟ್ಟದಂತೆ ಬುಡದಲ್ಲಿಯೇ ತಡೆಯುತ್ತದೆ. ಇಲ್ಲಿ ಪ್ರತಿಪಾದಿಸುವ ರಾಜಯೋಗ ಶಿಬಿರಕ್ಕೆ ಮಾರು ಹೋಗಿ ಸುಸಂಸ್ಕೃತರಾಗಬೇಕು. ನಡುವಯಸ್ಸಿನ ಹಾಗೂ ವೃದ್ಧಾವಸ್ಥೆಯಲ್ಲಿರುವವರಿಗಿಂತ ಇಂತಹ ಅಧ್ಯಾತ್ಮಿಕ ಕೇಂದ್ರಗಳಿಗೆ ಯುವಜನತೆ ಹರಿದು ಬರಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‌ ಮಾತನಾಡಿ, ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾತ್ಮದ ಅನುಭವ ನೀಡಲಾಗುತ್ತದೆ. ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಬ್ರಹ್ಮಾಕುಮಾರಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಪರಮಾತ್ಮನ ಶಕ್ತಿಯಿಂದ ಆತ್ಮಬಲ ವೃದ್ಧಿಯಾಗಿ ಕಲಿಯುಗದಿಂದ ಸ್ವರ್ಣಿಮ ಯುಗದತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರ ಹಾಗೂ ದುಷ್ಚಟಗಳು ಇಂದು ಎಲ್ಲೆಡೆ ತಾಂಡವಾಡುತ್ತಿದೆ. ಇದರಿಂದ ಮನುಷ್ಯ ಸ್ವಾರ್ಥಿಯಾಗಿ ತನ್ನನ್ನು ತಾನು ಮರೆತಿದ್ದಾನೆ. ನಮ್ಮಲ್ಲಿನ ವಿಕಾರಿ ಶಕ್ತಿಗಳ ದಮನವಾಗಿ ದೈವತ್ವ ವಿಕಾಸ ಹೊಂದುತ್ತೇವೆ ಎಂದು ಹೇಳಿದರು.

ಕೇಂದ್ರದ ಪ್ರವರ್ತಕ ಬಿ.ಕೆ ಪ್ರಭಾಕರ ಕೋರವಾರ್‌ ಮಾತನಾಡಿ, ಕಳೆದ 83 ವರ್ಷಗಳಿಂದ ಜಗತ್ತಿನ 142 ರಾಷ್ಟ್ರಗಳಲ್ಲಿ ಈಶ್ವರೀಯ ವಿಶ್ವವಿದ್ಯಾಲಯವು ಅಧ್ಯಾತ್ಮ ಜ್ಞಾನ ನೀಡುತ್ತಿದೆ ಎಂದರು.

ಬಿ.ಕೆ ಜ್ಯೋತಿ ಬಹೆನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮೊದಲು ವಿಶ್ವದಲ್ಲಿ ಸ್ವರ್ಣಿಮ ಯುಗವಿತ್ತು. ಅಲ್ಲಿ ಮನೆಗಳೆಲ್ಲವು ದೇವಾಲಯಗಳಾಗಿದ್ದವು. ಮನುಷ್ಯರು ದೇವಾತ್ಮರಾಗಿದ್ದರು. ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿದ ಆ ಯುಗವನ್ನು ಮನುಷ್ಯರೇ ಮತ್ತೆ ಕಲಿಯುಗವನ್ನಾಗಿ ಪರಿವರ್ತಿಸಿದರು. ಇದು ಕಾಲಚಕ್ರವಾಗಿರುವುದರಿಂದ ಮತ್ತೆ ಸ್ವರ್ಣಿಮ ಯುಗದ ಕಡೆಗೆ ಒಲಿಯಬೇಕಿದೆ ಎಂದರು.

ರೋಷನಿ ಹಾಗೂ ಶ್ರಾವಣಿ ಸ್ವಾಗತ ನೃತ್ಯಗೈದರು. ಬಿ.ಕೆ. ಮಂಗಲಾ ಬಹೆನ್‌ ಸ್ವಾಗತಿಸಿದರು. ಬಿ.ಕೆ ಗುರುದೇವಿ ಬಹೆನ್‌ ನಿರೂಪಿಸಿದರು. ಬಿ.ಕೆ. ವಿಜಯಲಕ್ಷ್ಮೀ ಬಹೆನ್‌ ವಂದಿಸಿದರು.

ನ್ಯಾ. ರಾಘವೇಂದ್ರರಿಗೆ ಸನ್ಮಾನ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಆರ್‌.ರಾಘವೇಂದ್ರ ಅವರು ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕು ನ್ಯಾಯಾಲಯಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ವರ್ಗಾವಣೆಯಾಗಿರುವ ಪ್ರಯುಕ್ತ ನಗರದ ಜನವಾಡ ರಸ್ತೆಯಲ್ಲಿನ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರ ಪಾವನಧಾಮದಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ನಡೆಯಿತು. ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‌ ಸನ್ಮಾನಿಸಿದರು. ಪ್ರವರ್ತಕ ಬಿ.ಕೆ ಪ್ರಭಾಕರ ಕೋರವಾರ, ಬಿ.ಕೆ ಜ್ಯೋತಿ ಬಹೆನ್‌, ಬಿ.ಕೆ ಗುರುದೇವಿ ಬಹೆನ್‌ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ