ಆ್ಯಪ್ನಗರ

ಮುಂಗಾರು ಆರಂಭವಾದರೂ ಬಾರದ ಮಳೆ

ಮಳೆಗಾಲ ಆರಂಭವಾಗಿ 3 ವಾರಗಳೇ ಕಳೆದರೂ ಮುಂಗಾರು ಮಳೆಯ ಪತ್ತೆಯೇ ಇಲ್ಲ. ಪ್ರತಿ ವರ್ಷ ಜೂನ್‌ 2ನೇ ವಾರದಲ್ಲಿ ಪ್ರತ್ಯಕ್ಷನಾಗುತ್ತಿದ್ದ ವರುಣರಾಯ, ಈ ಬಾರಿ 3 ವಾರ ಕಳೆದರೂ ಸುಳಿದಿಲ್ಲ

Vijaya Karnataka 16 Jun 2019, 9:29 pm
ವಿಕವಿಶೇಷ ಬೀದರ್‌ :ಮಳೆಗಾಲ ಆರಂಭವಾಗಿ ಎರಡು ವಾರಗಳೇ (14 ದಿನ) ಕಳೆದರೂ ಮುಂಗಾರು ಮಳೆಯ ಪತ್ತೆಯೇ ಇಲ್ಲ. ಪ್ರತಿ ವರ್ಷ ಜೂನ್‌ 2ನೇ ವಾರದಲ್ಲಿ ಪ್ರತ್ಯಕ್ಷನಾಗುತ್ತಿದ್ದ ವರುಣರಾಯ, ಈ ಬಾರಿ ಎರಡು ವಾರ ಕಳೆದರೂ ಸುಳಿದಿಲ್ಲ. ಜಮೀನು ಹದಗೊಳಿಸಿ, ಬೀಜ, ಗೊಬ್ಬರ ತಂದು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರ ಮುಖದಲ್ಲಿ ಕಳೆಯೇ ಇಲ್ಲವಾಗಿದೆ. ಕಳೆದ ವರ್ಷವೂ ಮುಂಗಾರು- ಹಿಂಗಾರು ಕೈ ಕೊಟ್ಟಿದ್ದವು. ಈ ಬಾರಿಯಾದರೂ ಸಕಾಲಕ್ಕೆ ಮುಂಗಾರು ಬರುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗುತ್ತದಾ ಎಂಬ ಆತಂಕ ಮನೆ ಮಾಡಿದೆ.
Vijaya Karnataka Web monsoon showers have not begun
ಮುಂಗಾರು ಆರಂಭವಾದರೂ ಬಾರದ ಮಳೆ


ಜೂನ್‌ 1 ರಿಂದ ಇಂದಿನವರೆಗೆ ಒಟ್ಟು ವಾಡಿಕೆಯ 118.4 ಮಿಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 50.1 ಮಿಮೀ ಮಾತ್ರ ಮಳೆಯಾಗಿದೆ. - 57.7 ಮಳೆಯ ಕೊರತೆ ಎದುರಾಗಿದೆ. ಇಡೀ ಜೂನ್‌ ತಿಂಗಳ ವಾಡಿಕೆ ಮಳೆ 73.6 ಮಿಮೀ ಇದ್ದರೆ, ಈ ವರೆಗೆ ಸುರಿದಿರುವುದು ಕೇವಲ 19 ಮಿಮೀ ಮಾತ್ರ ಎಂಬ ಅಂಕಿ- ಸಂಖ್ಯೆಗಳನ್ನು ಕೆಎಸ್‌ಎನ್‌ಡಿಎಂಸಿ ನೀಡುತ್ತಿದೆ. ವಾಯು ಚಂಡ ಮಾರುತದ (ಸೈಕ್ಲೋನ್‌) ಪರಿಣಾಮ ಅಲ್ಲಲ್ಲಿ ಒಂದಷ್ಟು ಮಳೆಯಾಗಿದ್ದು ಬಿಟ್ಟರೆ, ಮುಂಗಾರು ಮಳೆ ಮಾತ್ರ ಸದ್ಯಕ್ಕೆ 14 ದಿನ ವಿಳಂಬವಾಗಿದೆ.

ಮಳæಗಾಗಿ ನಿತ್ಯ ಜನರು ದೇವರಿಗೆ ಮೊರೆ ಹೋಗುತ್ತಿದ್ದಾರೆ. ಗ್ರಾಮಗಳಲ್ಲಿ, ಮಠ-ಮಂದಿರಗಳಲ್ಲಿ ಮಳೆಗಾಗಿ ಪೂಜೆ, ಹವನ ನಡೆಯುತ್ತಿವೆ.

ಕಳೆದ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಗಳೆರಡೂ ಕೈ ಕೊಟ್ಟಿದ್ದ ಪರಿಣಾಮ ಇಡೀ ಜಿಲ್ಲೆ ಭೀಕರ ಬರಗಾಲದ ತೆಕ್ಕೆಗೆ ಜಾರಿಗೆ. ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಕುಡಿಯಲು ನೀರು, ಜಾನುವಾರುಗಳಿಗೆ ಮೇವು ಇಲ್ಲವಾಗಿದೆ. ಜನರ ಪರದಾಟ ದಿನೆ ದಿನೇ ಹೆಚ್ಚುತ್ತಲೇ ಇದೆ. ಜೂನ್‌ ತಿಂಗಳಲ್ಲಿ ಈ ವರ್ಷವಾದರೂ ಸಕಾಲಕ್ಕೆ ಮಳೆ ಸುರಿದು ನೀರಿನ ಸಮಸ್ಯೆ ಬಗೆಹರಿಯುವುದಲ್ಲದೇ, ಬಿತ್ತನೆಗೆ ಪೂರಕವಾಗುತ್ತದೆ ಎಂಬ ರೈತರ ಲೆಕ್ಕಾಚಾರ ಮತ್ತೆ ತಲೆ ಕೆಳಗಾಗಿದೆ.

ಮುಂಗಾರು ಬಿತ್ತನೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಮಳೆಯೇ ಇಲ್ಲವಾಗಿದೆ. ಆರಂಭದಲ್ಲೇ ಉತ್ತಮ ಮಳೆಯಾದರೆ ಬೆಳೆಯೂ ಚೆನ್ನಾಗಿರುತ್ತದೆ. ಯಾವುದೇ ರೋಗಗಳು ಇರುವುದಿಲ್ಲ. ಮಳೆ ತಡವಾದಷ್ಟು ರೈತರಿಗೆ ನಷ್ಟವಾಗುತ್ತದೆ.

- ಪುಂಡಲಿಕಪ್ಪ ಪೂಜಾರಿ, ರೈತ

ಮುಂಗಾರು ಮಳೆಯು ಸಕಾಲದಲ್ಲಿ ಸುರಿದರೆ ಮಾತ್ರ ಬೆಳೆಗಳು ಚೆನ್ನಾಗಿ ಬರುತ್ತವೆ. ಆದರೆ, ಈ ಬಾರಿಯೂ ಮುಂಗಾರು ಮಳೆ ತಡವಾಗುವ ಲಕ್ಷಣಗಳು ಗೋಚರಿಸುತ್ತಿರುವುದು ನಮಗೆ ಆತಂಕ ತಂದಿದೆ. ಬೇಗ ಮಳೆಯಾಗಲಿ ಎಂದು ದೇವರಿಗೆ ಪ್ರಾರ್ಥಿಸುತ್ತಿದ್ದೇವೆ.

- ಓಂಕಾರ ದಾಡಗೆ, ಮಲ್ಕಾಪುರವಾಡಿ, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ