ಆ್ಯಪ್ನಗರ

ನರಸಿಂಹಸ್ವಾಮಿ ಜಯಂತಿ; ನೀರು ಬಿಟ್ಟರೂ ಸಿಗದ ದರುಶನ

ನರಸಿಂಹಸ್ವಾಮಿ ಜಯಂತಿ ನಿಮಿತ್ತ ಬೀದರ್‌ ಹೊರವಲಯದಲ್ಲಿರುವ ಝರಣಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ದಿನವಿಡೀ ನಾನಾ ಧಾರ್ಮಿಕ ಕೈಂಕರ‍್ಯಗಳು ನಡೆದವು.

Vijaya Karnataka 18 May 2019, 5:00 am
ಬೀದರ್‌:ನರಸಿಂಹಸ್ವಾಮಿ ಜಯಂತಿ ನಿಮಿತ್ತ ಬೀದರ್‌ ಹೊರವಲಯದಲ್ಲಿರುವ ಝರಣಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ದಿನವಿಡೀ ನಾನಾ ಧಾರ್ಮಿಕ ಕೈಂಕರ‍್ಯಗಳು ನಡೆದವು.
Vijaya Karnataka Web narasimha swamy jayanti
ನರಸಿಂಹಸ್ವಾಮಿ ಜಯಂತಿ; ನೀರು ಬಿಟ್ಟರೂ ಸಿಗದ ದರುಶನ


ಬೀದರ್‌ ನಗರ, ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಮಂದಿರಕ್ಕೆ ಆಗಮಿಸಿ ಝರಣಾ ನರಸಿಂಹಸ್ವಾಮಿ ಮಂದಿರದಲ್ಲಿರುವ ಹೊರಗಡೆಯ ನರಸಿಂಹ ಸ್ವಾಮಿಯ ಮೂರ್ತಿಯ ದರುಶನ ಪಡೆದುಕೊಂಡು ಪುನೀತರಾದರು.

ಮಂದಿರದ ಅರ್ಚಕರಾದ ಶ್ರೀನಿವಾಸ್‌ ಪಾಠಕ್‌, ಸುನೀಲ್‌ ಪಾಠಕ್‌ ಹಾಗೂ ವಿಜಯ್‌ ಪಾಠಕ್‌ ಅವರುಗಳ ನೇತೃತ್ವದಲ್ಲಿ ಬೆಳಗ್ಗೆ ಮಂದಿರದಲ್ಲಿ ಹವನ, ವಿಷ್ಣುಯಾಗ ಯಜ್ಞ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆದವು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಸಾಕ್ಷಿಯಾದರು. ನರಸಿಂಹಸ್ವಾಮಿ ಜಯಂತಿ ನಿಮಿತ್ತ ಕಳೆದ 9 ದಿನಗಳಿಂದ ಉಪವಾಸ ವ್ರತ ಆಚರಿಸಿದ್ದ ಭಕ್ತಾದಿಗಳು ಜಯಂತಿಯ ಹಿನ್ನೆಲೆಯಲ್ಲಿ ಶುಕ್ರವಾರ ಮಂದಿರದಲ್ಲಿ ತಮ್ಮ ಉಪವಾಸ ವ್ರತವನ್ನು ಕೊನೆಗೊಳಿಸಿದರು.

ಉಪವಾಸವಿದ್ದ ಭಕ್ತಾದಿಗಳಿಗಾಗಿ ಹಾಗೂ ಮಂದಿರಕ್ಕೆ ಬರುವ ಭಕ್ತರಿಗಾಗಿ ಹೈದರಾಬಾದ್‌ನ ರವಿ ಶರ್ಮಾ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮಂದಿರಕ್ಕೆ ಆಗಮಿಸಿದ್ದ ಭಕ್ತರು ದೇವರ ದರುಶನ ಮಾಡಿಕೊಂಡು, ಪ್ರಸಾದ ಸೇವಿಸಿದರು. ಜತೆಗೆ, ನರಸಿಂಹಸ್ವಾಮಿ ಜಯಂತಿ ನಿಮಿತ್ತ ಮಂದಿರದಲ್ಲಿ ಕಳೆದ 9 ದಿನಗಳಿಂದ ಭಜನೆ ನಡೆಯಿತು.

ನೀರು ಬಿಟ್ಟರೂ ಸಿಗದ ದರುಶನ

ಬರಗಾಲದ ಬಿಸಿ ಈ ಬಾರಿ ನರಸಿಂಹಸ್ವಾಮಿ ಜಯಂತಿಗೂ ತಟ್ಟಿದೆ. ನರಸಿಂಹಸ್ವಾಮಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಂದಿರಕ್ಕೆ ಶುಕ್ರವಾರ ನೀರು ಹರಿಬಿಟ್ಟರೂ ನೀರಿನಲ್ಲಿ ಹೋಗಿ ದೇವರ ದರುಶನ ಪಡೆಯಲಾಗದೆ ಭಕ್ತರು ನಿರಾಶೆಗೊಳ್ಳುವಂತಾಯಿತು. ನೀರು ಬಿಟ್ಟರೂ, ಎಲ್ಲ ನೀರನ್ನು ಗುಹೆಯೊಳಗಿನ ಮಣ್ಣು ಇಂಗಿಸಿಕೊಂಡಿತು. ಬಳಿಕ ಮಧ್ಯಾಹ್ನ ಮತ್ತೊಮ್ಮೆ ನೀರು ಬಿಡಲಾಯಿತು. ಈ ವೇಳೆ ಭಕ್ತರು ಗುಹೆಯೊಳಗೆ ಹೋದರೆ ನೀರು ಕಲುಷಿತವಾಗುತ್ತದೆ ಎನ್ನುವ ಕಾರಣಕ್ಕೆ ಗುಹೆಯೊಳಗಿನ ನರಸಿಂಹಸ್ವಾಮಿಯ ಉದ್ಭವ ಮೂರ್ತಿಯ ದರುಶನಕ್ಕೆ ಅವಕಾಶ ಕಲ್ಪಿಸದೇ, ಮಂದಿರ ಹೊರಗಿನ ನರಸಿಂಹಸ್ವಾಮಿಯ ಮೂರ್ತಿಯ ದರುಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಬಿರು ಬಿಸಿಲಿನಲ್ಲೂ ಭಕ್ತರು ಹೊರಗಿನಿಂದಲೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ