ಆ್ಯಪ್ನಗರ

ಆರೋಗ್ಯದ ಜತೆಗೆ ಆರ್ಥಿಕವಾಗಿ ಸಬಲರಾಗಿ

ಹಿರಿಯ ನಾಗರಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸಬಲರಾಗುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯಪಟ್ಟರು.

Vijaya Karnataka 17 Oct 2018, 5:00 am
ಚಾಮರಾಜನಗರ : ಹಿರಿಯ ನಾಗರಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸಬಲರಾಗುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯಪಟ್ಟರು.
Vijaya Karnataka Web
ಆರೋಗ್ಯದ ಜತೆಗೆ ಆರ್ಥಿಕವಾಗಿ ಸಬಲರಾಗಿ


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ನಡೆದ 'ವಿಶ್ವ ಹಿರಿಯ ನಾಗರಿಕರ ದಿನಾಚರಣೆ'ಯಲ್ಲಿ ಮಾತನಾಡಿದರು.

''60 ವರ್ಷ ಪೂರೈಸಿದ ಪ್ರತಿಯೊಬ್ಬರು ಹಿರಿಯ ನಾಗರಿಕರೇ ಆಗಿರುತ್ತಾರೆ. ಅವರಿಂದ ಸಮಾಜಕ್ಕೆ ಏನಾದರೂ ಕೊಡುಗೆ ಸಂದಿರುತ್ತದೆ ಎಂಬುದನ್ನು ಮರೆಯಬಾರದು. ಜಿಲ್ಲೆಯಲ್ಲಿ 70 ಸಾವಿರ ಹಿರಿಯ ನಾಗರಿಕರಿಗೆ ಸರಕಾರ 500 ರೂ. ಪಿಂಚಣಿ ನೀಡುತ್ತಿದೆ. ಇದರಿಂದ ಎಷ್ಟೋ ಮಂದಿ ಹಿರಿಯ ನಾಗರಿಕರು ಮಕ್ಕಳ ಮೇಲೂ ಅವಲಂಬಿತರಾಗದೇ ಜೀವನ ಸಾಗಿಸುತ್ತಿದ್ದಾರೆ. ವಯಸ್ಸು ಮೀರುತ್ತ ಹೋದಂತೆಲ್ಲಾ ಆರೋಗ್ಯ ಸ್ಥಿತಿ ಹದಗೆಡುವ ಸಂಭವವಿರುತ್ತದೆ. ಆ ನಿಟ್ಟಿನಲ್ಲಿ ಹಿರಿಯ ನಾಗರಿಕರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಶಿಬಿರ ಆಯೋಜನೆ ಮಾಡುವ ಅವಶ್ಯಕತೆಯಿದೆ,'' ಎಂದರು.

ಪೈಲಟ್‌ ಯೋಜನೆ ರೂಪಿಸಿ: ಹರವೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ''60 ವರ್ಷ ತಲುಪಿದ ಹಿರಿಯ ನಾಗರಿಕರಿಗೆ ಪ್ರಾರಂಭದಲ್ಲಿ 200 ಮಾಸಾಶನ ಕೊಡಲಾಗುತ್ತಿದೆ. ಇತ್ತೀಚೆಗೆ ಸರಕಾರ 65 ವರ್ಷ ತುಂಬಿದವರಿಗೆ 500 ರೂ. ಮಾಸಾಶನ ಕೊಡುತ್ತಿದೆ. ಎಷ್ಟೋಮಂದಿ ಹಿರಿಯ ನಾಗರಿಕರು ಇಂಥ ವ್ಯವಸ್ಥೆ ಗೊತ್ತಿಲ್ಲದೇ 200 ರೂಪಾಯಿಯನ್ನೇ ತೆಗೆದುಕೊಳ್ಳುತ್ತಿದ್ದಾರೆ, ಕೂಡಲೇ ಜಿಲ್ಲಾಧಿಕಾರಿಯವರು ಒಂದೇ ಆದೇಶಪತ್ರಕ್ಕೆ 500 ರೂ. ಮಾಸಾಶನ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕು. ಜತೆಗೆ ನಾವು ಸೇರಿದಂತೆ ಇಲಾಖೆಯಿಂದ ಪೈಲಟ್‌ ಯೋಜನೆ ಮಾಡಿ, ಗ್ರಾಮಗಳಲ್ಲಿರುವ ಹಿರಿಯ ನಾಗರಿಕರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳ ಅರಿವು ಮೂಡಿಸಬೇಕು,'' ಎಂದರು.

ಪ್ರಾಸ್ತಾವಿಕವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕ ದೊಡ್ಡಪ್ಪ ಎಸ್‌. ಮೂಲಿಮನಿ ಮಾತನಾಡಿ, ''ಜಿಲ್ಲೆಯಲ್ಲಿ 47,800 ಮಂದಿ ಹಿರಿಯ ನಾಗರೀಕರಿಗೆ ಗುರುತಿನ ಚೀಟಿ ನೀಡಲಾಗಿದ್ದು, ಸೇವಾಸಿಂಧು ಯೋಜನೆಯಡಿ 18 ಇಲಾಖೆಗಳಿಂದ 58 ಸೇವೆ ನೀಡಲಾಗುತ್ತಿದೆ. ಸಂತೇಮರಹಳ್ಳಿಯಲ್ಲಿ ಎನ್‌ಜಿಒ ಸಹಭಾಗಿತ್ವದಲ್ಲಿ ವೃದ್ದಾಶ್ರಮ ಕೇಂದ್ರ ತೆರೆಯಲಾಗಿದೆ. 667 ಮಂದಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ, ಜಿಲ್ಲೆಯಲ್ಲಿ ಒಟ್ಟು 71,500 ಹಿರಿಯ ನಾಗರಿಕರಿಗೆ ಇಲಾಖೆಯಿಂದ ನಾನಾ ಸೌಲಭ್ಯ ಒದಗಿಸಲಾಗಿದೆ,'' ಎಂದರು.

ಸನ್ಮಾನ: ವೀರಗಾಸೆ ಕಲಾವಿದ ಗಂಗವಾಡಿ ಡಾ.ಶಿವರುದ್ರಸ್ವಾಮಿ, ರಾಮಸಮುದ್ರದ ಗೊರವರ ಕುಣಿತದ ಕಲಾವಿದ ಶಿವಮಲ್ಲೇಗೌಡ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಜೆ.ಯೋಗೀಶ್‌ ಅಧ್ಯಕ್ಷ ತೆವಹಿಸಿದ್ದರು. ಜಿಪಂ ಸದಸ್ಯ ನಾಗರಾಜ್‌(ಕಮಲ್‌), ತಾಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲ್ಲೇಶ್‌, ಜಿಲ್ಲಾ ಹಾಗೂ ತಾಲೂಕುವಿಶೇಷಚೇತನರ ಸಂಘಸಂಸ್ಥೆಗಳ ಪದಾಧಿಕಾರಿಗಳು, ನಾನಾಗ್ರಾಮಗಳ ಹಿರಿಯ ನಾಗರಿಕರು ಹಾಜರಿದ್ದರು.



ಆಟೋಟ ಸಾಂಸ್ಕೃತಿಕ ಸ್ಪರ್ಧೆ:
ವಿಜೇತರಿಗೆ ಬಹುಮಾನ

ಚಾಮರಾಜನಗರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ನಗರದ ಸರಕಾರಿ ಪೇಟೆ ಶಾಲಾವರಣದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಸಮಾರಂಭದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.

ಗುಂಡುಎಸೆತ, 75 ಮೀಟರ್‌ ಓಟದಲ್ಲಿ ತೇರಂಬಳ್ಳಿ ನಟರಾಜಪ್ಪ(ಪ್ರ), ಏಕಪಾತ್ರಾಭಿನಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಮೂಡ್ಲುಪುರ ಎಂ.ಎಸ್‌.ಸೋಮಣ್ಣ (ಪ್ರ), ಕ್ರಿಕೆಟ್‌ಬಾಲ್‌ ಪಂದ್ಯಾವಳಿ, ಜನಪದಗೀತೆ ಸ್ಪರ್ಧೆಯಲ್ಲಿ ಎನ್‌.ಎಸ್‌.ಪುಟ್ಟಸ್ವಾಮಿ(ಪ್ರ), ಕ್ರಿಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಕೊಳ್ಳೇಗಾಲದ ಕೆ.ಮಾದಯ್ಯ, ಮಹಮದ್‌ ಇಬ್ರಾಹಿಂ ಮಾದಾಪುರ ಪ್ರೇಮಲತಾ, ರಾಜ್ಯಮಟ್ಟದ ಜಾನಪದಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಸ್ತೂರು ಲಕ್ಷ ಮ್ಮ ಸೇರಿದಂತೆ 16 ಮಂದಿಗೆ ಗಣ್ಯರು ಬಹುಮಾನ ವಿತರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ