ಆ್ಯಪ್ನಗರ

ರಾಜಕೀಯದಲ್ಲೂ ಶೇ.33 ಮಹಿಳಾ ಮೀಸಲು

ದೇಶದಲ್ಲಿ ನರೇಂದ್ರಮೋದಿ ನೇತೃತ್ವದ ಆಡಳಿತಕ್ಕಾಗಿ ಕ್ಷೇತ್ರದಲ್ಲಿ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

Vijaya Karnataka 15 Apr 2019, 5:00 am
ಚಾಮರಾಜನಗರ : ದೇಶದಲ್ಲಿ ನರೇಂದ್ರಮೋದಿ ನೇತೃತ್ವದ ಆಡಳಿತಕ್ಕಾಗಿ ಕ್ಷೇತ್ರದಲ್ಲಿ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.
Vijaya Karnataka Web 33 of womens reserve in politics
ರಾಜಕೀಯದಲ್ಲೂ ಶೇ.33 ಮಹಿಳಾ ಮೀಸಲು


ನಗರದ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ''ದೇಶದಲ್ಲಿ ಮತ್ತೆ ಮೋದಿ ಆಡಳಿತ ಎಂಬ ಮಾತನ್ನು ಬಿಜೆಪಿಯವರಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್‌ ನಾಯಕರಾದ ಜನಾರ್ದನ ಪೂಜಾರಿಯವರೇ ಹೇಳಿದ್ದಾರೆ. ಮೋದಿ ಇನ್ನೊಂದು ಅವಧಿಯಷ್ಟೇಯಲ್ಲ, ಮತ್ತೊಂದು ಅವಧಿಗೂ ಅವರೇ ಪ್ರಧಾನಿ ಎಂದು ಹಾಡಿ ಹೊಗಳಿದ್ದಾರೆ,''ಎಂದರು.

ಶ್ರೀನಿವಾಸಪ್ರಸಾದ್‌ ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸಿರಲಿಲ್ಲ. ಆದರೆ, ನಾವೇ ಒತ್ತಡ ಹೇರಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಆದ್ದರಿಂದ ಅವರನ್ನು ಆಯ್ಕೆ ಮಾಡುವ ಮೂಲಕ ನಮಗೆ ಬಲ ನೀಡಬೇಕು ಎಂದು ಬಿಎಸ್‌ವೈ ಹೇಳಿದರು.

ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಎನ್‌ಡಿಎ ಸರಕಾರ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು, 60 ಮೀರಿದ ರೈತರಿಗೆ ಮಾಸಿಕ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದರು.

ಅಂಬೇಡ್ಕರ್‌ ಕಡೆಗಣಿಸಿದ್ದು ಕಾಂಗ್ರೆಸ್‌: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್‌ರಾವ್‌ ಮಾತನಾಡಿ, ದೇಶಕ್ಕೆ ಬಲಿಷ್ಠ ಸಂವಿಧಾನ ನೀಡಿದ ಅಂಬೇಡ್ಕರ್‌ ಅವರನ್ನು ಕಡೆಗಣಿಸಿದ್ದು ಕಾಂಗ್ರೆಸ್‌. ಆದರೆ ನಮ್ಮ ಮೋದಿಯವರು ಅಂಬೇಡ್ಕರ್‌ ಅವರ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಿದ್ದಾರೆ. ಮೋದಿ ಸರಕಾರ ದೀನ, ದಲಿತರ ಪರವಾಗಿದೆ. ನಿರಾಶ್ರಿತರಿಗೆ ಮನೆ ನೀಡುವ ಯೋಜನೆ ನಮ್ಮ ಸರಕಾರದಲ್ಲಿದೆ. 9 ಕೋಟಿ ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಿಲೆಂಡರ್‌ ವಿತರಿಸಲಾಗಿದೆ. ಇದೆಲ್ಲವೂ ಬಡವರ ಪರ ಕಾರ್ಯಕ್ರಮಗಳಲ್ಲವೇ ? ಇನ್ನು ಯುಪಿಐ ಸರಕಾರ ಶ್ರೀಮಂತರಿಗೆ ಮಾತ್ರ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗುವಂತೆ ನೋಡಿಕೊಂಡಿತ್ತು. ಆದರೆ, ಮೋದಿ ಸರಕಾರ ಮುದ್ರಾ ಯೋಜನೆ ಮೂಲಕ ಬಡ ಜನತೆಗೆ ಸುಲಭವಾಗಿ ಸಾಲ ಸಿಗಲಿದೆ. ಅಲ್ಲದೇ ರೈತರಿಗೆ 6 ಸಾವಿರ ರೂ. ನೀಡುವ ಯೋಜನೆ ಜಾರಿಯಾಗಿದೆ ಎಂದರು.

ಚುನಾವಣೆ ಮಹತ್ವ ಅರಿಯಿರಿ: ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್‌ ಅವರು ಮಾತನಾಡಿ, ದೇಶದಲ್ಲಿ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನ ಸುಲಭವಾಗಿದೆ. ಅದನ್ನು ತಿದ್ದುಪಡಿ ಮಾಡಿದಷ್ಟು ಹೊಳಪು ಹೊಂದಲಿದೆ. ಆದರೆ, ಅದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ನಮ್ಮ ಜನತೆ ಅರಿಯಬೇಕು. ಅಲ್ಲದೇ ಚುನಾವಣೆ ಮಹತ್ವವನ್ನು ಅರಿತು ತಮ್ಮ ಹಕ್ಕು ಚಲಾಯಿಸಬೇಕು ಎಂದರು.

ಸಮಾವೇಶದಲ್ಲಿ ಶಾಸಕ ಸಿ.ಎಸ್‌. ನಿರಂಜನಕುಮಾರ್‌, ಗೋ. ಮಧುಸೂದನ್‌, ಉಸ್ತುವಾರಿ ರಾಜೇಂದ್ರ, ಜಿಲ್ಲಾಧ್ಯಕ್ಷ ಕೆ.ಆರ್‌. ಮಲ್ಲಿಕಾರ್ಜುನಪ್ಪ, ಮಾಜಿ ಸಚಿವ ಕೋಟೆ ಶಿವಣ್ಣ, ಹನುಮಂತಶೆಟ್ಟಿ, ನೂರೊಂದುಶೆಟ್ಟಿ, ಜಿ.ಪಂ. ಸದಸ್ಯರಾದ ಸಿ.ಎನ್‌. ಬಾಲರಾಜು, ಎ.ಆರ್‌. ಬಾಲರಾಜು, ನಿಜಗುಣರಾಜು, ಡಾ. ಬಾಬು, ಮಲ್ಲೇಶ್‌, ಕೆಲ್ಲಂಬಳ್ಳಿ ಸೋಮನಾಯಕ, ಉಡಿಗಾಲ ಪ್ರಭುಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ನಾಗಶ್ರೀ ಇತರರು ಹಾಜರಿದ್ದರು.


ಹಲ ಮುಖಂಡರ ಸೇರ್ಪಡೆ

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹಲವಾರು ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಕಾಣಿಸಿಕೊಂಡಿದ್ದ ಜಿ.ಪಂ. ಸದಸ್ಯ ಎ.ಆರ್‌. ಬಾಲರಾಜು, ಬಿಜೆಪಿಗೆ ಮರಳಿದರು. ಇನ್ನು ಮುಖಂಡರಾದ ಕೋಡಿಮೋಳೆ ರಾಜಶೇಖರ್‌, ಉಡಿಗಾಲ ಕುಮಾರಸ್ವಾಮಿ, ಎಚ್‌.ಎಸ್‌. ಬಸವರಾಜು, ಸುರೇಶನಾಯಕ, ದೇಶವಳ್ಳಿ ಡಿ.ಎನ್‌. ನಟರಾಜು ಅವರು ಬಿಜೆಪಿ ಬಾವುಟ ಸ್ವೀಕರಿಸುವ ಮೂಲಕ ಬಿಜೆಪಿ ಸೇರಿದರು.


ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ

ವಿಕ ಸುದ್ದಿಲೋಕ ಕೊಳ್ಳೇಗಾಲ

ವಿಶ್ವವೇ ಅಚ್ಚರಿಪಡುವ ರೀತಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳಿಸುವ ಜತೆಗೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿರುವುದರಿಂದ ಪ್ರಧಾನಿ ಮೋದಿ ಹೆಸರು ಮಕ್ಕಳ ಬಾಯಲ್ಲಿಯೂ ಕೇಳಿ ಬರುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಪಟ್ಟಣದ ನ್ಯಾಷನಲ್‌ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಪಕ್ಷ ದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರು ಮೋದಿ ಹೆಸರನ್ನೇ ಹೇಳಿ ಮತ ಕೇಳುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳುತ್ತಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಸೋನಿಯಾಗಾಂಧಿ ಅವರ ಹೆಸರನ್ನು ಹೇಳಿ ಮತ ಕೇಳಲು ಕಾಂಗ್ರೆಸ್‌ನವರಿಗೆ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ಅರಿಯಬೇಕು. ಕೇವಲ 5 ವರ್ಷ ಅಧಿಕಾರ ನಡೆಸಿದ ಮೋದಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಜನಪ್ರಿಯತೆ ಹೊಂದಿರುವುದರಿಂದಲೇ ಎಲ್ಲಡೆ ಮೋದಿ ಮೋದಿ ಎಂದು ಹೇಳಲಾಗುತ್ತಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪಾರ್ಥಿವ ಶರೀರವನ್ನು ಹೂಳಲು ರಾಜ್‌ಘಟ್‌ನಲ್ಲಿ ಸ್ಥಳಾವಕಾಶ ನೀಡದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಾರದಂತೆ ಅಭಿಮಾನಿಗಳು ಪಣತೊಡಬೇಕು ಎಂದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತಕ್ಷ ಣವೇ ನರೇಂದ್ರ ಮೋದಿ ಅವರು ಅಂಬೇಡ್ಕರ್‌ ಅವರ ಸ್ಮರಣಾರ್ಥವಾಗಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಂಬೇಡ್ಕರ್‌ ಅವರ ಪಂಚರತ್ನಗಳನ್ನು ಅಭಿವೃದ್ಧಿಗೊಳಿಸಿದ್ದಾರೆ ಎಂದರು.

ರಾಜ್ಯ ಸಮ್ಮಿಶ್ರ ಸರಕಾರ ಜನರ ಪಾಲಿಗೆ ಉಳಿದಿಲ್ಲ. ಈ ವೇಳೆ ಜನರ ಆರ್ಶೀವಾದದೊಂದಿಗೆ ಬಿಜೆಪಿ ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್‌ರಾವ್‌ , ಕಾರ್ಯದರ್ಶಿ ರಾಜೇಂದ್ರ, ಮಾಜಿ ಶಾಸಕರಾದ ಪರಿಮಳಾ ನಾಗಪ್ಪ, ಸಿ.ಗುರುಸ್ವಾಮಿ, ಜಿ.ಎನ್‌.ನಂಜುಂಡಸ್ವಾಮಿ, ಡಾ.ಭಾರತಿ ಶಂಕರ್‌, ಮುಖಂಡರಾದ ಡಾ.ಪ್ರೀತನ್‌, ಚಂದ್ರಕಲಾ ಬಾಯಿ, ಡಾ.ಎಸ್‌.ದತ್ತೇಶ್‌ ಕುಮಾರ್‌, ಸರ್ವೇಶ್‌ ಬಸವಯ್ಯ, ಕೂಡ್ಲೂರು ಶ್ರೀಧರ್‌ಮೂರ್ತಿ, ಮಾಂಬಳ್ಳಿ ನಂಜುಂಡಸ್ವಾಮಿ, ಕಿನಕಹಳ್ಳಿ ರಾಚಯ್ಯ, ಎಸ್‌.ಮಹದೇವಯ್ಯ, ಸುರೇಶ್‌ ಬಾಬು, ಬಿಜೆಪಿ ಮಂಡಲದ ಅಧ್ಯಕ್ಷ ರಾದ ಲಕ್ಷ್ಮಿಪತಿ, ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್‌, ನಾರಾಯಣ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ