ಆ್ಯಪ್ನಗರ

ಬಂಡೀಪುರ ಅರಣ್ಯ ಧಗ ಧಗ

ಯಾರೋ ವಿಕೃತ ಮನಸ್ಸಿನವರು ಇಟ್ಟ ಬೆಂಕಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಾವಿರಾರು ಎಕರೆ ಕಾಡು ಧಗ ಧಗ ಉರಿಯುತ್ತಿದ್ದು, ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೀಡಾಗಿವೆ.

Vijaya Karnataka 24 Feb 2019, 5:00 am
ಮೇಲುಕಾಮನಹಳ್ಳಿ, ಬೋಳುಗುಡ್ಡ, ಗೋಪಾಲಸ್ವಾಮಿ ಬೆಟ್ಟದಲ್ಲಿ ವ್ಯಾಪಕ ಬೆಂಕಿ
Vijaya Karnataka Web bandipur forest fire clash
ಬಂಡೀಪುರ ಅರಣ್ಯ ಧಗ ಧಗ


ಫಾಲಲೋಚನ ಆರಾಧ್ಯ ಬಂಡೀಪುರ (ಚಾಮರಾಜನಗರ)

ಯಾರೋ ವಿಕೃತ ಮನಸ್ಸಿನವರು ಇಟ್ಟ ಬೆಂಕಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಾವಿರಾರು ಎಕರೆ ಕಾಡು ಧಗ ಧಗ ಉರಿಯುತ್ತಿದ್ದು, ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೀಡಾಗಿವೆ.

ಶುಕ್ರವಾರ ಬಂಡೀಪುರ ಅರಣ್ಯದ ಬಫರ್‌ ವಲಯದ ಕುರುಚಲು ಕಾಡಿಗೆ ಬಿದ್ದಿದ್ದ ಬೆಂಕಿ ಶನಿವಾರ ಮಧ್ಯಾಹ್ನದ ವೇಳೆಗೆ ದಟ್ಟಾರಣ್ಯಕ್ಕೂ ವ್ಯಾಪಿಸಿತು. ಗಾಳಿ ರಭಸವಾಗಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಸಾಕಷ್ಟು ವ್ಯಾಪ್ತಿಗೆ ಹರಡಲಾರಂಭಿಸಿತು.

ಶುಕ್ರವಾರ ಶಿವಪುರ, ಹುಂಡೀಪುರ ಪ್ರದೇಶದ ಕಡೆಯಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಪ್ರಮಾಣದ ಬೆಂಕಿ ದಿನಗಳೆಯುತ್ತಲೇ ಸಾಕಷ್ಟು ವ್ಯಾಪಿಸಿತ್ತಲ್ಲದೇ ಮೇಲುಕಾಮನಹಳ್ಳಿ, ಬೋಳುಗುಡ್ಡದ ಕಡೆಗೂ ಹರಡಿತು.

ಇನ್ನೊಂದು ಕಡೆ ಗೋಪಾಲಸ್ವಾಮಿ ಅರಣ್ಯದಲ್ಲೂ ರಾತ್ರಿಯೇ ಬೆಂಕಿ ಕಾಣಿಸಿಕೊಂಡು ಶನಿವಾರದ ವೇಳೆಗೆ ಆ ಪ್ರದೇಶದಲ್ಲೂ ವ್ಯಾಪಕಗೊಂಡಿತು. ಒಟ್ಟಾರೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂರ್ನಾಲ್ಕು ಕಡೆಗಳಿಂದ ಬೆಂಕಿ ಆವರಿಸಿಕೊಂಡಿದ್ದು, ಪ್ರಾಣಿ, ಪಕ್ಷಿಗಳು ಸಾಕಷ್ಟು ಘಾಸಿಗೊಂಡಿವೆ. ಸಣ್ಣ, ಪುಟ್ಟ ತೆವಳುವ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ.

ಒಂದೆಡೆ ಬೆಂಕಿ ಭುಗಿಲೇಳುತ್ತಿದ್ದರೆ ಗಿಡ, ಮರಗಳ ಮೇಲಿದ್ದ ಪಕ್ಷಿಗಳು ಆತಂಕದಿಂದ ಚೆಲ್ಲಾಪಿಲ್ಲಿಯಾಗಿ ಹಾರಾಡುತ್ತಿದ್ದವು. ಮೊಲ, ಜಿಂಕೆಗಳು ಮತ್ತೊಂದು ಪ್ರದೇಶಕ್ಕೆ ವೇಗವಾಗಿ ಜಿಗಿದು ಓಡುತ್ತಿದ್ದ ದೃಶ್ಯ ಎಂಥ ಗಟ್ಟಿ ಮನಸ್ಸಿನವರಲ್ಲೂ ಮರುಕು ಹುಟ್ಟಿಸುತಿತ್ತು.

ಸಿಬ್ಬಂದಿ ಕೊರತೆ: ಬೆಂಕಿ ಬಿದ್ದಿದ್ದ ಪ್ರದೇಶದಲ್ಲಿ ಅದನ್ನು ನಿಯಂತ್ರಿಸಲು ಸಿಬ್ಬಂದಿ ಕೊರತೆ ಕಾಡಿತು. ಒಂದೇ ವೇಳೆಯಲ್ಲೇ ಮೂರ್ನಾಲ್ಕು ಕಡೆ ಬೆಂಕಿ ಬಿದ್ದಿದ್ದ ಕಾರಣ ಸಿಬ್ಬಂದಿ ಅಲ್ಲಲ್ಲಿ ಚದುರಿದ್ದರು. ಹೀಗಾಗಿ ಒಂದೇ ಪ್ರದೇಶದಲ್ಲೇ ಹೆಚ್ಚಿನ ಮಂದಿ ಇದ್ದುಕೊಂಡು ಬೆಂಕಿಯನ್ನು ನಿಯಂತ್ರಿಸುವುದು ಕಷ್ಟವಾಯಿತು. ಅರಣ್ಯ ಸಿಬ್ಬಂದಿಯೊಂದಿಗೆ, ಸ್ವಯಂ ಸೇವಕರು ಇದ್ದರೂ ಪ್ರಯೋಜನವಾಗಲಿಲ್ಲ.

ಕ್ಷಣಾರ್ಧದಲ್ಲಿ ಹರಡಿತು: ಮೇಲುಕಾಮನಹಳ್ಳಿ ಮಧ್ಯ ಭಾಗದಲ್ಲಿ ಅರಣ್ಯದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಈ ಪ್ರದೇಶದ ಒಂದು ಭಾಗದ ಅರಣ್ಯ ದಟ್ಟವಾಗಿಲ್ಲ. ಆದರೆ, ಹೆದ್ದಾರಿಯ ಮತ್ತೊಂದು ಬದಿ ದಟ್ಟವಾಗಿದೆ. ಬಂಡೀಪುರಕ್ಕೆ ಪ್ರವೇಶ ಪಡೆಯುವ ಮೇಲುಕಾಮನಹಳ್ಳಿ ಎಡ ಭಾಗದಿಂದ ಹರಡಿದ ಬೆಂಕಿಯನ್ನು ರಸ್ತೆ ಮತ್ತೊಂದು ಬದಿಗೆ ಹರಡದಂತೆ ತಡೆಯಲು ಸಿಬ್ಬಂದಿ ಹಸಿರು ಸೊಪ್ಪು ಹಿಡಿದು ಬೆಂಕಿ ನಂದಿಸುತ್ತಿದ್ದರು.

ಆದರೆ, ಗಾಳಿಯಿಂದ ಕ್ಷಣಾರ್ಧದಲ್ಲಿ ಬೆಂಕಿ ಆ ಭಾಗಕ್ಕೆ ವ್ಯಾಪಿಸಿತು. ಮರದಿಂದ ಮರಕ್ಕೆ ಬೆಂಕಿ ಹೊತ್ತಿಕೊಂಡು ರಭಸವಾಗಿ ಹರಡುತ್ತಾ ಸಾಗಿತು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ ಆ ದೃಶ್ಯವನ್ನು ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಶುಕ್ರವಾರವೇ ಬೆಂಕಿ ಬಿದ್ದಿದ್ದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವೇಳೆಗೆ ಪಿಸಿಸಿಎಫ್‌ ಅಂಬಾಡಿ ಮಾಧವನ್‌ ಬಂಡೀಪುರದ ಮೇಲುಕಾಮನಹಳ್ಳಿ ಪ್ರದೇಶದಲ್ಲಿ ಪರಿಸ್ಥಿತಿ ಅವಲೋಕಿಸಿದರಲ್ಲದೇ, ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ, 50ಕ್ಕೂ ಹೆಚ್ಚು ಸಿಬ್ಬಂದಿ, ಸ್ವಯಂ ಸೇವಕರನ್ನು ಕರೆಯಿಸಿಕೊಂಡು ಬೆಂಕಿ ನಿಯಂತ್ರಿಸಲು ಯತ್ನಿಸಿದರು. ಆದರೆ, ಆ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು.

ಲಂಟಾನವೂ ಕಾರಣ: ಬಂಡೀಪುರದ ಉದ್ಯಾನದ ಸಾಕಷ್ಟು ಭಾಗದಲ್ಲಿ ಲಂಟಾನ ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಅದು ಒಣಗಿ ನಿಂತಿರುವುದು ಬೆಂಕಿ ಈ ಪ್ರಮಾಣದಲ್ಲಿ ವ್ಯಾಪಿಸಲು ಕಾರಣ.

--------------

ಸಂಚಾರ ಸ್ಥಗಿತ, ಸಫಾರಿ ರದ್ದು

ಬಂಡೀಪುರ ಅರಣ್ಯದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ತಮಿಳುನಾಡಿನ ಊಟಿಯನ್ನು ಸಂಪರ್ಕಿಸುತ್ತದೆ. ಹೀಗಾಗಿ ನೂರಾರು ವಾಹನಗಳು ಓಡಾಡುತ್ತವೆ. ಆದರೆ, ಶನಿವಾರ ಅದೇ ಪ್ರದೇಶದಲ್ಲಿ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30 ರಿಂದ 2.30ರವರೆಗೆ ಎರಡು ಬದಿಯ ಗೇಟ್‌ಗಳಲ್ಲೇ ವಾಹನಗಳನ್ನು ತಡೆ ಹಿಡಿಯಲಾಯಿತು. ಸುಮಾರು 2 ತಾಸು ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಸಾಕಷ್ಟು ದೂರದವರೆಗೆ ವಾಹನಗಳು ಸಾಲಾಗಿ ನಿಂತಿದ್ದವು.

ಈ ಪೈಕಿ ಸಾಕಷ್ಟು ಮಂದಿ ಬಂಡೀಪುರದ ವನ್ಯಜೀವಿ ಸಂಪತ್ತನನ್ನು ಕಣ್ತುಂಬಿಕೊಳ್ಳಲೇ ಬಂದವರು. ಆದರೆ, ಅವರಿಗೆ ಸಿಕ್ಕಿದ್ದು ಬೆಂಕಿಯ ದರುಶನ. ಕಣ್ಣೇದುರಲ್ಲೇ ಧಗ ಧಗ ಉರಿಯುತ್ತಿದ್ದ ಬೆಂಕಿಯನ್ನು ಕಂಡು ಸಾಕಷ್ಟು ಮಂದಿ ಮೋಕ ಪ್ರೇಕ್ಷಕರಾದರು. ಕಾಡು, ಪ್ರಾಣಿಗಳನ್ನು ನೋಡಲು ಬಂದವರು ಬೆಂಕಿಯ ರುದ್ರನರ್ತನ ಕಂಡು ಅವಕ್ಕಾದರು.

ಸಫಾರಿ ಬಂದ್‌: ಇದೇ ಬೆಂಕಿಯ ಕಾರಣಕ್ಕೆ ಇಂದಿನ ಸಂಜೆಯ ಸಫಾರಿಯನ್ನು ಸಹ ರದ್ದು ಮಾಡಲಾಯಿತು. ಸಫಾರಿಗಾಗಿಯೇ ಸಾಕಷ್ಟು ಮಂದಿ ಕಾದು ಕುಳಿತಿದ್ದರು. ಆದರೆ, ಅರಣ್ಯಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸಫಾರಿ ರದ್ದುಗೊಳಿಸಲಾಗಿದೆ ಎಂಬ ವಿಚಾರದಿಂದ ಅವರಿಗೂ ನಿರಾಸೆಯಾದದ್ದು ಸುಳ್ಳಲ್ಲ.

-------------

ಬೇಸಿಗೆ ಕಾರಣಕ್ಕೆ ಸಾಕಷ್ಟು ಕಾಡು ಒಣಗಿದೆ. ಲಂಟಾನ ಸಹ ಅರಣ್ಯದಲ್ಲಿ ಸಾಕಷ್ಟು ಇರುವುದರಿಂದ ಬೆಂಕಿ ವೇಗದಲ್ಲಿ ಹರಡುತ್ತಿದ್ದು, ನಾವು ಎಷ್ಟೇ ಪ್ರಯತ್ನ ಪಟ್ಟರು ನಿಯಂತ್ರಿಸುವುದು ಕಷ್ಟವಾಗುತ್ತಿದೆ.
- ಅಂಬಾಡಿ ಮಾಧವನ್‌, ಪಿಸಿಸಿಎಫ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ