ಆ್ಯಪ್ನಗರ

ಬಂಡೀಪುರ ಕೆರೆ, ಕಟ್ಟೆಗಳಲ್ಲಿ ಸಮೃದ್ಧ ನೀರು

ಐದು ತಿಂಗಳ ಹಿಂದೆಯಷ್ಟೇ ಬೆಂಕಿಯ ಕೆನ್ನಾಗಲಿಗೆ ತುತ್ತಾಗಿ ಸುಟ್ಟು ಬೆಂಗಾಡಾಗಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇದೀಗ ಕೆರೆ ಕಟ್ಟೆಗಳೆಲ್ಲಾ ಮೈತುಂಬಿದ್ದು, ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

Vijaya Karnataka 11 Aug 2019, 5:00 am
ಮಡಹಳ್ಳಿ ಮಹೇಶ್‌ ಗುಂಡ್ಲುಪೇಟೆ
Vijaya Karnataka Web CHN-CHN10P5


ಐದು ತಿಂಗಳ ಹಿಂದೆಯಷ್ಟೇ ಬೆಂಕಿಯ ಕೆನ್ನಾಗಲಿಗೆ ತುತ್ತಾಗಿ ಸುಟ್ಟು ಬೆಂಗಾಡಾಗಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇದೀಗ ಕೆರೆ ಕಟ್ಟೆಗಳೆಲ್ಲಾ ಮೈತುಂಬಿದ್ದು, ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಮಳೆ ಕೊರತೆಯಿಂದ ಸಂಪೂರ್ಣ ಒಣಗಿ ನಿಂತಿದ್ದ ಮತ್ತು ಲಂಟಾನ ವ್ಯಾಪಿಸಿರುವ ಕಾರಣ ಹುಂಡೀಪುರ ಭಾಗದಲ್ಲಿ ಐದು ತಿಂಗಳ ಹಿಂದೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಾವಿರಾರು ಎಕರೆ ಅರಣ್ಯವನ್ನು ನಾಶಮಾಡಿತ್ತು. ಆ ಸಂದರ್ಭದಲ್ಲಿ ಎತ್ತ ನೋಡಿದರೂ ಬೂದಿ ರಾಶಿ, ಅರ್ಧಂಬರ್ಧ ಸುಟ್ಟ ಮರಗಳು ಕಣ್ಣಿಗೆ ಕಾಣುತ್ತಿದ್ದವು.

ಇದರಿಂದ ಬಂಡೀಪುರ ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೀಗ ಅರಣ್ಯದಲ್ಲಿನ ಕೆರೆ, ಕಟ್ಟೆಗಳೆಲ್ಲವೂ ಮೈದುಂಬಿವೆ. ವಾರದಿಂದ ಸತತ ಮಳೆ ಕಾರಣಕ್ಕೆ ಉದ್ಯಾನದ ತುಂಬೆಲ್ಲಾ ನೀರು ಹರಿದಾಡುತ್ತಿದೆ.

ದೊಡ್ಡಕೆರೆ ಭರ್ತಿ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಹಿರೀಕೆರೆ ಒಂದೇ ದಿನದ ಜೋರು ಮಳೆಗೆ ಭರ್ತಿಯಾಗಿದೆ.

ಇದಲ್ಲದೇ ಉದ್ಯಾನ ಕಚೇರಿ ಬಳಿಯಲ್ಲೇ ಇರುವ ತಾವರಕಟ್ಟೆ ಕೆರೆ ಒಳಗೊಂಡು 13 ವಲಯಗಳಲ್ಲಿ 214ಕ್ಕೂ ಕೆರೆ ಕಟ್ಟೆಗಳು ಇವೆ. ಅಲ್ಲದೆ ಉದ್ಯಾನದ ಮೂಲಕ ಕೇರಳ ಭಾಗದಿಂದ ಹರಿದು ಬರುವ ಮೂಲೆಹೊಳೆ ನುಗು ಜಲಾಶಯ ಸೇರುತ್ತದೆ.

ಕಬಿನಿ ನದಿಗೆ ಹರಿದು ಹೋಗುವ ನೀರು ಉದ್ಯಾನವನ್ನು ದಾಟಿ ಹೋಗಬೇಕಿದೆ. ಹೀಗಾಗಿ ಮಳೆಯಿಂದ ಉದ್ಯಾನದಲ್ಲಿ ಪ್ರಕೃತಿ ಸಹಜ ಕ್ರಿಯೆಗಳು ಜರುಗಲಿದೆ. ವನ್ಯಪ್ರಾಣಿಗಳು ನೀರು ಮತ್ತು ಆಹಾರದ ಕೊರತೆ ಇಲ್ಲದೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿದ್ದು, ಈ ಹಿಂದಿನ ಆತಂಕ ದೂರವಾಗಿದೆ.


ಪ್ರವಾಸಿಗರಿಗೂ ಖುಷಿ

ಬಂಡೀಪುರ ರಾಷ್ಟ್ರೀಯ ಉದ್ಯಾನ ಕಚೇರಿ ಸುತ್ತಲಿನ ಪರಿಸರ ಅಲ್ಲದೆ ಸಫಾರಿ ಮಾರ್ಗದಲ್ಲಿ ಈಗ ಸಮೃದ್ಧ ಹಸಿರು ಸೃಷ್ಟಿಯಾಗಿದೆ.

ಹೀಗಾಗಿ ಪ್ರವಾಸಿಗರಿಗೆ ಜಿಂಕೆ, ನವಿಲು ನಿರೀಕ್ಷೆಗೂ ಮೀರಿ ಕಾಣಿಸಿಕೊಳ್ಳುತ್ತಿವೆ. ಇನ್ನೂ ಹುಲಿ, ಚಿರತೆ, ಕರಡಿ ಇತರೆ ಪ್ರಾಣಿಗಳ ದರ್ಶನ ಆಗುತ್ತಿದೆ.

ಹಸಿರ ಸಿರಿ ನಡುವೆ ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರದ ದೃಶ್ಯಗಳು ಖುಷಿ ನೀಡಿದರೆ, ಹಸಿರ ಸಿರಿ ಪ್ರವಾಸಿಗರ ಕಣ್ಣು ತಂಪು ಮಾಡುತ್ತದೆ. ಇನ್ನೂ ಫೋಟೋಗ್ರಫಿ ಸಲುವಾಗಿ ಬರುವ ವೃತ್ತಿಪರ ಮತ್ತು ಹವ್ಯಾಸಿ ಛಾಯಾಗ್ರಾಹಕರು ಉದ್ಯಾನದ ಕಡೆಗೆ ಲಗ್ಗೆ ಇಡುತ್ತಿದ್ದಾರೆ.

ಒಟ್ಟಾರೆ ಮಳೆಯಿಂದ ರಾಜ್ಯದಲ್ಲಿ ನಾನಾ ತೊಂದರೆಗಳು ಉಂಟಾಗಿವೆ. ಜನರು ಮನೆ, ಆಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದರೆ ಹುಲಿ ಸಂತತಿ ಮತ್ತು ಹತ್ತು ಹಲವು ಜೀವ ವೈವಿಧ್ಯ ಹೊಂದಿರುವ ಕಾರಣಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಬಂಡೀಪುರದಲ್ಲಿ ಮಳೆಯಿಂದ ಸಾಕಷ್ಟು ಅನುಕೂಲ ಆಗಿರುವುದಂತೂ ನಿಜ.


ಬೆಂಕಿಯಿಂದ ತೇಗ, ಸಾಗವಾನಿ ಇತರೆ ಬೆಲೆ ಬಾಳುವ ಮರಗಳು ಬೆಳೆಯುವುದಿಲ್ಲ ಎಂಬ ಕೊರತೆ ಇದೆ. ಆದರೆ ಮಳೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಆಹ್ಲಾದಕರ ಹಸಿರ ವಾತಾವರಣ ಬೆಂಕಿ ಬಿದ್ದಿದ್ದಾಗ ಇದ್ದ ಬೇಸರವನ್ನು ಕಡಿಮೆ ಮಾಡಿದೆ.

-ರಘುರಾಂ, ಕಾರ್ಯನಿರ್ವಾಹಕರು, ಹಿಮಗಿರಿ ವನ್ಯಜೀವಿ ಟ್ರಸ್ಟ್‌, ಗುಂಡ್ಲುಪೇಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ