ಆ್ಯಪ್ನಗರ

ಕೇಂದ್ರ ಬಜೆಟ್‌: ನಿರಾಸೆ ನಡುವೆಯೂ ಆಶಾವಾದ

ಕೇಂದ್ರ ಬಜೆಟ್‌ನಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೆಲವು ನಿರೀಕ್ಷೆಗಳಿತ್ತಾದರೂ ಅದು ಈಡೇರದೆ ನಿರಾಸೆ ಮೂಡಿದೆ. ಇದರ ನಡುವೆಯೂ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Vijaya Karnataka 6 Jul 2019, 5:00 am
ಚಾಮರಾಜನಗರ: ಕೇಂದ್ರ ಬಜೆಟ್‌ನಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೆಲವು ನಿರೀಕ್ಷೆಗಳಿತ್ತಾದರೂ ಅದು ಈಡೇರದೆ ನಿರಾಸೆ ಮೂಡಿದೆ. ಇದರ ನಡುವೆಯೂ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Vijaya Karnataka Web central budget
ಕೇಂದ್ರ ಬಜೆಟ್‌: ನಿರಾಸೆ ನಡುವೆಯೂ ಆಶಾವಾದ


ಚಾ.ನಗರ ಜಿಲ್ಲೆಗೆ ಪ್ರಮುಖವಾಗಿ ಈ ಹಿಂದೆ ಮೆಟ್ಟುಂಪಾಳ್ಯ ರೈಲು ಮಾರ್ಗದ ಬೇಡಿಕೆ ಇತ್ತು. ಆದರೆ, ಪರಿಸರ ಇಲಾಖೆ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ನಂತರದಲ್ಲಿ ಮಾಜಿ ಸಂಸದ ಧ್ರುವನಾರಾಯಣ ಅವರು 1330 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ ನೂತನ ರೈಲ್ವೆ ಮಾರ್ಗವನ್ನು ತಮ್ಮ ಯುಪಿಎ ಸರಕಾರದ ಅವಧಿಯ ಬಜೆಟ್‌ನಲ್ಲಿ ಘೋಷಿಸಲು ಸಫಲರಾಗಿದ್ದರು. ಅದಕ್ಕಾಗಿ ಬಜೆಟ್‌ನಲ್ಲಿ ಪ್ರಥಮ ಹಂತವಾಗಿ 10 ಕೋಟಿ ರೂ. ನೀಡಿತ್ತು. ಇದೀಗ ಅದೇ ಮಾರ್ಗದ ಪ್ರಸ್ತಾಪವೇನಾದರೂ ಆಗಲಿದೆಯೇ ಎಂಬ ನಿರೀಕ್ಷೆಯಿದ್ದರೂ, ಅದು ಹುಸಿಯಾಗಿದೆ. ಉಳಿದಂತೆ ಕೇಂದ್ರದ ಬಜೆಟ್‌ ಬಗ್ಗೆ ತಜ್ಞರು, ರೈತರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಬಜೆಟ್‌

ಮಳೆ ಕೊರತೆ, ವೈಜ್ಞಾನಿಕ ಬೆಲೆ ಸಿಗದೆ ಕಂಗಲಾಗಿದ್ದ ರೈತರಿಗೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಕೊಡುಗೆ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಕಿಸಾನ್‌ ಸಮ್ಮಾನ್‌ ಸೇರಿ, ರೈತರ ಆದಾಯ ವೃದ್ಧಿಗೆ ಪೂರಕ ದೂರದೃಷ್ಟಿ ಯೋಜನೆಗಳ ಜಾರಿ ಕಾರಣಕ್ಕೆ ಅದು ಸಾಧ್ಯವಾಗಿಲ್ಲ. ಮೂಗಿಗೆ ತುಪ್ಪ ಸವರುವ ಯೋಜನೆಗಳ ಬದಲು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕಾರಣ ಅಷ್ಟೇನೂ ನಿರಾಸೆ ಆಗಿಲ್ಲ.

- ರಾಜಪ್ಪ, ರೈತ,ಬರಗಿ.


ಉತ್ತಮ ಬಜೆಟ್‌

ಸಣ್ಣ ಕೈಗಾರಿಕೆಗಳ ಬೆಳವಣಿಗೆ ಮತ್ತು ಪುನಶ್ಚೇತನಕ್ಕೆ ಕೇಂದ್ರ ಬಜೆಟ್‌ನಲ್ಲಿ ಒತ್ತು ನೀಡಿರುವುದು ಉತ್ತಮ ವಿಚಾರ. ಇದರಿಂದ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳುವ ಜತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ನೀಡುವ ಅವಕಾಶ ಆಗುತ್ತದೆ. ನಗರ ಪ್ರದೇಶದ ವಲಸೆ ಕಡಿಮೆಯಾಗುತ್ತದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. 5 ಲಕ್ಷ ರೂ.ವರೆಗಿನ ತೆರಿಗೆ ರಿಯಾಯಿತಿ. ಎಲ್ಲಾ ವರ್ಗದ ಜನರನ್ನು ಕೇಂದ್ರೀಕರಿಸಿ ರೂಪಿಸಿರುವ ಈ ಬಾರಿಯ ಕೇಂದ್ರ ಬಜೆಟ್‌ ಉತ್ತಮವಾಗಿದೆ.

- ರವಿ, ಉದ್ಯಮಿ, ಗುಂಡ್ಲುಪೇಟೆ

ನಿರಾಶದಾಯಕ

ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ ರೈತರ ಅಭಿವೃದ್ಧಿಗೆ ಅನುಕೂಲವಾಗಿಲ್ಲ. ದೇಶದ ಬೆನ್ನೆಲುಬಾಗಿರುವ ಕೃಷಿ ಮತ್ತು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಸೂಚಿಸುವ ಬಗ್ಗೆ ಪ್ರಸ್ತಾಪವೇ ಇಲ್ಲ, ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳ ಮಾಡಿದ್ದಾರೆ. ಈ ಬಜೆಟ್‌ನಿಂದ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಿದೆ. ಇದೊಂದು ನಿರಾಶದಾಯಕ ಬಜೆಟ್‌ ಆಗಿದೆ.

-ಶಾಂತಕುಮಾರ್‌, ರೈತ ಸಂಘಟನೆ

ಆರ್ಥಿಕತೆಯ ದೂರದೃಷ್ಟಿ

ಭಾರತದ ಪ್ರಸ್ತುತ ಆರ್ಥಿಕತೆಯು 2.7 ಟ್ರಿಲಿಯನ್‌ ಡಾಲರ್‌ ಇದ್ದು, ಇದನ್ನು 2024ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ನಷ್ಟು ಗಾತ್ರವನ್ನಾಗಿಸಲು ಗುರಿ ಇರಿಸಿಕೊಳ್ಳಲಾಗಿದೆ. ಇದರ ನಡುವೆ ಹಣಕಾಸಿನ ವಿತ್ತೀಯ ಕೊರತೆಯ ಮಿತಿಯನ್ನು ಶೇ. 3.3ಕ್ಕೆ ಕಾಯ್ದಿರಿಸಿರುವುದು ಸ್ವಾಗತಾರ್ಹ. ಕಂಪನಿಗಳ ವಾರ್ಷಿಕ ಆದಾಯ 400 ಕೋಟಿ ರೂ.ಗಿಂತ ಹೆಚ್ಚು ಇರುವವರಿಗೆ ಶೇ.25 ರಷ್ಟು ತೆರಿಗೆ ವಿಧಿಸಿರುವುದು ದೇಶದ ಆರ್ಥಿಕತೆ ದೃಷ್ಟಿಯಿಂದ ಒಳ್ಳೆಯದು.

- ಕೆ. ಶಂಕರ, ಹೂಡಿಕೆ ಸಲಹೆಗಾರರು, ಚಾ.ನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ