ಆ್ಯಪ್ನಗರ

ಕಣದಲ್ಲಿ 10 ಮಂದಿ: ರಂಗೇರಿದ ಚುನಾವಣೆ

ಚಾಮರಾಜನಗರ ಮೀಸಲು ಲೋಕಸಭೆಯ ಅಂತಿಮ ಕಣದಲ್ಲಿ 10 ಮಂದಿ ಉಳಿದಿದ್ದು, ಶನಿವಾರದಿಂದ ಚುನಾವಣಾ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ.

Vijaya Karnataka 30 Mar 2019, 5:00 am
ಚಾಮರಾಜನಗರ : ಚಾಮರಾಜನಗರ ಮೀಸಲು ಲೋಕಸಭೆಯ ಅಂತಿಮ ಕಣದಲ್ಲಿ 10 ಮಂದಿ ಉಳಿದಿದ್ದು, ಶನಿವಾರದಿಂದ ಚುನಾವಣಾ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ.
Vijaya Karnataka Web chamarajanagar lok sabha 10 candidates contest
ಕಣದಲ್ಲಿ 10 ಮಂದಿ: ರಂಗೇರಿದ ಚುನಾವಣೆ


ಕಣದಲ್ಲಿ 10 ಮಂದಿ ಅಭ್ಯರ್ಥಿಗಳಿದ್ದರೂ ಮೂರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ಕ್ಷೇತ್ರದ ಚುನಾವಣೆ ಕೇಂದ್ರೀಕೃತವಾಗಲಿದೆ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್‌, ಬಿಜೆಪಿಯ ಓಟಕ್ಕೆ ಲಗಾಮು ಹಾಕಲು ಬಿಎಸ್ಪಿಯ ಆನೆ ಪಡೆ ಸಜ್ಜಾಗಿದೆ. ಈ ಮೂರು ಪಕ್ಷಗಳ ಪ್ರಚಾರ ಮತ್ತಷ್ಟು ಬಿರುಸು ಪಡೆದುಕೊಳ್ಳಲಿದೆ. ಲೋಕಸಭೆ ಕ್ಷೇತ್ರ ಎರಡು ಜಿಲ್ಲೆಗಳ 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಹೀಗಾಗಿ ಇನ್ನುಳಿದಿರುವ 19 ದಿನಗಳಲ್ಲಿ ಅಷ್ಟೂ ಕ್ಷೇತ್ರಗಳನ್ನೂ ಸುತ್ತಿ ಪ್ರಚಾರ ನಡೆಸುವುದು ಸವಾಲೇ ಸರಿ.

ಕೇವಲ ಕ್ಷೇತ್ರ ಸುತ್ತಿ ಪ್ರಚಾರ ನಡೆಸುವುದಲ್ಲ. ಬೇಸಿಗೆ ಬಿರು ಬಿಸಿಲಿಗೆ ಮೈವೊಡ್ಡಿ ಪ್ರತಿ ಊರಿಗೂ ತಲುಪುವುದು ಸುಲಭದ ಮಾತಲ್ಲ. ಆದರೂ ಆ ಕಾರ್ಯ ಅನಿವಾರ್ಯ. ಇಲ್ಲವಾದರೆ ಮತದಾರ ಪ್ರಭು ಮುನಿಯಲಿದ್ದಾನೆ. ಆತನನ್ನು ಸಂತುಷ್ಟಗೊಳಿಸಲು ಅಭ್ಯರ್ಥಿಗಳು ತಮ್ಮ ಮುಖಂಡರೊಂದಿಗೆ ಊರಿಗೆ ಭೇಟಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡದಿದ್ದಲ್ಲಿ ಮತ ಬೇಟೆ ಕಷ್ಟವಾಗಲಿದೆ. ಇದು ಎಲ್ಲ ಪಕ್ಷದವರಿಗೂ ತಿಳಿದ ವಿಚಾರವಾದ್ದರಿಂದ ಬಿರು ಬಿಸಿಲಲ್ಲೂ ಮತದಾರ ಪ್ರಭುವನ್ನು ತಣಿಸಲು ಸಜ್ಜಾಗಿ ನಿಂತಿದ್ದಾರೆ.

ಮೂರು ಪಕ್ಷಗಳು ಕೇಂದ್ರೀಕೃತ: ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಹಾಗೂ ಬಿಎಸ್ಪಿ ಪಕ್ಷಗಳು ಹೆಚ್ಚಿನ ರೀತಿಯಲ್ಲಿ ಕೇಂದ್ರೀಕೃತಗೊಂಡಿವೆ.

ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರು ಹಾಲಿ ಸಂಸದರೂ ಆಗಿರುವ ಹಿನ್ನೆಲೆಯಲ್ಲಿ ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ತಂದಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಪಡೆ ವಿಧಾನಸಭೆವಾರು ಹಾಗೂ ಹೋಬಳಿವಾರು ಸಭೆಗಳನ್ನು ಪೂರ್ಣಗೊಳಿಸಿ, ಇದೀಗ ಗ್ರಾಮವಾರು ಮತಯಾಚನೆಗೆ ಇಳಿದಿದೆ.

ಇನ್ನು ಬಿಜೆಪಿ ಸಹ ಉಮೇದುವಾರಿಕೆ ಸಲ್ಲಿಕೆ ದಿನವೇ ಜಿಲ್ಲಾ ಕೇಂದ್ರದಲ್ಲಿ ಸಮಾವೇಶ ನಡೆಸಿತ್ತಲ್ಲದೆ, ಅದಕ್ಕೂ ಮೊದಲು ಕ್ಷೇತ್ರವಾರು ಸಭೆಗಳನ್ನು ನಡೆಸಿದ್ದಾಗಿದೆ. ಅದರ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರು ಇದೇ ಕ್ಷೇತ್ರದಲ್ಲಿ ಈ ಹಿಂದೆ ಐದು ಬಾರಿ ಆಯ್ಕೆಯಾಗಿದ್ದವರು. ಹೀಗಾಗಿ ಅವರ ಅನುಭವ, ಕೇಂದ್ರ ಸರಕಾರದ ಯೋಜನೆಗಳು ಮತ್ತು ಪ್ರಧಾನಿ ಮೋದಿಯವರ ಹೆಸರಿನ ಪ್ರಭಾವದ ಮೇಲೆ ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಇವೆರಡು ಪಕ್ಷಗಳ ಪ್ರಚಾರದ ನಡುವೆ ತಾವೇನು ಕಡಿಮೆ ಇಲ್ಲ ಎಂಬಂತೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಾ.ಶಿವಕುಮಾರ್‌ ಪ್ರಚಾರಕ್ಕೆ ಧುಮುಕ್ಕಿದ್ದಾರೆ. ಇವರ ಹಿಂದೆ ಆ ಪಕ್ಷದ ಯುವ ಪಡೆಯೇ ಇದೆ.

ರಾಷ್ಟ್ರೀಯ ಪಕ್ಷಗಳ ಮೂರು ಅಭ್ಯರ್ಥಿಗಳ ಪೈಕಿ ಯುವಕರಾಗಿರುವ ಶಿವಕುಮಾರ್‌, ತಮ್ಮ ಯುವ ಉತ್ಸಾಹ, ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ನಾಲ್ಕು ಶಾಸಕರ ಬೆಂಬಲ, ಒಂದು ಮೈತ್ರಿ ಶಾಸಕರ ಸಹಕಾರವಿದೆ. ಇನ್ನು ಬಿಜೆಪಿಗೆ ಇಬ್ಬರು ಶಾಸಕರಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರಾ ಹಣಾಹಣಿ ಎಂಬಂತಹ ವಾತಾವರಣ ಕಂಡು ಬರುತ್ತಿದ್ದರೂ ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಅವರನ್ನು ಕಡೆಗಣಿಸುವಂತಿಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರ ಬಿಎಸ್ಪಿ ಪಾಲಾಗಿದೆ. ಆ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಸಹ ಸಂಘಟನಾ ಚತುರ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಫಲಿತಾಂಶದಲ್ಲಿ ಬಿಎಸ್ಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ ಈ ಬಾರಿ ಲೋಕಸಭೆ ಕಣ ಸಾಕಷ್ಟು ರಂಗೇರಲಿದೆ. ಉಳಿದಿರುವ ಇನ್ನು 19 ದಿನಗಳಲ್ಲಿ ಕ್ಷೇತ್ರದಲ್ಲಿ ಏನೆಲ್ಲಾ ರಾಜಕೀಯ ಬೆಳವಣಿಗೆ ಆಗಲಿದೆ, ಚಿತ್ರಣ ಏನಾಗಲಿದೆ, ಪ್ರಚಾರ ಯಾವ ಬಗೆಯಲ್ಲಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಇಬ್ಬರಿಂದ ನಾಮಪತ್ರ ವಾಪಸ್‌

ಚಾಮರಾಜನಗರ: ಲೋಕಸಭೆ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿದ್ದವರ ಪೈಕಿ ಶುಕ್ರವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್‌ ಪಡೆದಿದ್ದು, ಅಂತಿಮ ಕಣದಲ್ಲಿ 10 ಮಂದಿ ಉಳಿದಿದ್ದಾರೆ. ಉಮೇದುವಾರಿಕೆ ಹಿಂಪಡೆಯಲು ಕೊನೆದಿನವಾದ ಶುಕ್ರವಾರ ಪಕ್ಷೇತರ ಅಭ್ಯರ್ಥಿಗಳಾದ ಎಸ್‌.ಎಂ.ಲಿಂಗಯ್ಯ, ಎಂ.ಹೊನ್ನೂರಯ್ಯ ಅವರು ತಮ್ಮ ನಾಮಪತ್ರವನ್ನು ಹಿಂಪಡೆದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಂತಿಮ ಸ್ಪರ್ಧಾ ಕಣದಲ್ಲಿ ಒಟ್ಟು 10 ಮಂದಿ ಉಳಿದಿದ್ದಾರೆ.

ಅಂತಿಮ ಸ್ಪರ್ಧಾ ಕಣ ಹೀಗಿದೆ:

1.ಆರ್‌.ಧ್ರುವನಾರಾಯಣ (ಕಾಂಗ್ರೆಸ್‌ ಪಕ್ಷ )

2.ವಿ.ಶ್ರೀನಿವಾಸ ಪ್ರಸಾದ್‌ (ಭಾರತೀಯ ಜನತಾ ಪಾರ್ಟಿ)

3.ಡಾ.ಶಿವಕುಮಾರ (ಬಹುಜನ ಸಮಾಜ ಪಾರ್ಟಿ)

4.ಎಂ.ನಾಗರಾಜು (ಉತ್ತಮ ಪ್ರಜಾಕೀಯ ಪಾರ್ಟಿ)

5.ಪ್ರಸನ್ನಕುಮಾರ್‌ ಬಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ)

6. ಸುಬ್ಬಯ್ಯ (ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿ)

7. ಆನಂದ. ಜಿ. (ಪಕ್ಷೇತರ)

8. ಎನ್‌.ಅಂಬರೀಷ್‌ (ಪಕ್ಷೇತರ)

9. ಎಂ.ಪ್ರದೀಪ್‌ಕುಮಾರ್‌ (ಪಕ್ಷೇತರ)

10. ಜಿ.ಡಿ.ರಾಜಗೋಪಾಲ್‌ (ಪಕ್ಷೇತರ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ