ಆ್ಯಪ್ನಗರ

ಲಾಕ್‌ಡೌನ್‌ ನಡುವೆ ತುಂಬು ಗರ್ಭಿಣಿ ಮಗಳನ್ನು ನೋಡಲೆಂದು ನದಿಮಾರ್ಗ ಹಿಡಿದ ತಂದೆ ನೀರುಪಾಲು!

ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಗಳನ್ನು ನೋಡಲು ಲಾಕ್ ಡೌನ್ ನಡುವೆಯೇ ಪೊಲೀಸರ ಕಣ್ತಪ್ಪಿಸಿ, ನದಿಯಲ್ಲಿ ಈಜಲು ಹೋದ ತಂದೆಯೊಬ್ಬರು ಸಾವನ್ನಪ್ಪಿದ್ದಾರೆ.

Vijaya Karnataka Web 22 Apr 2020, 7:56 am
ಚಾಮರಾಜನಗರ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗಳನ್ನು ನೋಡಲು ಹೊರಟಾಗ ರಸ್ತೆ ಮಾರ್ಗದಲ್ಲಿ ಸಿಬ್ಬಂದಿ ಬಿಡದ ಕಾರಣ, ನದಿ ಮಾರ್ಗದಲ್ಲಿ ಸಾಗಲು ಯತ್ನಿಸಿ ತಂದೆ ಪ್ರಾಣ ತೆತ್ತ ಹೃದಯ ವಿದ್ರಾವಕ ಘಟನೆ ನಡೆದಿದೆ.
Vijaya Karnataka Web death


ತಮಿಳುನಾಡಿನ ಪೆರುಮಾಳ್‌ (60) ಮೃತರು. ಇವರು ತಮಿಳುನಾಡಿನ ಈರೋಡ್‌ ಜಿಲ್ಲೆಯ ಪಳ್ಳಿಪಾಲ್ಯದ ನಿವಾಸಿ. ಮಗಳು ಸುಮತಿಯನ್ನು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ವ್ಯಕ್ತಿಗೆ ವಿವಾಹ ಮಾಡಿಕೊಟ್ಟಿದ್ದರು.

ಮಗಳು 9 ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ದಿನ ಹತ್ತಿರ ಬಂತೆಂದು ಶನಿವಾರ ತಮಿಳುನಾಡಿನ ಮೆಟ್ಟೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆ ಸಂದರ್ಭದಲ್ಲಿ ಮಗಳನ್ನು ಕಣ್ತುಂಬಿಕೊಂಡು, ಅವಳಿಗೆ ಧೈರ್ಯ ತುಂಬಿ ಮಾತನಾಡಿಸಬೇಕೆಂಬ ಹಂಬಲದಿಂದ ಪೆರುಮಾಳ್‌ ಸೋಮವಾರ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಕಡೆ ಬಂದಿದ್ದಾರೆ. ಆದರೆ, ಅಲ್ಲಿಅವರಿಗೆ ತೆರಳಲು ಅವಕಾಶ ದೊರೆತಿಲ್ಲ. ನಂತರ ಅವರು ನದಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಲಾರ್‌ ಹಳ್ಳಕ್ಕೆ ಇಳಿದು ಈಜಲಾರಂಭಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಈಜಲಾಗದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಟ್ಟೂರು ಮುಖ್ಯ ರಸ್ತೆಯ 200 ಮೀಟರ್‌ ಅಂತರದಲ್ಲೇ ಪಾಲಾರ್‌ ಹಳ್ಳ ಹರಿಯುತ್ತಿದ್ದು, ಒಂದು ತಾಸು ಈಜಿದರೆ ತಮಿಳುನಾಡಿನ ಕಾರೇಕಾಡು ಸಿಗುತ್ತದೆ. ಕಾರೇಕಾಡಿನ ಮೂಲಕ ಪರಿಚಯಸ್ಥರ ಬೈಕ್‌ ಹಿಡಿದು ಮೆಟ್ಟೂರು ತಲುಪಿ ಮಗಳ ಕಾಣಬೇಕೆಂಬ ಹಂಬಲವೇ ತಂದೆಗೆ ಮುಳುವಾಗಿದೆ.

ಈ ದುರ್ಘಟನೆ ಸಂಬಂಧಿಕರು, ಗ್ರಾಮಸ್ಥರನ್ನು ಕಣ್ಣಿರಲ್ಲಿ ಮುಳುಗುವಂತೆ ಮಾಡಿದೆ. ತಮಿಳುನಾಡಿನ ಬರಗೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಸಿಕ್ಕಿದ್ದು, ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ