ಆ್ಯಪ್ನಗರ

ಗುಡ್ಡೇಕೇರಿ ಕಾಲನಿಯಲ್ಲಿ ಗುಡ್ಡದಷ್ಟು ಸಮಸ್ಯೆ

ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡು ಮೂರು ದಶಕಗಳೇ ಕಳೆದರೂ ಈ ಗ್ರಾಮದಲ್ಲಿ ಇಂದಿಗೂ ರಸ್ತೆ, ಚರಂಡಿ, ಮನೆಗಳಿಗೆ ವಿದ್ಯುತ್‌, ಶಾಲೆ ಇತರೆ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ.

Vijaya Karnataka 20 Jun 2019, 5:00 am
ಮಡಹಳ್ಳಿ ಮಹೇಶ್‌ ಗುಂಡ್ಲುಪೇಟೆ
Vijaya Karnataka Web CHN-CHN19GPT2


ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡು ಮೂರು ದಶಕಗಳೇ ಕಳೆದರೂ ಈ ಗ್ರಾಮದಲ್ಲಿ ಇಂದಿಗೂ ರಸ್ತೆ, ಚರಂಡಿ, ಮನೆಗಳಿಗೆ ವಿದ್ಯುತ್‌, ಶಾಲೆ ಇತರೆ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ.

ತಾಲೂಕಿನ ಗುಡ್ಡೇಕೇರಿ ಕಾಲನಿಯ ಜನ ಅತ್ತ ಕಾಡೂ ಅಲ್ಲದ, ಇತ್ತ ನಾಡೂ ಅಲ್ಲದ ಪ್ರದೇಶದಲ್ಲಿದ್ದುಕೊಂಡು ಅತಂತ್ರ ಜೀವನ ನಡೆಸುತ್ತಿದ್ದಾರೆ. ಸಾಲು ಸಾಲು ಸಮಸ್ಯೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಇಲ್ಲಿನ ಜನರದು ನಿತ್ಯ ಯಾತನೆ.

ಗುಡ್ಡೇಕೇರಿ ಕಾಲನಿ ತಾಲೂಕು ಕೇಂದ್ರ ಗುಂಡ್ಲುಪೇಟೆಯಿಂದ 33 ಕಿ.ಮೀ ಅಂತರದಲ್ಲಿದೆ. ಹೋಬಳಿ ಕೇಂದ್ರ ಹಂಗಳದಿಂದ 23 ಕಿ.ಮೀ ಮತ್ತು ಗ್ರಾ.ಪಂ ಕೇಂದ್ರ ಮಂಗಲದಿಂದ 8 ಕಿ.ಮೀ ಅಂತರ.

ಎಲ್ಚೆಟ್ಟಿ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಬೆಟ್ಟದಂಚಿನಲ್ಲಿ ಕಡಿದಾದ ಕಚ್ಚಾ ರಸ್ತೆ ಇದ್ದು, ಬೈಕ್‌, ಟ್ರ್ಯಾಕ್ಟರ್‌ ಹೊರತು ಇನ್ಯಾವುದೇ ವಾಹನವೂ ತೆರಳಲು ಸಾಧ್ಯವಿಲ್ಲದಷ್ಟು ಸಂಪರ್ಕ ರಸ್ತೆ ಕಿರಿದಾಗಿದೆ.

ಬಂಡೀಪುರ ಅರಣ್ಯದೊಳಗಿದ್ದ ಜೇನು ಕುರುಬ ಸಮುದಾಯದವರನ್ನು ಅರಣ್ಯ ನಿಯಮಾನುಸಾರ ಒಕ್ಕಲೆಬ್ಬಿಸಿ, ಕಾಡಂಚಿನಲ್ಲಿ ಪುನರ್ವಸತಿ ಕಲ್ಪಿಸಿ 30 ವರ್ಷಗಳಾಗಿವೆ. ಆದರೂ ಈ ಜನರ ಬದುಕು ಸುಧಾರಿಸಿಲ್ಲ.

ಶಿಕ್ಷ ಣ ವಂಚಿತ ಮಕ್ಕಳು: ಪೋಷಕರು ಮಕ್ಕಳನ್ನು ಕಳುಹಿಸದೇ ಇರುವುದು ಮತ್ತು ಕಾರ್ಯಕರ್ತೆ 2 ಕಿ.ಮೀ ಕಾಡು ದಾರಿಯಲ್ಲಿ ನಡೆದು ಬರಲು ಸಾಧ್ಯವಾಗದ ಕಾರಣ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರ ಬಾಗಿಲು ಮುಚ್ಚಿದೆ.

ಗ್ರಾಮದಲ್ಲಿ 50 ಕುಟುಂಬಗಳಿದ್ದು, ಜನಸಂಖ್ಯೆ 200ರಷ್ಟಿದೆ. ಇಲ್ಲಿ ಹತ್ತಾರು ಮಕ್ಕಳು ಶಿಕ್ಷ ಣ ವಂಚಿತರಾಗಿದ್ದು, ಕಿ.ಮೀ ಅಂತರದ ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಚೆಲುವರಾಯನಪುರ ಬಳಿಗೆ ಬರುವ ಮೂವರು ಮಕ್ಕಳು ಶಾಲೆ ವ್ಯಾನ್‌ನಲ್ಲಿ ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯಲು ತೆರಳುತ್ತಾರೆ.

ಬಂಡೀಪುರ ಆಶ್ರಮ ಶಾಲೆ ಮತ್ತು ಎಲ್ಚೆಟ್ಟಿ ಶಾಲೆಗೆ ಪ್ರವೇಶ ಪಡೆದಿರುವ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದವರು ಯಾರೂ ಇಲ್ಲ. ರಾಜೇಶ ಎಂಬಾತ ಹಂಗಳ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾನೆ. ಗ್ರಾಮದ ಯಾರೊಬ್ಬರು ಸರಕಾರಿ ನೌಕರಿಯಲ್ಲಿಲ್ಲ. ಸರಕಾರ ನೀಡಿರುವ ಜಮೀನುಗಳು ಬೀಳು ಬಿದ್ದಿವೆ. ಕೂಲಿ ಮತ್ತು ಜಾನುವಾರು ಸಾಕಣೆ ಇವರ ಜೀವನಾಧಾರ.

ಸಮರ್ಪಕ ಸೂರಿಲ್ಲ: ಪುನರ್ವಸತಿ ಕಲ್ಪಿಸಿದ ಮತ್ತು ನಂತರದಲ್ಲಿ ನಿರ್ಮಿಸಿದ ಪುಟ್ಟದಾದ ಹೆಂಚಿನ ಮನೆಗಳು ಮುರಿದು ಬೀಳುತ್ತಿವೆ. ಹೀಗಾಗಿ ಮನೆಯನ್ನು ಕೆಲವರು ಕುರಿ ಮೇಕೆ ಕೊಟ್ಟಿಗೆ ಮಾಡಿಕೊಂಡಿದ್ದರೆ. ಇನ್ನೂ ಕೆಲವರು ಮರ, ಬಿದಿರು ಬೊಂಬಗಳನ್ನು ನೆಟ್ಟು ಬೀಳದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ವಾಸವಿದ್ದಾರೆ. ಮತ್ತೆ ಕೆಲವರು ಮನೆಯನ್ನು ಖಾಲಿ ಬಿಟ್ಟಿದ್ದು, ಹಿಂಬದಿಯಲ್ಲಿ ಜೋಪಡಿ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ನಾಲ್ಕಾರು ಕುಟುಂಬಗಳಿಗೆ ಮಾತ್ರ ಸೂಕ್ತ ಸೂರಿದೆ.

ಕುಡಿಯುವ ನೀರು: ಗ್ರಾಮದಲ್ಲಿ ಕುಡಿಯುವ ನೀರಿಗೆ ಒಂದು ಬೋರ್‌ವೆಲ್‌ ಇದ್ದು, 4 ತೊಂಬೆ (ಕಿರು ನೀರು ಸರಬರಾಜು ಘಟಕ)ಗಳನ್ನು ಹಾಕಲಾಗಿದೆ. ವಿದ್ಯುತ್‌ ವ್ಯತ್ಯಯ, ದುರಸ್ತಿ ಸಂದರ್ಭದಲ್ಲಿ ಸುತ್ತಲಿನ ತೋಟ, ಕೆರೆ ಕಟ್ಟೆಯಿಂದ ನೀರು ತರಬೇಕು.

ಗ್ರಾಮದ ಆಯ್ದ ಮನೆಗಳಿಗಷ್ಟೆ ಶೌಚಾಲಯದ ವ್ಯವಸ್ಥೆ ಇದೆ. ಆದರೆ ಗುಂಡಿ ಮುಚ್ಚದ ಮತ್ತು ಸಂಪರ್ಕ ಕಲ್ಪಿಸದ ಕಾರಣ ಬಳಕೆ ಸಾಧ್ಯವಾಗದೇ ಕೆಲವರು ಸ್ನಾನಗೃಹ ಮಾಡಿಕೊಂಡರೆ. ಉಳಿದವರು ನಿರುಪಯುಕ್ತ ವಸ್ತುಗಳನ್ನು ತುಂಬಿಕೊಂಡಿದ್ದು, ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದಾರೆ.
ವಿದ್ಯುತ್‌ ಮಾರ್ಗವಿದ್ದರೂ ಬೆಳಕಿಲ್ಲ

ಗ್ರಾಮದ ಪಶ್ಚಿಮ ಭಾಗದಲ್ಲಿರುವ ಮನೆಗಳ ಕಡೆಗೆ ವಿದ್ಯುತ್‌ ಮಾರ್ಗವಿದೆ. ಆದರೆ, ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ. ಬೀದಿ ದೀಪಗಳು ಮತ್ತು ಸೋಲಾರ್‌ ದೀಪಗಳು ಕೆಟ್ಟು ನಿಂತಿವೆ.

ಹೊಸ ಮನೆಗಳಿರುವ ಕಡೆಗೆ ವಿದ್ಯುತ್‌ ಮಾರ್ಗವಿಲ್ಲ. ಇದಕ್ಕಾಗಿ ನಾಲ್ಕಾರು ವರ್ಷದ ಹಿಂದೆ ತಂದು ಹಾಕಿದ್ದ ವಿದ್ಯುತ್‌ ಕಂಬಗಳು ಅನಾಥವಾಗಿವೆ. ಹೀಗಾಗಿ ಕತ್ತಲಾಗುತ್ತಲೇ ಮನೆ ಸೇರಿಕೊಳ್ಳಬೇಕು.

ಇಷ್ಟೆ ಅಲ್ಲ, ಗ್ರಾಮಕ್ಕೆ ಸಮರ್ಪಕ ಸಂಪರ್ಕ ರಸ್ತೆ ಇಲ್ಲದ ಕಾರಣ ಗ್ರಾಮದ ಜನರು ಪಡಿತರ ಇತರೆ ದಿನಸಿ ಪದಾರ್ಥಗಳನ್ನು ಎಲ್ಚೆಟ್ಟಿ ಗ್ರಾಮದಿಂದ ಹೊತ್ತೊಯ್ಯಬೇಕು. ಆರೋಗ್ಯ ಇತರೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಬೈಕ್‌ ಅಥವಾ ಟ್ರ್ಯಾಕ್ಟರ್‌ ಆಶ್ರಯಿಸಬೇಕಿದೆ.

ಅತ್ಲಾಗೂ ಬೆಟ್ಟ, ಇತ್ಲಾಗೂ ಬೆಟ್ಟ. ಯಾರಿಗೂ ಕಾಣದ ಜಾಗಕ್ಕೆ ನಮ್ಮನ್ನು ತಂದು ಬಿಟ್ಬುಟ್ರು. ನಮ್ಮ ಕಷ್ಟ ಏನು ಅಂತ ಕೇಳೋರಿಲ್ಲ. ಅದು, ಇದು ಕೊಡ್ತೇವೆ ಎಂದು ಬರ್ಕಂಡೋಯ್ತಾರೆ. ಆ ಮೇಲೆ ಏನೂ ಇಲ್ಲ. ನಮ್ಗೂ ಹೇಳಿ ಸಾಕಾಗದ. ಯಾನಂತೇಳದು. ಎಷ್ಟಿಳಿದ್ರೂ ಅಷ್ಟೇಯಾ...

- ಸಣ್ಣಮ್ಮ, ಗ್ರಾಮ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ