ಆ್ಯಪ್ನಗರ

ಹಂಗಳ: ಪಾಳು ಬಿದ್ದ ಕೃಷಿ ಇಲಾಖೆ ಕಟ್ಟಡ !

ತಾಲೂಕಿನ ಹಂಗಳ ಗ್ರಾಮದಲ್ಲಿ ಕೃಷಿ ಇಲಾಖೆಗೆ ಸೇರಿದ ರೈತ ಸಂಪರ್ಕ ಕೇಂದ್ರದ ಹಳೆ ಕಟ್ಟಡ ಪಾಳುಬಿದ್ದಿದೆ.

Vijaya Karnataka 24 Mar 2019, 5:00 am
ಗುಂಡ್ಲುಪೇಟೆ : ತಾಲೂಕಿನ ಹಂಗಳ ಗ್ರಾಮದಲ್ಲಿ ಕೃಷಿ ಇಲಾಖೆಗೆ ಸೇರಿದ ರೈತ ಸಂಪರ್ಕ ಕೇಂದ್ರದ ಹಳೆ ಕಟ್ಟಡ ಪಾಳುಬಿದ್ದಿದೆ.
Vijaya Karnataka Web hangalore the damaged agricultural department building
ಹಂಗಳ: ಪಾಳು ಬಿದ್ದ ಕೃಷಿ ಇಲಾಖೆ ಕಟ್ಟಡ !


ಗ್ರಾಮದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾ.ಪಂ ಕಚೇರಿ ಎದುರಿನಲ್ಲೇ ಇರುವ ಈ ಕಟ್ಟಡ ಹಲವು ದಶಕಗಳಿಂದ ಕೃಷಿ ಇಲಾಖೆ ಕಾರ್ಯ ಚಟುವಟಿಕೆಗಳ ಕೇಂದ್ರವಾಗಿತ್ತು. ಎರಡು ವರ್ಷದ ಹಿಂದೆ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡಕ್ಕೆ ರೈತ ಸಂಪರ್ಕ ಕೇಂದ್ರ ಸ್ಥಳಾಂತರದ ನಂತರ ಹಳೆ ಕಟ್ಟಡದ ಬಾಗಿಲು ಮಚ್ಚಲಾಗಿದೆ.

ಶಿಥಿಲಾವಸ್ಥೆಯತ್ತ ಕಟ್ಟಡ: ಬಳಕೆಗೆ ಬೇಡವಾದ ಕಾರಣ ಕೃಷಿ ಇಲಾಖೆಯವರು ಬೇರೆ ಇಲಾಖೆಗಳ ಬಳಕೆಗೆ ಎರವಲು ನೀಡುವುದು ಅಥವಾ ಇಲಾಖೆಗೆ ಸಂಬಂಧಿಸಿದ ಕೆಲ ಕಾರ್ಯಚಟುವಟಿಕೆಯನ್ನು ಕಟ್ಟಡದಲ್ಲಿ ನಡೆಸುವ ಗೋಜಿಗೆ ಹೋಗಲಿಲ್ಲ. ಇದರಿಂದ ಕಟ್ಟಡ ಚಾವಣಿ, ಸುತ್ತುಗೋಡೆ ಮತ್ತು ಹೊರ ಆವರಣದಲ್ಲಿ ಪಾಪಸ್‌ ಕಳ್ಳಿ, ಬಳ್ಳಾರಿ ಜಾಲಿ, ಕಾಡುರೋಜಾ(ಲಂಟಾನಾ) ಇತರೆ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದೆ.

ಕಿರಿಕಿರಿ: ರೈತ ಸಂಪರ್ಕ ಕೇಂದ್ರದ ಎಡ ಮತ್ತು ಬಲ ಭಾಗದಲ್ಲಿ ಅಂಗವಾಡಿ ಕೇಂದ್ರ, ಗ್ರಾ.ಪಂ ಹಳೇ ಕಟ್ಟಡ(ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವಲಯ ಕಚೇರಿ) ಇತರೆ ಕಟ್ಟಡಗಳಿವೆ. ರೈತ ಸಂಪರ್ಕ ಕೇಂದ್ರದ ಕಟ್ಟಡ ಪಾಳು ಬಿದ್ದಿರುವ ಇಲಿ, ಹೆಗ್ಗಣಗಳು ಬಿಲ ತೋಡಿ ಸುತ್ತುಗೋಡೆ ಶಿಥಿಲವಾಗುತ್ತಿವೆ. ಹಾವು, ಚೇಳು ಇತರೆ ವಿಷಜಂತುಗಳು ಇಲ್ಲಿ ಆಶ್ರಯ ಪಡೆದಿರುವ ಕಾರಣ ಅಕ್ಕಪಕ್ಕದವರಿಗೆ ತೊಂದರೆ ಉಂಟಾಗುತ್ತಿದೆ.

ಅಲ್ಲದೇ ಗ್ರಾ.ಪಂ ಕಚೇರಿ, ನಾಡಕಚೇರಿ ಅಕ್ಕಪಕ್ಕದಲ್ಲಿದ್ದು, ರೈತ ಸಂಪರ್ಕ ಕೇಂದ್ರ ಗೋಪಾಲಸ್ವಾಮಿಬೆಟ್ಟದ ರಸ್ತೆಯಲ್ಲಿರುವ ಕಾರಣ ಕೃಷಿ ಇಲಾಖೆ ಸವಲತ್ತು ಪಡೆಯಲು ಸಲ್ಲಿಸಬೇಕಾದ ಆರ್‌.ಟಿ.ಸಿ ಇತರೆ ಕಂದಾಯ ದಾಖಲೆ ಪಡೆಯಲು ನಾಡಕಚೇರಿಗೆ ಹೋಗಿ ಬರಲು ಸಮಸ್ಯೆಯಾಗುತ್ತಿದೆ. ಆಯಕಟ್ಟಿನ ಸ್ಥಳದಲ್ಲಿ ಈ ರೀತಿ ಕಟ್ಟಡ ಪಾಳು ಬಿದ್ದಿರುವುದು ಜನರಲ್ಲಿ ಬೇಸರ ಉಂಟು ಮಾಡಿದೆ. ಆದ್ದರಿಂದ ರೈತ ಸಂಪರ್ಕ ಕೇಂದ್ರದ ಹಳೇ ಕಟ್ಟಡದಲ್ಲಿ ಕೃಷಿ ಅಥವಾ ಇತರೆ ಯಾವುದಾದರೂ ಇಲಾಖೆ ಸೇವೆ ಸಿಗುವಂತಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯ.


ರೈತ ಸಂಪರ್ಕ ಕೇಂದ್ರದ ಹಳೆ ಕಟ್ಟಡವನ್ನು ಕೃಷಿ ಉಪಕರಣಗಳ ದಾಸ್ತಾನು ಮಾಡಲು ಬಳಕೆ ಮಾಡಲು ಉದ್ದೇಶಿಸಲಾಗಿದೆ. ದುರಸ್ತಿಗಾಗಿ ಪ್ರಸ್ತಾವ ಸಲ್ಲಿಸಿದ್ದು, ದುರಸ್ತಿ ನಂತರ ಸದ್ಬಳಕೆ ಮಾಡಿಕೊಳ್ಳಲಾಗುವುದು.

- ಜಿ.ವೆಂಕಟೇಶ್‌, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ