ಆ್ಯಪ್ನಗರ

ಪಾದುಕೆ ಆಕಾರದಲ್ಲಿ ಮಾನವ ಸರಪಣಿ: ಗಿನ್ನಿಸ್‌ ದಾಖಲೆಗೆ ಯತ್ನ

ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ಗೆ ಯತ್ನ -9 ಕಾಲೇಜಿನ 1290 ವಿದ್ಯಾರ್ಥಿಗಳು ಭಾಗಿ ವಿಕ ಸುದ್ದಿಲೋಕ ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿನ ಕನಕಗಿರಿ ಜೈನ ...

ವಿಕ ಸುದ್ದಿಲೋಕ 30 Jan 2017, 7:38 pm

9 ಕಾಲೇಜಿನ 1290 ವಿದ್ಯಾರ್ಥಿಗಳು ಭಾಗಿ

ಚಾಮರಾಜನಗರ: ತಾಲೂಕಿನ ಮಲೆಯೂರು ಗ್ರಾಮದಲ್ಲಿನ ಕನಕಗಿರಿ ಜೈನ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಿಶಯ ಮಹೋತ್ಸವ ಸಂದರ್ಭದಲ್ಲಿ ವಿಶ್ವದಾಖಲೆ ಮಾಡುವ ಪ್ರಯತ್ನವೊಂದು ಭಾನುವಾರ ನಡೆಯಿತು.

ಕ್ಷೇತ್ರದ ಆದಿ ಪುರುಷ ಪೂಜ್ಯ ಪಾದಾಚಾರ್ಯರ ಬಲ ಭಾಗದ ಪಾದುಕೆಯ ಮಾದರಿಯಲ್ಲಿ 1,290 ವಿದ್ಯಾರ್ಥಿಗಳು 100 ಅಡಿ ಅಗಲ, 200 ಅಡಿ ಉದ್ದ ಐದು ನಿಮಿಷಗಳ ಕಾಲ ನಿಂತು ಅದನ್ನು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ದಾಖಲು ಮಾಡಲು ಪ್ರಯತ್ನಿಸಿದರು. ಈ ದೃಶ್ಯವನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ತಂಡದ ಪ್ರತಿನಿಧಿಗಳು ದಾಖಲಿಸಿಕೊಂಡರು. ಇವರು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ಗಾಗಿ ಈ ದೃಶ್ಯವನ್ನು ಕಳುಹಿಸಿಕೊಡಲಿದ್ದು, ವಾರದ ನಂತರ ಫಲಿತಾಂಶ ಹೊರ ಬೀಳಲಿದೆ.

ಕನಕಗಿರಿಯಲ್ಲಿ 1,500 ವರ್ಷಗಳ ಹಿಂದೆ ಪೂಜ್ಯಪಾದಾಚಾರ್ಯರು ನೆಲೆಸಿದ್ದರು. ಇಂದಿಗೂ ಅವರ ಪಾದುಕೆ ಕುರುಹು ಕನಕಗಿರಿಯಲ್ಲಿದೆ. ಅದರಲ್ಲಿ ಬಲ ಭಾಗದ ಪಾದವನ್ನು ಹೋಲುವ ಆಕಾರವನ್ನು ಬೆಟ್ಟದ ತಪ್ಪಲಲ್ಲಿ ರಚಿಸಿ, ಅದರೊಳಗೆ ಜಿಲ್ಲೆಯ ನಾನಾ 9 ಕಾಲೇಜಿನ 1290 ಮಂದಿ ವಿದ್ಯಾರ್ಥಿಗಳು ಶ್ವೇತಧಾರಿಗಳಾಗಿ, ಕೇಸರಿ ಟೋಪಿಯನ್ನು ತೊಟ್ಟು ನಿಂತಿದ್ದರು.

ಮೇಲ್ಭಾಗದಿಂದ ಈ ದೃಶ್ಯ ದೊಡ್ಡ ಪಾದುಕೆ ಆಕಾರದಲ್ಲಿ ಕಾಣುತ್ತಿತ್ತು. ಐದು ನಿಮಿಷಗಳ ಕಾಲ ಈ ವಿದ್ಯಾರ್ಥಿಗಳು ನಿಂತಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು.

ಡ್ರೋನ್‌ ಮೂಲಕ ಸೆರೆ: ಈ ದೃಶ್ಯವನ್ನು ಡ್ರೋನ್‌ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಯಿತು. ಪಾದುಕೆ ಒಳಗೆ ವಿದ್ಯಾರ್ಥಿಗಳು ಸೇರುವುದು, ನಿಂತು ನಂತರ ಹೊರ ಬರುವ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಇದನ್ನು ಗಿನ್ನಿಸ್‌ ವಿಶ್ವ ದಾಖಲೆಗೆ ಸೇರಿಸಲು ಯತ್ನಿಸಲಾಗಿದೆ. ಇದಲ್ಲದೇ, ಇಷ್ಟೇ ವಿದ್ಯಾರ್ಥಿಗಳು ಸ್ವಸ್ತಿಕ್‌ ಮಾದರಿಯಲ್ಲಿ ನಿಂತು, ದೀಪಗಳನ್ನು ಹಿಡಿದಿರುವ ದೃಶ್ಯವನ್ನೂ ಸಹ ವಿಶ್ವ ದಾಖಲೆಗೆ ಸೇರಿಸುವ ಯತ್ನವೂ ಕನಕಗಿರಿಯಲ್ಲಿ ನಡೆಯಿತು.

Vijaya Karnataka Web human chain of paduka shape for guinness record at kanakagiri
ಪಾದುಕೆ ಆಕಾರದಲ್ಲಿ ಮಾನವ ಸರಪಣಿ: ಗಿನ್ನಿಸ್‌ ದಾಖಲೆಗೆ ಯತ್ನ


ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿಯ ಮುಖಂಡರು, ತೀರ್ಪುಗಾರರು ಹಾಜರಿದ್ದರು. ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಕುತೂಹಲಿಗಳು ನೆರೆದಿದ್ದರು.

ಕನಕಗಿರಿಯಲ್ಲಿ ಜ. 16 ರಿಂದ ನಾನಾ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು, ಭಾನುವಾರ ಗಿನ್ನಿಸ್‌ ರೆಕಾರ್ಡ್‌ಗಾಗಿ ಇಂಥ ಆಕಾರಗಳನ್ನು ವಿದ್ಯಾರ್ಥಿಗಳಿಂದ ರಚಿಸಲಾಗಿತ್ತು.



ಇನ್ನು ಫೆ. 2ರಂದು ಬಾಹುಬಲಿಯ 18 ಅಡಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಗ್ರಹಕ್ಕೆ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ