ಆ್ಯಪ್ನಗರ

ಮಾದರಿ ಜಿಲ್ಲೆಯಾಗಿಸಲು ಸಹಕರಿಸಿ

ಚಾಮರಾಜನಗರಕ್ಕಿರುವ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಳಚಿ ಮುಂದುವರೆದ ಹಾಗೂ ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಎಲ್ಲರೂ ಕಾರ್ಯಶೀಲರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

Vijaya Karnataka 27 Jan 2019, 5:00 am
ಚಾಮರಾಜನಗರ :
ಚಾಮರಾಜನಗರಕ್ಕಿರುವ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಳಚಿ ಮುಂದುವರೆದ ಹಾಗೂ ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಎಲ್ಲರೂ ಕಾರ್ಯಶೀಲರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
Vijaya Karnataka Web model jilleyagisalu cooperate
ಮಾದರಿ ಜಿಲ್ಲೆಯಾಗಿಸಲು ಸಹಕರಿಸಿ


ನಗರದ ಜಿಲ್ಲಾ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,''ಗಣತಂತ್ರ ದಿನದ ಮಹತ್ವ ಸಾರುವ ಜತೆಗೆ, ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ, ಕೈಗೊಂಡಿರುವ ಪ್ರಗತಿ ಕಾರ್ಯದ ಬಗ್ಗೆ ವಿವರಿಸಿದರು. ಅಲ್ಲದೇ ಗಡಿ ಜಿಲ್ಲೆಯನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ,'' ಎಂದು ತಿಳಿಸಿದರು.

''ಭಾರತ ದೇಶವು ಎಲ್ಲ ಜಾತಿ, ಧರ್ಮವನ್ನು ಒಳಗೊಂಡಿದೆ. ಹೀಗಾಗಿ ಸರ್ವರಿಗೂ ಸರಕಾರದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಾರ್ಮಿಕರು, ಮಕ್ಕಳು, ಮಹಿಳೆಯರು, ಹಿರಿಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರಿಗೂ ಸರಕಾರ ಒಂದಿಲ್ಲೊಂದು ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಇದರ ಪ್ರಯೋಜನ ಪಡೆದು, ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು,'' ಎಂದು ಸಲಹೆ ನೀಡಿದರು.

''ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯಲ್ಲಿ 5909 ಮಂದಿ ಗರ್ಭಿಣಿಯರು, 6114 ಮಂದಿ ಬಾಣಂತಿಯರು, 1421 ಮಂದಿ ಅಂಗನವಾಡಿ ಕಾರ‍್ಯಕರ್ತೆಯರು, 1371 ಮಂದಿ ಸಹಾಯಕಿಯರು ಈ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿಯಾದ ಎಲ್ಲ ಮಹಿಳೆಯರಿಗೆ ಆನ್‌ಲೈನ್‌ ಅರ್ಜಿಗಳ ಮೂಲಕ 5 ಸಾವಿರ ರೂ., ಸಹಾಯಧನವನ್ನು ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ 8454 ಫಲಾನುಭವಿಗಳು ಆರ್ಥಿಕ ಪ್ರಯೋಜನ ಪಡೆದಿದ್ದಾರೆ,'' ಎಂದು ವಿವರಿಸಿದರು.

ಕಾರ್ಯಪಡೆ ರಚನೆ: ''ಇನ್ನು ಜಿಲ್ಲೆಯ ಬರ ಪೀಡಿತ ತಾಲೂಕುಗಳಲ್ಲಿ ಈಗಾಗಲೇ ಕಾರ್ಯಪಡೆ ರಚಿಸಲಾಗಿದ್ದು, ಬರ ಪರಿಸ್ಥಿತಿ ಎದುರಿಸಲು ಸರಕಾರ ತಾಲೂಕುಗಳಿಗೆ ತಲಾ 50 ಲಕ್ಷ ರೂ. ಮಂಜೂರು ಮಾಡಿದೆ. ಅಲ್ಲದೇ ಮೇವಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲಾಗಿದೆ. ರೈತರ ಕೃಷಿ ಸಾಲ ಮನ್ನಾ ಮಾಡಿ ಋುಣಮುಕ್ತ ಪತ್ರ ನೀಡಲು ಸಿದ್ಧತೆ ನಡೆಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 43,270 ಮಂದಿ ಫಲಾನುಭವಿಗಳು ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ,''ಎಂದರು.

''ಸಹಕಾರ ಸಂಘಗಳಿಗೆ 191 ಕೋಟಿ ರೂ. ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 131 ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ ಶೇ. 90 ರಷ್ಟು ಡೇಟಾ ಎಂಟ್ರಿ ಮತ್ತು ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ,''ಎಂದು ವಿವರಿಸಿದರು.

ಕೃಷಿ ಉಪಕರಣ: ಕೃಷಿ ಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ, ಲಘು ನೀರಾವರಿ, ಮಣ್ಣು ಆರೋಗ್ಯ ಅಭಿಯಾನ ಇತರೆ ಯೋಜನೆಗಳಡಿ ರೈತರಿಗೆ ಕಾಲ ಕಾಲಕ್ಕೆ ಉಪಯೋಗವಾಗುವಂಥ 376.49 ಲಕ್ಷ ರೂ.ಗಳಲ್ಲಿ 486 ಕೃಷಿ ಹೊಂಡಗಳ ನಿರ್ಮಾಣ ಮಾಡಲಗಿದೆ. 229.38 ಲಕ್ಷ ರೂ. ಗಳಲ್ಲಿ 2889 ರೀತಿಯ ಕೃಷಿ ಉಪಕರಣಗಳನ್ನು ವಿತರಣೆ ಮಾಡಲಾಗಿದೆ,''ಎಂದು ಹೇಳಿದರು.

''ಕೇಂದ್ರ ಸರಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ 23.53 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ನಿಗದಿ ಪಡಿಸಲಾಗಿದೆ. ಈ ಪೈಕಿ ಈವರೆಗೆ 16.86 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, 64.12 ಕೋಟಿ ರೂ. ಮೊತ್ತವನ್ನು ಖರ್ಚು ಮಾಡಲಾಗಿದೆ,'' ಎಂದು ವಿವರಿಸಿದರು.

ಸಮಾರಂಭದಲ್ಲಿ ಸಂಸದ ಆರ್‌. ಧ್ರುವನಾರಾಯಣ, ಜಿ.ಪಂ. ಅಧ್ಯಕ್ಷ ಶಿವಮ್ಮ, ಉಪಾಧ್ಯಕ್ಷ ಯೋಗೀಶ್‌, ತಾ.ಪಂ. ಅಧ್ಯಕ್ಷ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿ.ಪಂ. ಸಿಇಒ ಡಾ.ಕೆ. ಹರೀಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂಧರ್‌ಕುಮಾರ್‌ ಮೀನಾ ಮತ್ತಿತರರು ಹಾಜರಿದ್ದರು.

ಆಕರ್ಷಕ ಪಥ ಸಂಚಲನ, ನೃತ್ಯ

ನಗರದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶನಿವಾರ ಗಣರಾಜ್ಯೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ನಡೆದ ಪಥ ಸಂಚಲನ ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಕಾರ‍್ಯಕ್ರಮ ಆಕರ್ಷಕವಾಗಿತ್ತು. ಪೊಲೀಸ್‌ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಹಾಗೂ ಸಾಮೂಹಿಕ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ