ಆ್ಯಪ್ನಗರ

ಕನ್ನಡದಲ್ಲೇ ಮೊಳಗಲಿ ಮಂತ್ರಘೋಷ: ಹಿರೇಮಗಳೂರು ಕಣ್ಣನ್

ದೇವಾಲಯಕ್ಕೆ ಬರುವ ಕನ್ನಡದ ಭಕ್ತರಿಗೆ ನಾವು (ಅರ್ಚಕರು) ಹೇಳುವ ಮಂತ್ರಘೋಷಗಳು ಅರ್ಥವಾಗಬೇಕು. ಹಾಗಾಗಿ ಕನ್ನಡದಲ್ಲೇ ಮಂತ್ರಗಳನ್ನು ಪಠಿಸಿದರೆ ಸಾರ್ಥಕವಾಗುತ್ತದೆ ಎಂಬುದನ್ನು ಕಣ್ಣನ್‌ ಮನವರಿಕೆ ಮಾಡಿಕೊಟ್ಟರು.

Vijaya Karnataka Web 30 Nov 2020, 10:26 pm
ಚಾಮರಾಜನಗರ: ಜಿಲ್ಲೆಯ ದೇವಾಲಯಗಳಲ್ಲಿ ನಿತ್ಯ ಕನ್ನಡದಲ್ಲೇ ಮಂತ್ರಘೋಷ ಮೊಳಗಿಸುವ ಆಶಯದೊಂದಿಗೆ ಅರ್ಚಕರಿಗೆ, ಸಂಸ್ಕೃತದ ಮಂತ್ರಗಳನ್ನು ಕನ್ನಡದಲ್ಲಿ ಹೇಳಿಕೊಡುವ ವಿಶಿಷ್ಟ ಕಾರ್ಯಾಗಾರ ನಗರದಲ್ಲಿ ಜಿಲ್ಲಾಡಳಿತದಿಂದ ನಡೆಯಿತು.
Vijaya Karnataka Web ಮಂತ್ರ
ಮಂತ್ರ


ಮುಜರಾಯಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರಕ್ಕೆ ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಚಾಲನೆ ನೀಡಿದರು.

ಅರ್ಚಕರಿಗೆ ಕನ್ನಡದಲ್ಲೇ ದೇವರ ಪೂಜೆ, ಮಂತ್ರಘೋಷ ಹೇಳುವ ಬಗೆಯನ್ನು ಕನ್ನಡದ ಪೂಜಾರಿಯೆಂದೇ ಪ್ರಸಿದ್ಧಿ ಪಡೆದಿರುವ ಹಿರೇಮಗಳೂರು ಕಣ್ಣನ್‌, ತಮ್ಮದೇ ಶೈಲಿಯಲ್ಲಿ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರಲ್ಲದೇ ದೇವರು ಎಂದರೆ ನನ್ನ ಪ್ರಕಾರ ದೇ-ದೇಹಾತೀತ, ವ- ವರ್ಗಾತೀತ, ರು- ರೂಪಾತೀತ ಎಂದು ಬಣ್ಣಿಸಿದರು.

ದೇವಾಲಯಕ್ಕೆ ಬರುವ ಕನ್ನಡದ ಭಕ್ತರಿಗೆ ನಾವು (ಅರ್ಚಕರು) ಹೇಳುವ ಮಂತ್ರಘೋಷಗಳು ಅರ್ಥವಾಗಬೇಕು. ಹಾಗಾಗಿ ಕನ್ನಡದಲ್ಲೇ ಮಂತ್ರಗಳನ್ನು ಪಠಿಸಿದರೆ ಸಾರ್ಥಕವಾಗುತ್ತದೆ ಎಂಬುದನ್ನು ಕಣ್ಣನ್‌ ಮನವರಿಕೆ ಮಾಡಿಕೊಟ್ಟರು.

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಾತನಾಡಿ, ''ಪೂಜೆ, ಮಂತ್ರ ಘೋಷ ಮಾಡುವ ಪ್ರಕ್ರಿಯೆ ಕನ್ನಡದಲ್ಲೇ ನಡೆದರೆ ಭಕ್ತರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬ ಆಶಯದೊಂದಿಗೆ ಅರ್ಚಕರಿಗಾಗಿ ಕಾರ್ಯಾಗಾರ ಆಯೋಜಿಸಲಾಗಿದೆ. ದೇವಾಲಯದ ಪೂಜಾ ಕೈಂಕರ್ಯ, ಮಂತ್ರಘೋಷಗಳು, ಪ್ರಾರ್ಥನೆ ಸರಳವಾಗಿ ಕನ್ನಡದಲ್ಲಿಯೂ ಆಗುವ ಮೂಲಕ ಜನರಿಗೆ ಮುಟ್ಟುವಂತಾಗಲಿ. ಸಂಸ್ಕೃತವನ್ನು ಉಳಿಸಿಕೊಂಡು ಮೂಲ ಉದ್ದೇಶಕ್ಕೆ ಯಾವುದೇ ಧಕ್ಕೆ ಬಾರದ ಹಾಗೇ ಮಾರ್ಗದರ್ಶನ ಮಾಡಿಸುವ ಉದ್ದೇಶದೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ'' ಎಂದರು.

''ಜಿಲ್ಲೆಯ ಜನರು ಪ್ರಬುದ್ಧರಾಗಿದ್ದಾರೆ. ಯಾವುದೇ ಉತ್ತಮ ಕಾರ್ಯಗಳಿಗೆ ಜಿಲ್ಲಾಡಳಿತದ ಜತೆಗೆ ಟೊಂಕಕಟ್ಟಿ ನಿಲ್ಲುತ್ತಾರೆ. ಕೊರೊನಾ ವಿರುದ್ದದ ಹೋರಾಟದಲ್ಲಿಯೂ ಸಹಕರಿಸಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆ ಗಮನ ಸೆಳೆಯಲು ನಮ್ಮ ಜಿಲ್ಲೆಯ ಜನತೆ ಕಾರಣರಾಗಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಕಾರ್ಯಾಗಾರ ನಡೆಸಿದ ಹಿರೇಮಗಳೂರು ಕಣ್ಣನ್‌ ಅವರು, ಕನ್ನಡ ಭಾಷೆಯಲ್ಲೇ ಅರ್ಚನೆ, ರಾಷ್ಟ್ರಾಶೀರ್ವಾದ, ಮಂಗಳಾರತಿ ಇತರೆ ವಿಧಿ ವಿಧಾನಗಳನ್ನು ಕನ್ನಡದಲ್ಲೇ ಅರ್ಚಕರಿಗೆ ಬೋಧಿಸಿದರು.

ಪ್ರೇಕ್ಷಕರಿಗೆ ಕಚಗುಳಿ ಇಟ್ಟ ಕಣ್ಣನ್‌


ಇನ್ನು ಭಾನುವಾರ ರಾತ್ರಿ ಇದೇ ಹಿರೇಮಗಳೂರು ಕಣ್ಣನ್‌ ಅವರು ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ 'ಹರಟೆ' ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯಭರಿತ ಮಾತುಗಳಿಂದ ನೆರೆದಿದ್ದ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗುವಂತೆ ಮಾಡಿದರು.

ಕನ್ನಡದ ಭಾಷೆ, ಶ್ರೀಮಂತಿಕೆ ತಿಳಿಸುತ್ತಲೇ ಹಾಸ್ಯದ ಒಗ್ಗರಣೆಯನ್ನು ನಡುವೆ ಹಾಕುತ್ತಾ ಪ್ರೇಕ್ಷಕರಿಗೆ ಕಚಗುಳಿ ಇಟ್ಟರು. ಸಂಸಾರ ಎಂಬುದರ ವಿವರಣೆ, ಪತ್ನಿ, ಉಪ ಪತ್ನಿಯ ಪ್ರಸಂಗಗಳು ಪಟೇಲ್‌ ಸಭಾಂಗಣವೇ ನಗುವಿನಲ್ಲಿ ತೇಲುವಂತೆ ಮಾಡಿದವು. ನಡು ನಡುವೆ ಕನ್ನಡದ ಸಮಯೋಚಿತ ಪದ್ಯಗಳು, ಕವನಗಳು ಅರ್ಥಪೂರ್ಣವಾಗಿದ್ದವು. ಕಣ್ಣನ್‌ ಅವರ ಹರಟೆ ಕಟ್ಟೆಯಲ್ಲಿ ಬಿ.ಎಸ್‌.ವಿನಯ್‌ ಹಾಗೂ ಪ್ರಶಾಂತ್‌ ಸಹ ಇದ್ದು ದನಿಗೂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ