ಆ್ಯಪ್ನಗರ

ಬಾನಂಗಳದಲ್ಲಿ ಚಿತ್ತಾರ, ಹೇಮಂತ್‌ ಝೇಂಕಾರ

ಜಿಲ್ಲಾ ಸಾಂಸ್ಕೃತಿಕ ದಸರಾದ ಕೊನೆ ದಿನ ಬಾನಂಗಳದಲ್ಲಿ ಪಟಾಕಿ ಚಿತ್ತಾರ ಮೂಡಿಸಿದರೆ, ಇತ್ತ ವೇದಿಕೆಯಲ್ಲಿ ಗಾಯಕ ಹೇಮಂತ್‌ ಹಾಗೂ ತಂಡದವರು ಮಳೆ ನಡುವೆಯೂ ಗಾಯನ ರಸಧಾರೆ ಹರಿಸಿದರು.

Vijaya Karnataka 18 Oct 2018, 5:00 am
ಚಾಮರಾಜನಗರ : ಜಿಲ್ಲಾ ಸಾಂಸ್ಕೃತಿಕ ದಸರಾದ ಕೊನೆ ದಿನ ಬಾನಂಗಳದಲ್ಲಿ ಪಟಾಕಿ ಚಿತ್ತಾರ ಮೂಡಿಸಿದರೆ, ಇತ್ತ ವೇದಿಕೆಯಲ್ಲಿ ಗಾಯಕ ಹೇಮಂತ್‌ ಹಾಗೂ ತಂಡದವರು ಮಳೆ ನಡುವೆಯೂ ಗಾಯನ ರಸಧಾರೆ ಹರಿಸಿದರು.
Vijaya Karnataka Web singer hemath perfomence in chamarajanager dasara
ಬಾನಂಗಳದಲ್ಲಿ ಚಿತ್ತಾರ, ಹೇಮಂತ್‌ ಝೇಂಕಾರ


ದಸರಾ ಕಾರ್ಯಕ್ರಮದ ಕೊನೆ ದಿನದ ಅಂಗವಾಗಿ ನಗರದ ಪೇಟೆ ಶಾಲಾವರಣದಲ್ಲಿ ರಾತ್ರಿ 7.30ಕ್ಕೆ ಬಾಣ, ಬಿರುಸು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆದರೆ, ಅಷ್ಟೊತ್ತಿಗೆ ಮಳೆ ಶುರುವಾಯಿತ್ತಾದ್ದರಿಂದ ಸ್ವಲ್ಪ ತಡವಾಗಿ ಬಾಣ ಬಿರುಸು ಶುರುವಾಯಿತು. ಹೀಗಿದ್ದರೂ ಮಳೆ ತುಂತುರು ಇದ್ದೇ ಇತ್ತಾದರೂ ಅದು ಪಟಾಕಿಯ ಬಾಣ ಬಿರುಸಿಗೆ ಅಡ್ಡಿಯಾಗಲಿಲ್ಲ. ತುಂತುರು ಮಳೆ ನಡುವೆಯೇ ಆಕರ್ಷಕ ಬಾಣಗಳು ಬಾನಂಗಳಕ್ಕೆ ಸಿಡಿದು ನಾನಾ ಬಣ್ಣಗಳಾಗಿ ಚೆಲ್ಲಿ ಚಿತ್ತಾರ ಮೂಡಿಸಿದವು. ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಜನತೆ ಹರ್ಷಗೊಂಡರು. ನೆಲದಿಂದ ಸಿಡಿದು ಆಕಾದೆತ್ತರದಲ್ಲಿ ಚಿಮ್ಮಿ ನಾನಾ ಬಣ್ಣಗಳಲ್ಲಿ ಅರಳುತ್ತಿದ್ದ ಬಾಣದ ಮೋಹಕತೆಯ ದೃಶ್ಯಕ್ಕೆ ಜನತೆ ಪುಳುಕಿತರಾದರು. ಸುಮಾರು 15 ನಿಮಿಷಗಳ ಕಾಲ ಬಾಣ, ಬಿರುಸು ಪ್ರದರ್ಶನ ನೋಡುಗರಿಗೆ ಮುದ ನೀಡಿತು.

ಹೇಮಂತ್‌ ರಸಧಾರೆ: ಇನ್ನು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿನ ವೇದಿಕೆಯಲ್ಲಿ ಕೊನೆ ದಿನದಲ್ಲಿ ಕೊನೆ ಕಾರ್ಯಕ್ರಮವಾಗಿ ಹೇಮಂತ್‌ ಹಾಗೂ ತಂಡದವರು ಗಾಯನ ರಸಧಾರೆಯನ್ನೇ ಹರಿಸಿದರು.

ಮಳೆ ಬೀಳುತ್ತಿದ್ದರೂ ಅವರ ಹಾಡುಗಾರಿಕೆ ಮುಂದುವರಿದಿತ್ತು. ಇದಕ್ಕೆ ಕಾರಣ ಮಳೆಯಲ್ಲೂ ನೆನೆಯದ ವೇದಿಕೆ. ಪ್ರೇಕ್ಷಕರಾದಿಯಾಗಿ ಮಳೆಯಲ್ಲಿ ತೋಯದ ರೀತಿಯಲ್ಲಿ ಚಾವಣಿ ಇದ್ದ ಕಾರಣ, ಜೋರು ಮಳೆ ಬಂದರೂ ಹೇಮಂತ್‌ ಗಾಯನಕ್ಕೆ ಅಡ್ಡಿಯಾಗಲಿಲ್ಲ. ವರ್ಷಧಾರೆ ನಡುವೆಯೂ ಕನ್ನಡ ಚಿತ್ರಗಳ ಸುಮಧುರ ಗಾಯನಗಳು ಹರ್ಷಧಾರೆಯಾಗಿ ಹರಿದವು.

ಹೊಸ ಬೆಳಕು ಚಿತ್ರದ ಹೊಸ ಬೆಳಕು ಮೂಡುತಿದೆ...ಸೋಲಿಲ್ಲದ ಚಿತ್ರದ ಈ ಕನ್ನಡ ಮಣ್ಣನು ಮರೀಬೇಡ ಓ ಅಭಿಮಾನಿ.. ಆಪ್ತಮಿತ್ರ ಚಿತ್ರದ ಕಾಲವನ್ನು ತಡೆಯೋರು ಯಾರು ಇಲ್ಲ.. ಎಂಬ ಹಾಡುಗಳಿಗೆ ನೆರೆದಿದ್ದ ಪ್ರೇಕ್ಷಕರು ಶಿಳ್ಳೇ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.

ಮುಂದುವರಿದು ಗೀತಾ ಚಿತ್ರದ ಜೊತೆಯಲಿ.. ಜೊತೆ ಜೊತೆಯಲಿ.. ಟಗರು ಸಿನಿಮಾದ ಟಗರು ಬಂತು ಟಗರು ಹಾಡನ್ನು ಹಾಡಿ ರಂಜಿಸುವ ಮೂಲಕ ಯುವಕ, ಯುವತಿಯರ ಮನಗೆದ್ದರು.

ಇದಕ್ಕೂ ಮೊದಲು ಸ್ಥಳೀಯ ಕಲಾವಿದರಿಂದ ಡೋಲು ಕುಣಿತ, ಜಾನಪದ ನೃತ್ಯ, ಸುಗಮ ಸಂಗೀತ, ಜಾನಪದ ಗಾಯನ ಕಾರ್ಯಕ್ರಮಗಳು ನಡೆದವು. ಇದಲ್ಲದೇ ನಾನಾ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಮುದು ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ