ಆ್ಯಪ್ನಗರ

ನಿವೃತ್ತ ಶಿಕ್ಷಕರಿಂದ ದಣಿವು ತಣಿಸೋ ಕಾರ್ಯ

ನೆರೆಯ ತಮಿಳುನಾಡಿನ ತಾಳವಾಡಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಷಿಯಸ್‌ ಇದೆ. ಇಂಥ ಬಿರು ಬಿಸಿಲಿನಲ್ಲಿ ಬಾಯಾರಿದವರಿಗೆ ಉಚಿತವಾಗಿ ತಣ್ಣನೆಯ ನೀರು ಕೊಡುವ ಕಾರ್ಯವನ್ನು ಇಲ್ಲೊಬ್ಬರು ನಿವೃತ್ತ ಶಿಕ್ಷಕರು ಕೈಗೊಂಡಿದ್ದಾರೆ.

Vijaya Karnataka 21 Apr 2019, 5:00 am
ಚಾಮರಾಜನಗರ : ನೆರೆಯ ತಮಿಳುನಾಡಿನ ತಾಳವಾಡಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಷಿಯಸ್‌ ಇದೆ. ಇಂಥ ಬಿರು ಬಿಸಿಲಿನಲ್ಲಿ ಬಾಯಾರಿದವರಿಗೆ ಉಚಿತವಾಗಿ ತಣ್ಣನೆಯ ನೀರು ಕೊಡುವ ಕಾರ್ಯವನ್ನು ಇಲ್ಲೊಬ್ಬರು ನಿವೃತ್ತ ಶಿಕ್ಷಕರು ಕೈಗೊಂಡಿದ್ದಾರೆ.
Vijaya Karnataka Web tired of retiring teachers from retired teachers
ನಿವೃತ್ತ ಶಿಕ್ಷಕರಿಂದ ದಣಿವು ತಣಿಸೋ ಕಾರ್ಯ


ಚಾ.ನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿಯು ತಾಲೂಕು ಕೇಂದ್ರ ಸ್ಥಾನ. ತಮಿಳುನಾಡಿನ ಸತ್ಯಮಂಗಲ, ಈರೋಡ್‌ನತ್ತ ಹೋಗಿ ಬರುವವರ ಸಂಖ್ಯೆ ಹೆಚ್ಚು. ತಾಲೂಕು ಕೇಂದ್ರವಾದ್ದರಿಂದ ಸರಕಾರಿ ಕಚೇರಿ ಕೆಲಸ, ವ್ಯಾಪಾರ- ವಹಿವಾಟಿಗೆ ಬರುವವರು ಹೆಚ್ಚು.

ಈಗ ಹೇಳಿ, ಕೇಳಿ ರಣ ಬಿಸಿಲು. ಇಂಥ ಹೊತ್ತಿನಲ್ಲಿ ಬಸ್‌ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ, ದಾರಿ ಹೋಕರಿಗೆ ದಣಿವಾದರೆ ಚಿಂತಿಸಬೇಕಿಲ್ಲ. ಸ್ಥಳೀಯ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ಒಂದು ಸಣ್ಣ ಅಂಗಡಿಯಲ್ಲಿ ಮಡಕೆಯ ತಣ್ಣನೆಯ ನೀರು ಲಭ್ಯ. ಈ ನೀರು ಕೊಡಲೆಂದೇ ಒಬ್ಬ ಅಜ್ಜಿ ಇದ್ದಾರೆ. ಯಾರೇ ಬಂದು ನೀರು ಕೇಳಿದರೂ ನೀರು ಲಭ್ಯ.

ಇದೀಗ ಎಲ್ಲವೂ ವಾಣಿಜ್ಯೀಕರಣವಾಗಿದೆ. ಇಂಥ ಸಂದರ್ಭದಲ್ಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತವಾಗಿ ನೀಡಲಾಗುತ್ತದೆ. ದಣಿದು ಬಂದ ಪ್ರಯಾಣಿಕರು, ಬಸ್‌ಗಳ ಚಾಲಕರು, ನಿರ್ವಾಹಕರು ಸೇರಿದಂತೆ ಬಿಸಿಲಲ್ಲಿ ದಣಿದು, ಬಾಯಾರಿದ ಎಲ್ಲರೂ ಈ ತಣ್ಣನೆಯ ನೀರು ಹರಸಿ ಬರುತ್ತಾರೆ. ಆ ಅಜ್ಜಿ ಸಹ ಅಷ್ಟೇ ಸಮಚಿತ್ತದಿಂದ ಯೋಗಕ್ಷೇಮ ವಿಚಾರಿಸುತ್ತಲೇ ನೀರನ್ನು ಕೊಡುತ್ತಾರೆ.

ಜೆಎಸ್‌ಎಸ್‌ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದ ವೆಂಕಟರಾಜು ಅವರು ಈ ಉಚಿತ ಸೇವಾ ಕಾರ್ಯ ಕೈಗೊಂಡಿದ್ದಾರೆ. ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ ಹಾಗೂ ಸಿದ್ದಗಂಗಾ ಶ್ರೀ ಅವರ ಭಾವಚಿತ್ರ ಇರುವ ಪೋಸ್ಟರ್‌ ಅಳವಡಿಸಿ, ನೀರು ವಿತರಣೆ ಮಾಡುವ ವ್ಯವಸ್ಥೆಯನ್ನು ವೆಂಕಟರಾಜು ಮಾಸ್ಟರ್‌ ಕೈಗೊಂಡಿದ್ದಾರೆ.

ಅಂದ ಹಾಗೆ ಇಲ್ಲಿ ನೀರನ್ನು ತಣ್ಣಗಿಡುವ ಸಲುವಾಗಿ ಮರಳು, ಇಟ್ಟಿಗೆ ಇಟ್ಟು. ಅದರ ಮೇಲೆ 3 ದೊಡ್ಡ ಮಣ್ಣಿನ ಮಡಕೆಗಳನ್ನು ಇಡಲಾಗಿದೆ. ಅದಕ್ಕೆ ನೀರು ತುಂಬಿಸಿ, ಹರಸಿ ಬರುವವರಿಗೆ ನೀಡಲಾಗುತ್ತದೆ.

ಪ್ರತಿ ದಿನ ಏನಿಲ್ಲವೆಂದರೂ ಕನಿಷ್ಠ 25 ರಿಂದ 30 ಕೊಡ ನೀರು ಇಲ್ಲಿ ಖಾಲಿ ಆಗುತ್ತದೆ. ದಣಿದು ಬಂದವರಿಗೆ ನೀರು ಕೊಡುವುದು ಪುಣ್ಯದ ಕೆಲಸ. ಅಂಥದ್ದನ್ನು ನಮ್ಮ ವೆಂಕಟರಾಜು ಮಾಸ್ಟರ್‌ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಆನಂದ್‌.

ಈ ಕಾರ್ಯದ ಬಗ್ಗೆ ಅಲ್ಲಿನ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬೇಸಿಗೆ ಕಾಲ ಮುಗಿಯುವ ತನಕ ಈ ಕಾರ್ಯ ನಿತ್ಯ ನಿರಂತರ.

ಬಿಸಿಲಲ್ಲಿ ದಣಿವು ತಣಿಸುವ ಈ ಕಾರ್ಯಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂಬುದು ಅಲ್ಲಿನ ಮಡಕೆಯ ತಣ್ಣನೆಯ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡ ಪ್ರತಿಯೊಬ್ಬರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ