ಆ್ಯಪ್ನಗರ

ಟೊಮೆಟೋ ದರ ಏರಿಳಿತ: ಬೆಳೆಗಾರನಿಗೆ ಸಂಕಷ್ಟ

ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆಯ ಏರಿಳಿತದ ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka 13 Jan 2019, 5:00 am
ಚಾಮರಾಜನಗರ : ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆಯ ಏರಿಳಿತದ ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Vijaya Karnataka Web tomato price fluctuations grower grower
ಟೊಮೆಟೋ ದರ ಏರಿಳಿತ: ಬೆಳೆಗಾರನಿಗೆ ಸಂಕಷ್ಟ


ಎರಡು, ಮೂರು ದಿನಗಳಿಗೊಮ್ಮೆ ಏರಿಳಿತ ಕಾಣುತ್ತಿರುವ ಟೊಮೆಟೋ ದರದಿಂದ ಬೆಳೆಗಾರರು ಗೊಂದಲಕ್ಕೀಡಾಗಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಲೆಗೆ ಉತ್ತಮ ಧಾರಣೆ ಸಿಗುವುದು ವಿರಳ. ಆ ಧಾರಣೆ ಹೆಚ್ಚು ದಿನ ಇರುವುದಿಲ್ಲ. ಏಕಾಏಕಿ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ.

ಏಕಾಏಕಿ ಏರಿಳಿತ: ತಿಂಗಳ ಹಿಂದೆ ಟೊಮೆಟೋ ಬೆಲೆ ನಾಲ್ಕೈದು ರೂಪಾಯಿಗೆ ಇಳಿದದ್ದು ಉಂಟು. ನಂತರ 8-10ರಲ್ಲಿತ್ತು. ಇದೀಗ ಮೂರ್ನಾಲ್ಕು ದಿನಗಳ ಹಿಂದೆ ಕೆಜಿ ಟೊಮೆಟೋ 40ರಿಂದ 50ರೂ.ವರೆಗೂ ಮುಟ್ಟಿತ್ತು. ಇದೀಗ 30ರಿಂದ 25 ರೂ. ಇಳಿಕೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನಿಗದಿಯಾಗಿರುವ ದರ. ಇನ್ನು ರೈತರಿಗೆ 10-12 ರೂ. ಸಿಕ್ಕರೆ ಅದೇ ಹೆಚ್ಚು. ಮಾರುಕಟ್ಟೆಯಲ್ಲಿನ ಈ ವ್ಯತ್ಯಾಸ ರೈತರಿಗೆ ನಷ್ಟವನ್ನು ತಂದೊಡ್ಡುತ್ತಿದೆ. ಆದರೆ, ಮಧ್ಯವರ್ತಿಗಳಿಗೆ ಇದ್ಯಾವುದರ ತಲೆ ನೋವಿಲ್ಲ.

ಇಂದು ಟೊಮೆಟೋ ಬೆಳೆಯಲು ರೈತರು ನಾನಾ ಬಗೆಯ ಸರ್ಕಸ್‌ ಮಾಡಬೇಕು. ಹೀಗಾಗಿ ಖರ್ಚು ಹೆಚ್ಚು. ಟೊಮೆಟೋ ಕೀಳುವ ಕಾರ್ಮಿಕರಿಗೂ ದಿನದ ಕೂಲಿಯೂ ಹೆಚ್ಚು. ಆದರೆ, ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರತೆ ಇಲ್ಲದಿರುವುದು ಬೆಳೆಗಾರರನ್ನು ವಿಚಲಿತರನ್ನಾಗಿಸಿದೆ.

ಜಿಲ್ಲೆಯಲ್ಲಿ ಬೆಳೆದ ಟೊಮೆಟೋ ಕೇರಳ, ತಮಿಳುನಾಡಿಗೂ ಸಾಗಣೆಯಾಗುತ್ತದೆ. ಆದರೂ ದರದಲ್ಲಿನ ಏಕಾಏಕಿ ಏರಿಳಿತದಿಂದ ರೈತರು ಬೇಸತ್ತಿದ್ದಾರೆ.


ಎಷ್ಟು ಪ್ರದೇಶದಲ್ಲಿ ಬೆಳೆ


ಜಿಲ್ಲೆಯಲ್ಲಿ ಒಟ್ಟು 3,550 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋವನ್ನು ವಾರ್ಷಿಕವಾಗಿ ಬೆಳೆಯಲಾಗುತ್ತದೆ. ಟೊಮೆಟೋ ವಾರ್ಷಿಕ ಒಟ್ಟು ಇಳುವರಿ 81 ಸಾವಿರ ಮೆಟ್ರಿಕ್‌ ಟನ್‌ .

ಉತ್ತಮ ವಿಧಾನದಲ್ಲಿ ಹೈಬ್ರೀಡ್‌ ಟೊಮೆಟೋವಾದರೆ ಒಂದು ಹೆಕ್ಟೇರ್‌ಗೆ ಅಂದಾಜು 50 ರಿಂದ 65 ಟನ್‌ ಇಳುವರಿ ಬರಲಿದೆ. ಸಾಮಾನ್ಯ ಬೆಳೆಯಾದರೂ ಹೆಕ್ಟೇರ್‌ಗೆ 30 ಟನ್‌ಗೆ ಮೋಸವಿಲ್ಲ.

ಮೂರು ಋುತುವಿನಲ್ಲಿ: ಟೊಮೆಟೋವನ್ನು ವರ್ಷದಲ್ಲಿ ಮೂರು ಬಾರಿ ಬೆಳೆಯಲಾಗುತ್ತದೆ. ಮುಂಗಾರು, ಹಿಂಗಾರು ಅಲ್ಲದೇ ಬೇಸಿಗೆಯಲ್ಲೂ ಟೊಮೆಟೋ ಬೆಳೆಯಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.

ಮಾರುಕಟ್ಟೆಯಲ್ಲಿ ಟೊಮೆಟೋ ಬೆಳೆ ಏಕಾಏಕಿ ಏರಿಳಿತ ಕಾಣುತ್ತಿದೆ. ಇಂದು ಇದ್ದ ಬೆಲೆ ನಾಳೆಗೆ ಬದಲಾಗುತ್ತದೆ. ಮೂರ್ನಾಲ್ಕು ದಿನಗಳ ಹಿಂದೆ ಇದ್ದ ಬೆಲೆಯನ್ನು ನಂಬಿ ಮಾರುಕಟ್ಟೆಗೆ ಟೊಮೆಟೋ ತಂದರೆ, ಅದರ ಅರ್ಧ ಬೆಲೆಗೆ ಕೇಳುತ್ತಾರೆ. ಈ ರೀತಿಯಾದರೆ ನಾವೇನು ಮಾಡೋದು. ರೈತರ ಬೆಳೆಗಳಿಗೆ ಸ್ಥಿರ ಬೆಲೆ ಸಿಗುವುದು ಯಾವಾಗ ?

-ಬಸವಣ್ಣ, ಟೊಮೆಟೋ ಬೆಳೆಗಾರ


==

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ