ಆ್ಯಪ್ನಗರ

ರಸ್ತೆಯೇ ಬಸ್‌ ನಿಲ್ಧಾಣ, ಬಳಕೆಗೆ ಬಾರದ ತಂಗುದಾಣ

ನಗರದಲ್ಲಿ ಶಿಡ್ಲಘಟ್ಟ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬಸ್‌ ತಂಗುದಾಣ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದು, ಇನ್ನೊಂದೆಡೆ ಬಸ್‌ಗಳ ಚಾಲಕರು ರಸ್ತೆಯನ್ನೇ ನಿಲ್ದಾಣ ಮಾಡಿಕೊಂಡು ಸವಾರರಿಗೆ ಇನ್ನಿಲ್ಲದ ತೊಂದರೆ ಕೊಡುವ ಪ್ರವೃತ್ತಿ ರೂಢಿಯಲ್ಲಿದೆ.

Vijaya Karnataka 25 Jun 2019, 3:54 pm
ಬಸ್‌ ನಿಂತೆಡೆ ಓಡುವ ಪ್ರಯಾಣಿಕರು | ತಂಗುದಾಣಗಳು ಮಾದಕ ವ್ಯಸನಿಗಳ ಅಡ್ಡೆಗಳು
Vijaya Karnataka Web CBP-24CBPD5

ಕೆಂಪೇಗೌಡ ಎನ್‌.ವೆಂಕಟೇನಹಳ್ಳಿ
ಚಿಕ್ಕಬಳ್ಳಾಪುರ:
ನಗರದಲ್ಲಿ ಶಿಡ್ಲಘಟ್ಟ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬಸ್‌ ತಂಗುದಾಣ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದು, ಇನ್ನೊಂದೆಡೆ ಬಸ್‌ಗಳ ಚಾಲಕರು ರಸ್ತೆಯನ್ನೇ ನಿಲ್ದಾಣ ಮಾಡಿಕೊಂಡು ಸವಾರರಿಗೆ ಇನ್ನಿಲ್ಲದ ತೊಂದರೆ ಕೊಡುವ ಪ್ರವೃತ್ತಿ ರೂಢಿಯಲ್ಲಿದೆ.

ಮಾದಕ ವ್ಯಸನಿಗಳ ಅಡ್ಡೆ: ಸರಕಾರ ಲಕ್ಷಾಂತರ ಹಣ ಖರ್ಚು ಮಾಡಿ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ತಂಗುದಾಣ ನಿರ್ಮಾಣ ಮಾಡಿದರೆ ಅಲ್ಲಿ ಯಾವುದೇ ಬಸ್‌ಗಳು ನಿಲ್ಲುವುದಿಲ್ಲ. ಸಧ್ಯ ಬಸ್‌ ತಂಗುದಾಣಗಳು ಬೀಡಿ, ಸಿಗರೇಟ್‌, ತಂಬಾಕು ಸವಿಯಲು ಬಳಕೆಗೆ ಉಪಯುಕ್ತವಾಗುತ್ತಿವೆ. ಕೆಲವೊಂದು ಗ್ರಾಮಗಳ ಕಡೆಯಲ್ಲಿರುವ ತಂಗುದಾಣಗಳು ರಾತ್ರಿ ವೇಳೆಯಲ್ಲಿ ಕುಡುಕರ ತಾಣವಾಗಿಯೂ ಮಾರ್ಪಟ್ಟಿದೆ.

ಎಲ್ಲೆಂದರಲ್ಲಿ ಬಸ್‌ ನಿಲುಗಡೆ:
ನಗರದಿಂದ ನಾನಾ ಕಡೆ ಸಂಚರಿಸುವ ಬಸ್‌ಗಳು ರಸ್ತೆ ಮೇಲೆ ಎಲ್ಲೆಂದರಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಈವರೆಗೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಇದರ ಬಗ್ಗೆ ಗಮನ ಹರಿಸಿದ ಉದಾಹರಣೆ ಇಲ್ಲ ಎನ್ನುವುದು ಪ್ರಜ್ಞಾವಂತರ ಅಳಲು.

ಬೆಂಗಳೂರು ಮತ್ತು ಬಾಗೇಪಲ್ಲಿ ಕಡೆಯಿಂದ ಬರುವ ವಾಹನಗಳಿಗೆ ಅಂಬೇಡ್ಕರ್‌ ವೃತ್ತದಲ್ಲಿ ತಿರುವು ಪಡೆಯುವ ಜಾಗದಲ್ಲಿಯೇ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರ ಸಂತೆ ನೆರೆದಿರುತ್ತದೆ. ಖಾಸಗಿ, ಕೆಎಸ್ಸಾರ್‌ಟಿಸಿ ಎನ್ನದೇ ಎಲ್ಲ ಚಾಲಕರೂ ಸಂಚಾರ ನಿಯಮಗಳಿಗೆ ತಿಲಾಂಜಲಿ ಇಟ್ಟು ಪೈಪೋಟಿಯಲ್ಲಿ ಜನರಿಗೆ ತೊಂದರೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಪ್ರಯಾಣಿಕರಿಗೆ ಸಂಕಟ: ಶಾಲೆ, ಕಾಲೇಜುಗಳು ಆರಂಭ ಹಾಗೂ ಬಿಡುವಿನ ವೇಳೆಯಲ್ಲಿ ಈ ರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಹಿಡಿಯುವುದು ಒಂದು ಸಾಹಸದಂತಾಗಿದೆ. ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳು ನಿರ್ಲಕ್ಷ ್ಯದಿಂದಾಗಿ ಅಧಿಕೃತ, ಅಘೋಷಿತ ಬಸ್‌ ನಿಲ್ದಾಣಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವುದು ಪ್ರಯಾಣಿಕರಿಗೆ ಸಂಚರಿಸಲು ಇನ್ನಿಲ್ಲದ ಸಂಕಟ ಪಡುವಂತಾಗಿದೆ.

ಬಸ್‌ ನಿಲ್ಲಿಸಿದೆಡೆ ಓಡಬೇಕು: ಯಾವುದೇ ಬಸ್‌ಗಳನ್ನು ಬಸ್‌ ನಿಲ್ದಾಣಗಳಲ್ಲಿ ನಿಲ್ಲಿಸುವುದಿಲ್ಲ. ಕೆಲವಡೆ ನಿಲ್ದಾಣ ಬಿಟ್ಟು ದೂರದಲ್ಲಿ ನಿಲ್ಲಿಸಲಾಗುತ್ತದೆ. ಬಸ್‌ ಹತ್ತುವದಕ್ಕೆ ಓಡಿ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ಬಸ್‌ ಹತ್ತುವುದಕ್ಕೆ ಪರದಾಡಬೇಕು. ಆದ್ದರಿಂದ ಸಂಬಂಧಪಟ್ಟವರು ಬಸ್‌ ನಿಲ್ದಾಣಗಳಲ್ಲಿಯೇ ಬಸ್‌ ನಿಲುಗಡೆಗೆ ಕ್ರಮ ವಹಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ತಂಗುದಾಣ ಇದ್ದರೂ ಬಳಕೆ ಇಲ್ಲ!
ನಗರದ ಜೂನಿಯರ್‌ ಕಾಲೇಜು ಮುಂಭಾಗವಿರುವ ಬಸ್‌ ತಂಗುದಾಣ, ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸ್‌ ತಂಗುದಾಣ, ಜಿಲ್ಲಾಡಳಿತ ಭವನದ ಎದುರು ಇರುವ ತಂಗುದಾಣ, ತಾಲೂಕಿನ ದಿಬ್ಬೂರಿನಲ್ಲಿರುವ ತಂಗುದಾಣ, ನಾಲ್ಕೈದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಗಂಗರೆ ಕಾಲುವೆಯಲ್ಲಿರುವ ಬಸ್‌ ತಂಗುದಾಣಗಳಲ್ಲಿ ಬಸ್‌ ಚಾಲಕರು ನಿಲುಗಡೆ ಮಾಡದೇ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಹವ್ಯಾಸ ಮುಂದುವರೆದಿರುವುದರಿಂದ ಪ್ರಯಾಣಿಕರ ಬಳಕೆಗೆ ಬಾರದಿರುವುದು ತಂಗುದಾಣಗಳು ಇದ್ದು ಇಲ್ಲದಂತಾಗಿದೆ.

ಹೊಸದಾಗಿ ಎಲ್ಲೆಲ್ಲಿ ತಂಗುದಾಣ ಆಗ್ಬೇಕು
ನಗರದಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಬಿ.ಬಿ ರಸ್ತೆಯ ಅಂಬೇಡ್ಕರ್‌ ವೃತ್ತದ ಬಳಿ, ಜೂನಿಯರ್‌ ಕಾಲೇಜು ಮುಂಭಾಗ ಆಗಬೇಕಿದೆ. ಇನ್ನೂ ಗೌರಿಬಿದನೂರು ರಸ್ತೆಯಲ್ಲಿನ ಜಿಲ್ಲಾಸ್ಪತ್ರೆಯ ಹೋಗುವ ತಿರುವಿನಲ್ಲಿ, ಎಪಿಎಂಸಿ ಮಾರುಕಟ್ಟೆ ಬಳಿ, ಬಾಗೇಪಲ್ಲಿಗೆ ಪ್ರಯಾಣಿಸಲು ಗ್ರಂಥಾಲಯದ ಮುಂಭಾಗ ಸೇರಿದಂತೆ ಹಲವೆಡೆ ಹೊಸದಾಗಿ ಬಸ್‌ ತಂಗುದಾಣಗಳನ್ನು ನಿರ್ಮಿಸುವ ಅವಶ್ಯಕತೆ ಇದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಯಾವುದೇ ಪ್ರಯಾಣಿಕರು ಬಸ್‌ ತಂಗುದಾಣದತ್ತ ಹೋಗದ ಸನ್ನಿವೇಶ ಸೃಷ್ಟಿಸಿದ್ದಾರೆ. ಹೀಗಾಗಿ ಚೆನ್ನಾಗಿರುವ ತಂಗುದಾಣಗಳು ಸಹ ಬೀದಿ ನಾಯಿಗಳ ಆವಾಸಸ್ಥಾನಗಳಾಗುತ್ತಿವೆ. ಜಿಲ್ಲಾಡಳಿತ ಇರುವ ಈ ರಸ್ತೆಯಲ್ಲಿ ಪ್ರತಿ ದಿನ ಅಧಿಕಾರಿಗಳು ಹಾದು ಹೋಗುತ್ತಾರೆ. ಇಂತಹ ರಸ್ತೆಯಲ್ಲಿಯೇ ಈ ಪರಿಸ್ಥಿತಿ ಇದ್ದರೆ ಬೇರೆ ಕಡೆಯ ಕಥೆ ಕೇಳುವಂತೆಯೇ ಇಲ್ಲ.
-ಬಿ.ಎನ್‌.ಮುನಿಕೃಷ್ಣ, ನಾಯನಹಳ್ಳಿ ರೈತ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ