ಆ್ಯಪ್ನಗರ

ರಾಜೀನಾಮೆ ಹಿಂಪಡೆದ ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌

ರಾಜ್ಯದಲ್ಲಿ ದಿಢೀರ್‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಮತ್ತು ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರು ತಮ್ಮ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

Vijaya Karnataka 12 Jul 2019, 4:37 pm
ಉಪಾಧ್ಯಕ್ಷೆ ಪಿ.ನಿರ್ಮಲಾ ಅವರಿಂದಲೂ ರಾಜೀನಾಮೆ ವಾಪಸ್‌ | ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವರಿಷ್ಠರ ಸೂಚನೆ
Vijaya Karnataka Web
ರಾಜೀನಾಮೆ ಹಿಂಪಡೆದ ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ


ರಾಜ್ಯದಲ್ಲಿ ದಿಢೀರ್‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಮತ್ತು ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರು ತಮ್ಮ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಏರಲು ಕಸರತ್ತು ನಡೆಸಿದವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕ್ಷಿಪ್ರ ರಾಜಕೀಯ ಬೆಳವಣಿಗೆ ನಡುವೆ ಶಾಸಕ ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್‌ ತೊರೆದು ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ವದಂತಿ ಇದೆ.

ಸುಧಾಕರ್‌ ಮಂಗಳವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿಯೇ ಇದ್ದರೂ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷ ದ ಸಭೆಗೆ ಹಾಜರಾಗದಿರುವುದು ಈ ವದಂತಿಗೆ ಪುಷ್ಟಿ ನೀಡಿತ್ತು. ಹೀಗಾಗಿ ಕಾಂಗ್ರೆಸ್‌ ವರಿಷ್ಠರು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಅವರ ಆಪ್ತ ಮಂಜುನಾಥ್‌ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ ರಾಜಕೀಯ ಪ್ರಕ್ಷ ುಬ್ಧತೆ ಸಹಜ ಸ್ಥಿತಿಗೆ ಮರಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಮಂಜುನಾಥ್‌ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

ಶಾಸಕ ಸುಧಾಕರ್‌ ಅವರ ಬೆಂಬಲಿಗ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಪೂರ್ವದಲ್ಲಿ ಆದ ಒಪ್ಪದದಂತೆ ಪಕ್ಷ ದ ವರಿಷ್ಠರ ಸೂಚನೆಮೇರೆಗೆ ಮಂಜುನಾಥ್‌ ಅವರು ಕಳೆದ ಜೂ.26ರಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅಥೀಕ್‌ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬೆನ್ನಲ್ಲೇ ಉಪಾಧ್ಯಕ್ಷೆ ನಿರ್ಮಲಾ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಜುಲೈ 11 ಕಡೆಯ ದಿನವಾಗಿತ್ತು

ಮಂಜುನಾಥ್‌ ಅವರ ರಾಜೀನಾಮೆ ಕಾನೂನುಬದ್ಧವಾಗಿ ಅಂಗೀಕಾರಗೊಳ್ಳಲು ಗುರುವಾರ (ಜುಲೈ 11) ಕೊನೆಯ ದಿನವಾಗಿತ್ತು. ಹೀಗಾಗಿ ಅಧ್ಯಕ್ಷ ರ ಹುದ್ದೆಗಾಗಿ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಕ್ಷೇತ್ರದ ಪಿ.ಎನ್‌.ಪ್ರಕಾಶ್‌, ಚಿಂತಾಮಣಿಯ ಊಲವಾಡಿ ಕ್ಷೇತ್ರದ ಸದಸ್ಯ ಶಿವಣ್ಣ, ಬಾಗೇಪಲ್ಲಿ ಕಸಬಾ ಕ್ಷೇತ್ರದ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ (ಚಿನ್ನಿ) ಅವರ ನಡುವೆ ಪೈಪೋಟಿ ನಡೆದಿತ್ತು.

ಈ ಪೈಕಿ ಅಧ್ಯಕ್ಷ ಸ್ಥಾನ ಶಾಸಕ ಸುಧಾಕರ್‌ ಅವರ ಆಪ್ತ ಪ್ರಕಾಶ್‌ ಅವರಿಗೆ ಮತ್ತು ಬಿಸಿಎಂಎ (ಮಹಿಳೆ)ಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನ ಶಿವಶಂಕರರೆಡ್ಡಿ ಅವರ ಬೆಂಬಲಿಗರಾದ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಅವರಿಗೆ ಸಿಗುವುದು ಖಚಿತವಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ಸುಧಾಕರ್‌ ಅವರ ನಡೆಯಿಂದ ಆಕ್ರೋಶಗೊಂಡ ಕಾಂಗ್ರೆಸ್‌ ವರಿಷ್ಠರು ತಮ್ಮ ನಿರ್ಧಾರ ಬದಲಿಸಿದರು ಎನ್ನಲಾಗಿದೆ.

''ರಾಜೀನಾಮೆ ಬಳಿಕ ನಿರಾಳವಾಗಿ ಹೊಸ ಜೀವನ ಶೈಲಿ ರೂಢಿಸಿಕೊಂಡಿದ್ದೆ. ವೈಯಕ್ತಿಕ ಕೆಲಸಗಳತ್ತ ಗಮನ ಹರಿಸಿದ್ದೆ. ಪ್ರವಾಸದ ಯೋಚನೆಯಲ್ಲಿದ್ದೆ. ಆದರೆ ಈ ರೀತಿ ಆಗುತ್ತದೆ ಎಂದು ಕನಸಿನಲ್ಲೂ ಎಂದುಕೊಂಡಿರಲಿಲ್ಲ. ಮಂಗಳವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ರು, ಸಿದ್ದರಾಮಯ್ಯ ಅವರು ನನಗೆ ರಾಜೀನಾಮೆ ಹಿಂಪಡೆಯುವಂತೆ ಸಚಿವ ಶಿವಶಂಕರರೆಡ್ಡಿ ಅವರ ಮೂಲಕ ಸೂಚಿಸಿದರು. ಅದರಂತೆ ನಾನು ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆದುಕೊಂಡೆ,'' ಎಂದು ಮಂಜುನಾಥ್‌ ಹೇಳಿದರು.

ವರಿಷ್ಠರ ಬದಲಾದ ಈ ನಡೆ ಕುರಿತು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಶಿವಣ್ಣ ಅವರನ್ನು ಪ್ರಶ್ನಿಸಿದರೆ, ನಮ್ಮ ಪಕ್ಷ ಮತ್ತು ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಆಗುವುದೆಲ್ಲ ಒಳ್ಳೆಯದಕ್ಕೆ. ನಾವು ಎಲ್ಲರ ಜತೆ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಸುಧಾಕರ್‌ ಅವರು ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದ್ದು, ಹೀಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್‌ ವರಿಷ್ಠರು ಮುಂಬರುವ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ಪಕ್ಷದ ವರಿಷ್ಠರು ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಎಲ್ಲ ಸದಸ್ಯರು ನನ್ನೊಂದಿಗೆ ವಿಶ್ವಾಸದೊಂದಿಗೆ ಇದ್ದಾರೆ. ಹೀಗಾಗಿ ಸದ್ಯ ನಾನು ಆದ್ಯತೆಮೇರೆಗೆ ಬರಪರಿಹಾರ, ಕುಡಿಯುವ ನೀರು, ಶಿಕ್ಷ ಣಕ್ಕೆ ಸಂಬಂಧಿಸಿದ ವಿಚಾರಗಳತ್ತ ಗಮನ ಹರಿಸುವೆ.
-ಎಚ್‌.ವಿ.ಮಂಜುನಾಥ್‌, ಜಿಪಂ ಅಧ್ಯಕ್ಷ

ಇವತ್ತಿನ ರಾಜ್ಯ ರಾಜಕೀಯದಲ್ಲಾಗುತ್ತಿರುವ ಬದಲಾವಣೆಗಳಿಂದ ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಲು ಸಮಯ ಹಿಡಿಯಬಹುದು. ಹಾಗಾಗಿ ನಿಮ್ಮ ರಾಜೀನಾಮೆಯನ್ನು ವಾಪಸ್‌ ಪಡೆಯುವಂತೆ ಸಿದ್ಧರಾಮಯ್ಯ ಅವರು ಸೂಚನೆ ನೀಡಿದ್ದರು. ಅದರಂತೆ ನಾವು ರಾಜೀನಾಮೆ ವಾಪಸ್‌ ಪಡೆದಿದ್ದೇವೆ.
-ಪಿ.ನಿರ್ಮಲಾ ಮುನಿರಾಜು, ಜಿಪಂ ಉಪಾಧ್ಯಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ