ಆ್ಯಪ್ನಗರ

80% ಕಿಸಾನ್‌ ಸಮ್ಮಾನ್‌ ಅರ್ಜಿ ಸಲ್ಲಿಕೆ, ಗಡುವು ಮುಂದಕ್ಕೆ

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1,08,324 ಅರ್ಜಿ ಸಲ್ಲಿಕೆಯಾಗಿವೆ.

Vijaya Karnataka 11 Jul 2019, 3:12 pm
ಚಿಕ್ಕಬಳ್ಳಾಪುರ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1,08,324 ಅರ್ಜಿ ಸಲ್ಲಿಕೆಯಾಗಿವೆ.
Vijaya Karnataka Web 80 of kisan samman submission deadline ahead
80% ಕಿಸಾನ್‌ ಸಮ್ಮಾನ್‌ ಅರ್ಜಿ ಸಲ್ಲಿಕೆ, ಗಡುವು ಮುಂದಕ್ಕೆ


ಬಾಗೇಪಲ್ಲಿ ತಾಲೂಕಿನಲ್ಲಿ 17,015, ಚಿಕ್ಕಬಳ್ಳಾಪುರದಲ್ಲಿ 17,767, ಚಿಂತಾಮಣಿಯಲ್ಲಿ 22,282, ಗೌರಿಬಿದನೂರು 25,223, ಗುಡಿಬಂಡೆ 7,194 ಹಾಗೂ ಶಿಡ್ಲಘಟ್ಟದಲ್ಲಿ 18,843 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಕೃಷಿ ಇಲಾಖೆಯಿಂದ 47,081, ತೋಟಗಾರಿಕೆ ಇಲಾಖೆಯಿಂದ 1069, ಪಶುಸಂಗೋಪನಾ ಇಲಾಖೆಯಿಂದ 11, ರೇಷ್ಮೆ ಇಲಾಖೆಯಿಂದ 1415, ನಾಡಕೇಂದ್ರಗಳಿಂದ 5473, ಗ್ರಾಮ ಪಂಚಾಯಿತಿಗಳಿಂದ 24039, ಗ್ರಾಮ ಲೆಕ್ಕಾಧಿಕಾರಿಗಳಿಂದ 26,463 ಹಾಗೂ ಸಿಎಸ್‌ಇ ಗಳಿಂದ 2773 ಅರ್ಜಿಗಳು ಸಲ್ಲಿಕೆಯಾಗಿವೆ.

1.86 ಲಕ್ಷ ರೈತ ಫಲಾನುಭವಿಗಳು:
ಜಿಲ್ಲೆಯಲ್ಲಿ ಒಟ್ಟು 2.14 ಲಕ್ಷ ಭೂಹಿಡುವಳಿದಾರರಿದ್ದು, ಈ ಪೈಕಿ 1.86 ಲಕ್ಷ ರೈತರು ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯ ಅರ್ಹ ಪಲಾನುಭವಿಗಳಾಗಿದ್ದಾರೆ. ಇದರಲ್ಲಿ 4,383 ಮಂದಿ ರೈತರಿಗೆ ಈಗಾಗಲೇ ಯೋಜನೆಯ ಮೊದಲ ಕಂತಿನ ಹಣ ಒಟ್ಟು 87.66 ಲಕ್ಷ ರೂ. ಜಮಾ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃಷಿ ಇಲಾಖೆಯಿಂದ ಪಟ್ಟಿ ತಯಾರಿಕೆ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತ ಖಾತೆಗೆ ವಾರ್ಷಿಕ 6000 ರೂ. ನೇರ ನಗದು ಪಾವತಿಸುವುದಾಗಿ ಪ್ರಕಟಿಸಿ ಇದಕ್ಕಾಗಿ 75 ಸಾವಿರ ಕೋಟಿ ರೂ. ಅನುದಾನ ಕೂಡ ಮೀಸಲಿಟ್ಟಿತ್ತು. ಏಪ್ರಿಲ್‌ ಅಂತ್ಯದೊಳಗೆ 2 ಕಂತುಗಳಲ್ಲಿ 4000 ರೂ.ಗಳನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕುವ ಗುರಿ ಹೊಂದಲಾಗಿದೆ. ಇದರ ಪ್ರಕಾರ ದೇಶದಲ್ಲಿ 12 ಕೋಟಿ ರೈತರಿಗೆ ಒಟ್ಟು 20 ಸಾವಿರ ಕೋಟಿ ರೂ. ಹಣ ಸಂದಾಯವಾಗಲಿದೆ. ಈ ಸಂಬಂಧ ರಾಜ್ಯಗಳಿಂದ ರೈತರ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತರಿಸಿಕೊಂಡಿದ್ದು, ಮೊದಲ ಹಂತದಲ್ಲಿ ಕೆಲ ರೈತರಿಗೆ ಪ್ರೋತ್ಸಾಹ ಧನವನ್ನೂ ಬಿಡುಗಡೆ ಮಾಡಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿ ಇಲಾಖೆಯ ಅಧಿಧಿಕಾರಿಗಳು ಸಣ್ಣ ಮತ್ತು ಅತಿ ಸಣ್ಣ ರೈತರ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಶೇ.80ರಷ್ಟು ನೊಂದಣಿ ಪ್ರಕ್ರಿಯೆ ಮುಗಿದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ, ಹೇಗೆ ನೊಂದಣಿ?
ಪಿಎಂ-ಕಿಸಾನ್‌ ಯೋಜನೆಯಡಿ ಹೆಸರು ನೊಂದಾಯಿಸಿಕೊಳ್ಳಲು ಅನುಬಂಧ ಸಿ,ಡಿ,ಇ ಎಂಬ ಮೂರು ವಿವಿಧ ಅರ್ಜಿ ನಮೂನೆಗಳು ಇವೆ. ಫಲಾನುಭವಿ ಪಟ್ಟಿಯಲ್ಲಿ ಹೆಸರಿದ್ದು, ಯೋಜನೆಯ ಫಲ ಪಡೆಯಲು ಒಪ್ಪುವುದಕ್ಕೆ ನಮೂನೆ-ಸಿ, ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದು, ಅದನ್ನು ಸೇರಿಸಲು ನಮೂನೆ-ಡಿ, ಪಟ್ಟಿಯಲ್ಲಿ ಹೆಸರು ಇದ್ದೂ ನೆರವು ಅಗತ್ಯವಿಲ್ಲದಿದ್ದಲ್ಲಿ ತೆಗೆದು ಹಾಕುವಂತೆ ಮನವಿ ಮಾಡಲು ನಮೂನೆ-ಇ ಅರ್ಜಿಗಳು ಇದ್ದು, ಇದನ್ನು ಸ್ಥಳದಲ್ಲಿಯೇ ದೃಢೀಕರಿಸಿ ನೀಡಬೇಕು. ಅರ್ಜಿಯೊಂದಿಗೆ ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಪ್ರತಿ ನೀಡಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು, ಅಟಲ್‌ಜೀ ಜನ ಸೇವಾ ಕೇಂದ್ರಗಳು ಮತ್ತು ಕೆಲವು ಆಯ್ದ ಗ್ರಾ.ಪಂ.ಗಳಲ್ಲಿ ನೊಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೊಂದಾಯಿಸಬಹುದು

ಅರ್ಜಿ ಸಲ್ಲಿಕೆ ಒಂದು ವಾರ ಮುಂದೂಡಿಕೆ

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,08,324 ರೈತರು ಯೋಜನೆಯಡಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ರೈತರು ಯೋಜನೆಗೆ ಅರ್ಜಿ ಸಲ್ಲಿಸಲು ಜು.10 ಕೊನೆಯ ದಿನವಾಗಿತ್ತು. ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನೂ ಒಂದು ವಾರ ಕಾಲ ಮುಂದೂಡಲಾಗಿದೆ. ಅರ್ಹ ರೈತರು ನಿಖರ ಮಾಹಿತಿ ನೀಡಿ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಎಲ್‌.ರೂಪಾ ಅವರು ವಿಜಯಕರ್ನಾಟಕಕ್ಕೆ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ