ಆ್ಯಪ್ನಗರ

ಕೈವಾರದಲ್ಲಿ ಆತಂಕ ಮೂಡಿಸಿದ ಅಪಘಾತದ ಕಾರು: ಉಗ್ರರು ಬಿಟ್ಟು ಹೋಗಿದ್ದಾರೆ ಎಂಬ ವದಂತಿ

ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಣೆ ಬೆನ್ನಲ್ಲೇ ಈ ವದಂತಿ ಜಿಲ್ಲೆಯ ಜನರಲ್ಲಿ ಕಳವಳ ಉಂಟು ಮಾಡಿತ್ತು. ಈ ಕುರಿತು ಎಸ್ಪಿ ಕೆ.ಸಂತೋಷ್ ಬಾಬು ಅವರನ್ನು ವಿಚಾರಿಸಿದರೆ, ಉಗ್ರರು ಬಳಸುತ್ತಿದ್ದ ಕಾರು ಅಪಘಾತ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.

Vijaya Karnataka Web 17 Aug 2019, 5:50 pm
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಸಮೀಪ ಇತ್ತೀಚೆಗೆ ಉಗ್ರರು ದುಷ್ಕೃತ್ಯಕ್ಕಾಗಿ ತಂದಿದ್ದ ಕಾರು ಅಪಘಾತಕ್ಕೆ ಈಡಾಗಿದೆ ಎಂಬ ವದಂತಿ ಶನಿವಾರ ಕೆಲ ವಾಹಿನಿಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತು.
Vijaya Karnataka Web ಪೊಲೀಸ್‌
ಪೊಲೀಸ್‌


ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೆ.ಸಂತೋಷ್ ಬಾಬು ಅವರು ಇದನ್ನು ಸಂಪೂರ್ಣವಾಗಿ ಅಲ್ಲ ಗೆಳೆದಿದ್ದಾರೆ.

ಕಳೆದ ಆಗಸ್ಟ್ 12 ರಂದು ಕೈವಾರದ ಬಳಿ ಅಪಘಾತಕ್ಕೀಡಾದ ಸ್ಕೋಡಾ ಕಾರಿನಲ್ಲಿ ಉರ್ದು ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳಿದ್ದರು. ಅಪಘಾತವಾದ ಬಳಿಕ ಅವರು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಾರನ್ನು ಗುಪ್ತಚರ ಇಲಾಖೆ ಐಜಿಪಿ, ಕೇಂದ್ರ ವಲಯ ಐಜಿ, ಉಗ್ರರ ನಿಗ್ರಹ ದಳ ಅಧಿಕಾರಿಗಳು ಮಹಜರು ಮಾಡಿಕೊಂಡು ಹೋಗಿದ್ದಾರೆ.

ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಶಂಕಿತರ ರೇಖಾಚಿತ್ರಗಳು ಕಾರಿನಲ್ಲಿ ಇದ್ದವರಿಗೆ ಹೋಲಿಕೆಯಾಗಿವೆ ಎಂದು ವಾಹಿನಿಯೊಂದು ವರದಿ ಮಾಡಿದೆ. ಆದರೆ ಉಗ್ರರು ಕಾರು ಬಳಸಿದ್ದರು ಎಂಬ ಆರೋಪವನ್ನು ಎಸ್ಪಿ ಕೆ.ಸಂತೋಷ್ ಬಾಬು ನಿರಾಕರಿಸಿದ್ದಾರೆ.

ಕಾರು ಬೆಂಗಳೂರಿನ ಥಣಿಸಂದ್ರದ ಪ್ರವೀಣಗೌಡ (30) ಎಂಬುವರಿಗೆ ಸೇರಿದೆ. ಅವರು ಇತ್ತೀಚೆಗೆ ಕೈವಾರಕ್ಕೆ ಮದುವೆ ಸಮಾರಂಭವೊಂದಕ್ಕೆ ಬಂದಾಗ ಅಪಘಾತ ನಡೆದಿತ್ತು ಎಂದು ಹೇಳಿದರು.

ಥಣಿಸಂದ್ರದ ನಿವಾಸಿ, ಸ್ನೇಹಿತ ಸಂಜಯ್ (32) ಜತೆ ಪ್ರವೀಣಗೌಡ ತಮ್ಮ ಸ್ಕೋಡಾ ಕಾರಿನಲ್ಲಿ ಆ.11ರಂದು ಕೈವಾರಕ್ಕೆ ಮದುವೆಗೆ ಬಂದಿದ್ದರು. ಆ.12ರಂದು ರಾತ್ರಿ ಸಂಜಯ್ ಟೀ-ಸಿಗರೇಟ್‌ಗಾಗಿ ಕಾರು ತೆಗೆದುಕೊಂಡು ಕೈವಾರ ಕ್ರಾಸ್‌ನತ್ತ ಹೋಗಿದ್ದರು. ವಾಪಸ್ ಬರುವಾಗ ನಸುಕಿನ 3 ಗಂಟೆಗೆ ಸುಮಾರಿಗೆ ಕಾರು ಬನಹಳ್ಳಿ ಬಳಿ ಅಪಘಾತಕ್ಕೆ ಈಡಾಗಿತ್ತು ಎಂದು ತಿಳಿಸಿದರು.

ಮದುವೆ ಗದ್ದಲದಲ್ಲಿದ್ದ ಪ್ರವೀಣಗೌಡ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತನಿಗೆ ಬೈದಿದ್ದ. ಇದ್ದರಿಂದ ಬೇಸರಗೊಂಡು ಸಂಜಯ್ ಅಪಘಾತದ ಸ್ಥಳದಲ್ಲಿಯೇ ಕಾರು ಬಿಟ್ಟು ಹೋಗಿದ್ದರು. ಆ ಬಳಿಕ ಯಾರು ಕೂಡ ಕಾರು ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಹೀಗಾಗಿ ಆ ಕಾರನ್ನು ಕೈವಾರ ಹೊರ ಠಾಣೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು ಎಂದು ತಿಳಿಸಿದರು.

ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಕೆಲವರು ನೀಡಿದ ತಪ್ಪು ಮಾಹಿತಿಯಿಂದಾಗಿ ವದಂತಿ ಸೃಷ್ಟಿಯಾಗಿದೆ. ಸದ್ಯ ಪ್ರವೀಣಗೌಡ ಮತ್ತು ಸಂಜಯ್ ಅವರು ಕಾರು ಪಡೆದುಕೊಳ್ಳಲು ಬರುತ್ತಿದ್ದಾರೆ ಎಂದು ಸಂತೋಷ್‌f ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ