ಆ್ಯಪ್ನಗರ

ಲಾಠಿ ಚಾರ್ಚ್‌ಗಳಲ್ಲೇ ಕಾಂಗ್ರೆಸ್‌ ಚುನಾವಣೆ ವೀಕ್ಷಕರಿಗೆ ಸ್ವಾಗತ

ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಬಣಗಳಾಗಿ ಹರಿದು ಹಂಚಿಹೋಗಿರುವ ಕಾಂಗ್ರೆಸ್‌, ಇದೀಗಾ ಮತ್ತೊಮ್ಮೆ ಪ್ರತ್ಯೇಕ ಬಣಗಳಾಗಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದು, ಮಾತ್ರವಲ್ಲದೇ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದೆ.

Vijaya Karnataka 21 Feb 2018, 5:01 pm

ಚಿಕ್ಕಬಳ್ಳಾಪುರ: ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಬಣಗಳಾಗಿ ಹರಿದು ಹಂಚಿಹೋಗಿರುವ ಕಾಂಗ್ರೆಸ್‌, ಇದೀಗಾ ಮತ್ತೊಮ್ಮೆ ಪ್ರತ್ಯೇಕ ಬಣಗಳಾಗಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದು, ಮಾತ್ರವಲ್ಲದೇ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದೆ.

2018ನೇ ಸಾಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಪಕ್ಷ ದ ಚುನಾವಣಾ ವೀಕ್ಷ ಕರಾಗಿ ಭಾನುವಾರ ಸಂಜೆ ಕ್ಷೇತ್ರಕ್ಕೆ ಆಗಮಿಸಿದ್ದ ತಂಡಕ್ಕೆ 3 ಕಾಂಗ್ರೆಸ್‌ ಬಣಗಳು ಆಕ್ರೋಶದ ಸ್ವಾಗತ ಕೋರಿದವು.

ಹಾಲಿ ಶಾಸಕ ಡಾ.ಕೆ.ಸುಧಾಕರ್‌, ಮುಖಂಡರಾದ ಕೆ.ವಿ.ನವೀನ್‌ಕಿರಣ್‌, ಗಂಗರೆಕಾಲುವೇ ನಾರಾಯಣಸ್ವಾಮಿ ಬಣದವರು ಚುನಾವಣಾ ವೀಕ್ಷ ಕರ ತಂಡಕ್ಕೆ ಇರುಸು ಮುರಿಸು ಉಂಟುಮಾಡಿವೆ. ನಗರದ ಜೂನಿಯರ್‌ ಕಾಲೇಜು ಮೈದಾನದಿಂದ ನೂರಾಕ್ಕೂ ಹೆಚ್ಚು ಜನ ಬೆಂಗಳೂರು ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಸಿ, ಸಿದ್ದೇಶ್ವರ ಸಮೂದಾಯ ಭವನ ತಲುಪಿದವು. ಇನ್ನು ಗಂಗರೆಕಾಲುವೇ ನಾರಾಯಣಸ್ವಾಮಿ ಬಣದವರು ವಾಪಸಂದ್ರದಿಂದ ಮೆರವಣಿಗೆ ಹೊರಟು ತಮ್ಮ ಶಕ್ತಿ ಪ್ರದರ್ಶಿಸಿದರೆ, ಶಾಸಕರ ಬಣದ ಕಾರ್ಯಕರ್ತರು ಎಲ್ಲರಿಗಿಂತ ಮೊದಲೇ ಸಿದ್ದೇಶ್ವರ ಸಮೂದಾಯ ಭನವ ಅತಿಕ್ರಮಿಸಿಕೊಂಡಿದ್ದರು. ಒಟ್ಟಿನಲ್ಲಿ ಮೂರು ಬಣಗಳ ಕಿತ್ತಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದರು.

ವಿಧಾನ ಪರಿಷತ್‌ ಸದಸ್ಯರಾದ ಐ.ಜಿ ಸನಾದಿ, ಸಿ.ಎಂ ಲಿಂಗಪ್ಪ ಅವರುಗಳು ಭಾನುವಾರ ಬೆಳಗ್ಗೆ ಗೌರಿಬಿದನೂರಿಗೆ ಭೇಟಿ ನೀಡಿ, ಅಲ್ಲಿಂದ ಬಾಗೇಪಲ್ಲಿ ಪರಿಸ್ಥಿತಿ ಅವಲೋಕಿಸಿ ಸಂಜೆ 4.50ರ ಸುಮಾರಿಗೆ ಸಿದ್ದೇಶ್ವರ ಸಮುದಾಯ ಭವನದ ರಸ್ತೆಗೆ ಬರುತ್ತಿದ್ದಂತೆ ಕೆ.ವಿ. ನವೀನ್‌ ಕಿರಣ್‌ ಬೆಂಬಲಿಗರು ಅವರ ಕಾರು ತಡೆದು, ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೇ, ನವೀನ ಕಿರಣ್‌ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯ ಏರಿದರು. ಇನ್ನೊಂದಡೆ ಗಂಗರೆಕಾಲುವೇ ನಾರಾಯಣ ಸ್ವಾಮಿ ಬೆಂಬಲಿಗರು ಪ್ಲೆಕ್ಸ್‌ಗಳನ್ನು ಹಿಡಿದು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಹೀಗಾಗಿ ಗೌರಿಬಿದನೂರು ರಸ್ತೆ ಸಂಚಾರ ಸಂರ್ಪೂಣ ಅಸ್ತವ್ಯಸ್ಥ್ಯಗೊಂಡಿದ್ದು, ಸಾರ್ವಜನಿಕರು ಪರದಾಡಬೇಕಾಯಿತು.

ಲಾಠಿ ಚಾರ್ಚ್‌ !: ವೀಕ್ಷಕರ ತಂಡಕ್ಕೆ ಆಯೋಜಿಸಿದ್ದ ಕಾರ್ಯಕ್ರಮದ ಸಿದ್ದೇಶ್ವರ ಸಮುದಾಯದ ಭವನ ಅತೀ ಕಿರಿದಾಗಿದ್ದ ಹಿನ್ನೆಲೆ ಶಾಸಕರ ಬೆಂಬಲಿಗರನ್ನು ಹೊರತು ಪಡಿಸಿ, ಉಳಿದ 2 ಬಣಗಳ ಬೆಂಬಲಿಗರು ರಸ್ತೆಯಲ್ಲಿಯೆ ನಿಂತಿದ್ದರು. ಬೆಂಬಲಿಗರ ಆಕ್ರೋಶ ಹೆಚ್ಚಾದ ಬಳಿಕ ನವೀನ್‌ ಕಿರಣ್‌ ಅವರನ್ನು ಒಳ ಕರೆದು, ಆಕಾಂಕ್ಷಿ ಫಾರಂ ಸ್ವೀಕರಿಸಲಾಯಿತು. ಈ ನಡುವೆ ಪೊಲೀಸರ ಸರ್ಪಗಾವಲನ್ನು ಮೀರಿ ಒಳನುಗ್ಗಿದ ಬೆಂಬಲಿಗರಿಗೆ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಇದಂತಹ ಎಲ್ಲ ಖುರ್ಚಿಗಳಲ್ಲಿಯೂ ಶಾಸಕರ ಹಿಂಬಾಲಕರೇ ಕುಳಿತ್ತಿದ್ದರಿಂದ ಆಕ್ರೋಶಗೊಂಡ ಉಳಿದ 2 ಬಣಗಳು ಕೈ ಮಿಲಾಯಿಸಿವೆ.

ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಮನಬಂದತೆ ಲಾಠಿ ಚಾರ್ಚ್‌ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 40 ನಿಮಿಷಗಳಲ್ಲೇಯೇ ಚಿತ್ರಣ ಸಂಪೂರ್ಣ ಬದಲಾವಣೆಯಾಗಿದ್ದು, ಚುನಾವಣಾ ವೀಕ್ಷ ಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಮೂರು ಬಣಗಳ ಬೆಂಬಲಿಗರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದು, ಕಾಂಗ್ರೆಸ್‌ನಲ್ಲಿ ಸಣ್ಣಗೆ ಹೊಗೆಯಾಡುತ್ತಿದ್ದ ಭಿನ್ನಮತದ ಬೆಂಕಿಗೆ ಭಾನುವಾರ ಆಗಮಿಸಿದ್ದ ವೀಕ್ಷ ಕರು ತುಪ್ಪ ಸುರಿದಂತಾಗಿದೆ. ತ್ರಿಕೋನ ಸ್ಫರ್ಧೆ ಏರ್ಪಡುವ ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ರಾಜಕೀಯ ಚಿತ್ರಣ ಬದಲಾವಣೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸದ್ದಿಲ್ಲದೇ ಸೃಷ್ಟಿಯಾದ 4ನೇ ಬಣ !

ವೀಕ್ಷಕರ ಭವನ ನಗರದ ಕಾಮತ್‌ ಹೋಟೆಲ್‌ ಬಳಿ ಬರುತ್ತಿದಂತೆ ಮತ್ತೊಂದು ಬಣದ ಮುಖಂಡ ಅಡ್ಡಗಲ್ಲು ಶ್ರೀಧರ್‌, ವೀಕ್ಷಕರ ಕಾರು ತಡೆದು, ಮನವಿ ಪತ್ರ ಸಲ್ಲಿಸಿದ್ದಾರೆ.

ಒಳಗೆ ಏನಾಯ್ತು ?: ಸಂಜೆ 5 ಗಂಟೆ ಸುಮಾರಿಗೆ ಸಮುದಾಯ ಭವನಕ್ಕೆ ಆಗಮಿಸಿದ ಚುನಾವಣಾ ವೀಕ್ಷಕ ತಂಡ ವಿರೋಧದ ನಡುವೆಯೇ ಪೊಲೀಸರ ಸರ್ಪಗಾವಲಿನಲ್ಲಿಯೇ ಕಾರ್ಯಕ್ರಮಕ್ಕೆ ಆಗಮಿಸಿತು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೂರು ಬಣಗಳ ಮುಖಂಡರಿಂದ ಆಕಾಂಕ್ಷಿ ಪಟ್ಟಿ ಸ್ವಿಕರಿಸಿದ್ದಾರೆ ಎನ್ನುವ ಮಾಹಿತಿ ಬಿಟ್ಟು ಮತ್ಯಾವ ವಿಷಯವು ಬಹಿರಂಗಗೊಂಡಿಲ್ಲ. ಗೊಂದಲಾದ ಗೂಡಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಣದ ಮುಖಂಡರು ಮೂರು ಸಮುದಾಯಗಳಿಗೆ ಸೇರಿದ್ದಾರೆ ಎನ್ನುವುದು ವಿಶೇಷ.

ಹಾಲಿ ಶಾಸಕ ಡಾ.ಕೆ.ಸುಧಾಕರ್‌ ಒಕ್ಕಲಿಗ ಸಮೂದಾಯಕ್ಕೆ ಸೇರಿದ್ದರೆ, ನವೀನ್‌ ಕಿರಣ್‌ ಬಲಜಿಗ ಹಾಗೂ ಗಂಗರೆಕಾಲುವೇ ನಾರಾಯಣ ಸ್ವಾಮಿ ಕುರುಬ ಸಮುದಾಯದ ಮುಖಂಡರುಗಳಾಗಿದ್ದಾರೆ. ಹೀಗಾಗಿ ಜಾತಿ ಹೆಸರಿನಲ್ಲಿಯೂ ಕಾಂಗ್ರೆಸ್‌ ಮತಗಳು ವಿಂಗಡಣೆಯಾಗುವ ಸಾಧ್ಯತೆಗಳು ದಟ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ