ಆ್ಯಪ್ನಗರ

ನೀತಿ ಸಂಹಿತೆ ಅಡ್ಡಿ, ಜಿಲ್ಲೆಯಲ್ಲಿ ರಕ್ತದ ಕೊರತೆ

ಬೇಸಿಗೆಯಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಒಂದೆಡೆಯಿದ್ದರೆ, ಇನ್ನೊಂದೆಡೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ರಕ್ತದ ಕೊರತೆ ಉಂಟಾಗಿದೆ.

Vijaya Karnataka 16 Apr 2019, 3:19 pm
*ಕೆಂಪೇಗೌಡ ಎನ್‌.ವೆಂಕಟೇನಹಳ್ಳಿ
Vijaya Karnataka Web disruption of code of conduct lack of blood in the district
ನೀತಿ ಸಂಹಿತೆ ಅಡ್ಡಿ, ಜಿಲ್ಲೆಯಲ್ಲಿ ರಕ್ತದ ಕೊರತೆ

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಒಂದೆಡೆಯಿದ್ದರೆ, ಇನ್ನೊಂದೆಡೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ರಕ್ತದ ಕೊರತೆ ಉಂಟಾಗಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆ ವ್ಯಾಪಕವಾಗಿ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಇದೇ ರಕ್ತದ ಕೊರತೆ ಉಂಟಾಗಲು ಕಾರಣವಾಗಿದೆ. ನೀರಿನ ಬವಣೆಯಲ್ಲಿ ಬೇಯುತ್ತಿರುವ ಜನರಿಗೆ ಈಗ ಚುನಾವಣೆ ರಕ್ತದ ಕೊರತೆಯನ್ನೂ ತಂದೊಡ್ಡಿದೆ.

ಆಂಧ್ರದ ಗಡಿಯಿಂದ ಬೆಂಗಳೂರುವರೆಗೆ ಉತ್ತಮ ರಕ್ತನಿಧಿ ಕೇಂದ್ರಗಳಿಲ್ಲ. ಹೀಗಾಗಿ ಇಲ್ಲಿನ ರಕ್ತನಿಧಿ ಕೇಂದ್ರಕ್ಕೆ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕೋಲಾರ, ಬೆಂಗಳೂರು ಗ್ರಾಮಂತರ, ಆಂಧ್ರಪ್ರದೇಶದ ಹಿಂದೂಪುರ ಸೇರಿದಂತೆ ಮತ್ತಿತರ ಜಿಲ್ಲೆಗಳಿಂದ ರಕ್ತ ಪಡೆಯಲು ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಚುನಾವಣೆ ನೀತಿ ಸಂಹಿತೆ ಅಡ್ಡಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹಾಗೂ ರಜೆ, ಬೇಸಿಗೆ ಇರುವುದರಿಂದ ಜನರಲ್ಲಿ ಆರೋಗ್ಯ ಏರುಪೇರಾಗುತ್ತದೆ ಎಂಬ ಭಯದ ಕಾರಣಗಳಿಂದ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯಿಂದ ಸರಿಯಾಗಿ ಶಿಬಿರಗಳು ನಡೆಯದೆ ರಕ್ತದ ಸಂಗ್ರಹ ಕಡಿಮೆಯಾಗಿದೆ. ಇದರಿಂದ ರೋಗಿಗಳಿಗೆ ರಕ್ತದ ಕೊರತೆ ಸೃಷ್ಟಿಯಾಗಿದೆ. ಸಾಮಾನ್ಯ ದಿನಗಳಲ್ಲಿ ರಾಜಕಾರಣಿಗಳು, ಚಿತ್ರನಟರ ಜನ್ಮದಿನದಂದು ಅಭಿಮಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದರು. ಈಗ ಎಲ್ಲರೂ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಜನರೂ ಕೂಡ ರಕ್ತ ನೀಡಲು ಮುಂದೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ರಕ್ತದ ಬೇಡಿಕೆ ಸರಿದೂಗಿಸಲು ರೆಡ್‌ಕ್ರಾಸ್‌ ಜಿಲ್ಲಾ ಶಾಖೆ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಶಿಬಿರ ಆಯೋಜಿಸುವ ಪ್ರಯತ್ನ ಮಾಡುತ್ತಿದೆ.

ಕಳೆದೆರಡು ತಿಂಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡವಿದ್ದರಿಂದ ವಿದ್ಯಾರ್ಥಿಗಳು ಆರೋಗ್ಯದಲ್ಲಿ ಏರುಪೇರಾಗಬಹುದೆಂದು ಕಾಲೇಜುಗಳಲ್ಲಿ ಸರಿಯಾಗಿ ಶಿಬಿರ ಆಯೋಜಿಸಲು ಸಾಧ್ಯವಾಗಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ವಿವಿಧ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ನಡೆಸುತ್ತಿದ್ದ ಶಿಬಿರಗಳು ಕಡಿಮೆಯಾಗಿವೆ ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ಖಜಾಂಚಿ ಜಯರಾಂ ಹೇಳುತ್ತಾರೆ.

ಸಾಮಾನ್ಯ ದಿನಗಳಲ್ಲಿ ಆಯೋಜಿಸುವ ಶಿಬಿರಗಳಲ್ಲಿ ತಿಂಗಳಿಗೆ 600ರಿಂದ 800 ಯೂನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ವಿಶೇಷ ದಿನಗಳಲ್ಲಿ ಸಾವಿರಕ್ಕೂ ಹೆಚ್ಚಿನ ಯೂನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ನಮ್ಮಲ್ಲಿ ಒಂದು ಯೂನಿಟ್‌ ರಕ್ತಕ್ಕೆ 450 ಪಡೆದರೆ ಖಾಸಗಿಯವರು ಐನೂರೂ ರೂಪಾಯಿ ವಸೂಲಿ ಮಾಡುವರು. ಹೀಗಾಗಿ ಜಿಲ್ಲೆಯ ಜನರೇ ಅಲ್ಲದೆ ಸುತ್ತಲಿನ ಜನರು ಇಲ್ಲಿಗೆ ಬರುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಿತ್ಯ 30ರಿಂದ 40 ಯೂನಿಟ್‌ ರಕ್ತಕ್ಕೆ ಬೇಡಿಕೆ ಇದೆ. ಈಗಿರುವ ಸಂಗ್ರಹ ಬೇಡಿಕೆಗೆ ಸರಿಯಾಗುತ್ತದೆ. ಆದರೆ ಹೊರಗಿನವರ ಬೇಡಿಕೆ ಕೊರತೆ ಉಂಟಾದರೆ ಸುಧಾರಿಸುವುದು ಸ್ವಲ್ಪ ಕಷ್ಟವಾಗಲಿದೆ. ಇತ್ತೀಚೆಗೆ ನಡೆದ ಶಿಬಿರದಲ್ಲಿ 300 ಯೂನಿಟ್‌ ರಕ್ತ ಸಂಗ್ರಹವಾಗಬಹುದು ಎಂಬುದಾಗಿ ಅಂದಾಜು ಮಾಡಿದ್ದೆವು. ಆದರೆ, ಕೇವಲ 92 ಯೂನಿಟ್‌ನಷ್ಟು ಮಾತ್ರ ರಕ್ತ ಸಂಗ್ರಹವಾಯಿತು ಎಂದು ಹೇಳಿದರು.

ಜಿಲ್ಲಾ ಶಾಖೆಗೆ ಬಂದು ರಕ್ತದಾನ ಮಾಡಿ
ಬೇಸಿಗೆ ಸಂದರ್ಭ ಹಾಗೂ ಚುನಾವಣೆ ನೀತಿ ಸಂಹಿತೆಯಿಂದಾಗಿ ಶಿಬಿರಗಳು ಹೇರಳವಾಗಿ ನಡೆದಿಲ್ಲ. ಹೀಗಾಗಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯಲ್ಲಿ ರಕ್ತದ ಕೊರತೆ ಉಂಟಾಗಿದೆ. ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಶಾಖೆಯ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಿ ರಕ್ತದಾನ ಮಾಡಬೇಕು ಎಂದು ಜಯರಾಂ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ