ಆ್ಯಪ್ನಗರ

ವಿಷಪೂರಿತ ಎಂದಿದ್ದ ನೀರಿಗೆ ಡಿಮ್ಯಾಂಡ್: ತುಂಬುತ್ತಿವೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆರೆಗಳು!

ಇದೀಗ ಬೆಂಗಳೂರಿನಿಂದ ಜಿಲ್ಲೆಗೆ ಸಂಸ್ಕರಿತ ನೀರು ಹರಿಯುತ್ತಿದ್ದು, ಎಲ್ಲರೂ ನಮಗೂ ನೀರು ಕೊಡಿ ಎಂದು ಒಕ್ಕೊರಲ ಬೇಡಿಕೆಯಿಟ್ಟಿದ್ದಾರೆ. ಇದರ ಮಧ್ಯೆ ಲಾಭ ಪಡೆಯಲು ಪೈಪೋಟಿಯೂ ಹೆಚ್ಚಾಗಿದೆ. ​ಬೆಂಗಳೂರಿನ ಕೊಳಚೆ ನೀರನ್ನು ಜಿಲ್ಲೆಗೆ ಸರಿಯಾಗಿ ಸಂಸ್ಕರಿಸದೆ ಹರಿಸುತ್ತಾರೆ. ಇದರಿಂದ ಜನರಿಗೆ ಸರಕಾರ ವಿಷವುಣಿಸಲು ಹೊರಟಿದೆ ಎಂದೇ ಆರೋಪಿಸಲಾಗಿತ್ತು. ಆದರೆ ಈಗ ಹಲವು ಕೆರೆಗಳು ತುಂಬಿಕೊಳ್ಳುತ್ತಿದಂತೆ ಕೆರೆಯ ಸುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರು ಬರಲಾರಂಭಿಸಿದೆ. ಅಂತರ್ಜಲದ ಮಟ್ಟ ಏರಿಕೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ. ಮೀನು ಸಾಕಾಣಿಕೆಯನ್ನು ಹಲವರು ಆರಂಭಿಸಿದ್ದಾರೆ.

Vijaya Karnataka Web 3 Mar 2021, 7:18 am

ಹೈಲೈಟ್ಸ್‌:

  • ಎಚ್‌ಎನ್‌ (ಹೆಬ್ಬಾಳ-ನಾಗವಾರ ವ್ಯಾಲಿ) ವ್ಯಾಲಿ ನೀರಿಗೆ ಭಾರಿ ಬೇಡಿಕೆ ಸೃಷ್ಟಿ
  • ಯೋಜನೆ ಜಾರಿಗೂ ಮುನ್ನವೇ ವಿವಾದ,ವಿಷಪೂರಿತ ನೀರನ್ನು ಬಿಡಬೇಡಿ ಎಂಬ ಹೋರಾಟವೂ ನಡೆದಿತ್ತು!
  • ಜನರಿಗೆ ವಿಷವುಣಿಸಲು ಹೊರಟಿದ್ದಾರೆ ಎಂಬ ಆರೋಪ, ಆದರೆ ಈಗ ಚಿತ್ರಣವೇ ಬದಲು
  • ಜಿಲ್ಲೆಯ 44 ಕೆರೆಗಳ ಪೈಕಿ 12ಕ್ಕೂ ಹೆಚ್ಚು ಕೆರೆಗಳಿಗೆ ಎಚ್‌ಎನ್‌ ವ್ಯಾಲಿ ನೀರು ಹರಿದು ತುಂಬಿದೆ
  • ಎಚ್‌ ಎನ್‌ ವ್ಯಾಲಿ ನೀರಿನ ಬಗ್ಗೆ ಮೊದಲಿದ್ದ ಆತಂಕ ದೂರ, ಅಂತರ್ಜಲಮಟ್ಟ ಏರಿಕೆ!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಣಿತಹಳ್ಳಿ ಎನ್‌. ಚಂದ್ರೇಗೌಡ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಸಂಸ್ಕರಿತ ನೀರು ಹರಿಯುತ್ತಿದೆ. ಇದೀಗ ಜಿಲ್ಲೆಯ ಎಲ್ಲಾ ತಾಲೂಕಿನ ಜನ ನಮಗೂ ನೀರು ಕೊಡಿ ಎಂದು ಹೋರಾಟಕ್ಕೆ ಇಳಿದಿದ್ದಾರೆ. ನಿಗದಿತ ಪ್ರಮಾಣದಲ್ಲಿ ನೀರು ಬಾರದಿದ್ದುದರಿಂದ ಎಚ್‌ಎನ್‌ (ಹೆಬ್ಬಾಳ-ನಾಗವಾರ ವ್ಯಾಲಿ) ವ್ಯಾಲಿ ನೀರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಶಾಶ್ವತ ನೀರಾವರಿ ಯೋಜನೆಗಳಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿ, ಕೃಷಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಲೇ ಇದೆ. ಇಂತಹ ಸ್ಥಿತಿಯಲ್ಲಿರುವ ಜಿಲ್ಲೆಯ ಜನತೆ ಪಾಲಿಗೆ ಎಚ್‌ಎನ್‌ ವ್ಯಾಲಿ ಯೋಜನೆ ಆಶಾದಾಯಕವಾಗಿತ್ತು. ಆದರೆ ಈ ಯೋಜನೆ ಜಾರಿಗೂ ಮುನ್ನವೇ ವಿವಾದವಾಗಿತ್ತು. ಜಿಲ್ಲೆಗೆ ವಿಷಪೂರಿತ ಬೆಂಗಳೂರಿನ ಕೊಳಚೆ ನೀರನ್ನು ಬಿಡಬೇಡಿ ಎಂಬ ಹೋರಾಟ ನಡೆದಿತ್ತು. ಜಿಲ್ಲೆಯ ಜನರಿಗೆ ವಿಷವುಣಿಸಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈಗ ಚಿತ್ರಣವೇ ಬದಲಾಗಿದೆ.

2 ಹಂತದಲ್ಲಿ ಸಂಸ್ಕರಿತ ನೀರಿನಿಂದ ಸಾಕಷ್ಟು ಕೆರೆಗಳು ತುಂಬಿಕೊಂಡಿವೆ. ಜಿಲ್ಲೆಯ 44 ಕೆರೆಗಳ ಪೈಕಿ 12ಕ್ಕೂ ಹೆಚ್ಚು ಕೆರೆಗಳಿಗೆ ಎಚ್‌ಎನ್‌ ವ್ಯಾಲಿ ನೀರು ಹರಿದು ತುಂಬಿವೆ. ಹಲವು ತಾಲೂಕುಗಳ ಜನ ನಮ್ಮ ಕೆರೆಗಳಿಗೆ ನೀರು ಬಿಡೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

ಸಂಸ್ಕರಿತ ನೀರಿನಿಂದಿಲ್ಲ ತೊಂದರೆ
ಕಂದವಾರ ಕೆರೆ, ಗೋಪಾಲಕೃಷ್ಣ ಅಮಾನಿಕೆರೆ, ಪೆರೇಸಂದ್ರ ಕೆರೆ, ದಿಬ್ಬೂರು ಕೆರೆ ಹೀಗೆ ಸಾಕಷ್ಟು ಕೆರೆಗಳಿಗೆ ನೀರು ಹರಿದಿದೆ. ಕೆಲವು ಕೆರೆಗಳಲ್ಲಿ ಮೀನುಗಾರಿಕೆ ಕೂಡಾ ನಡೆಯುತ್ತಿದೆ. ಮೀನುಗಳು ಮೊದಲೇ ಸೂಕ್ಷ್ಮ. ಆದರೆ ಮೀನುಗಾರಿಕೆಯೂ ಈ ಕೆರೆಗಳಲ್ಲಿ ನಡೆಯುತ್ತಿದ್ದು, ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಎಚ್‌ ಎನ್‌ ವ್ಯಾಲಿ ನೀರಿನ ಬಗ್ಗೆ ಮೊದಲಿದ್ದ ಆತಂಕ ದೂರವಾದಂತೆ ಕಾಣುತ್ತಿದೆ.
'ಭದ್ರಾ ಡ್ಯಾಂನಿಂದ ನೀರು ಕೊಟ್ಟರೆ ಹೋರಾಟ': ಟಿಬಿ ಡ್ಯಾಂ, ಭದ್ರಾ ಮೇಲ್ದಂಡೆಗೆ ನೀರು ಹರಿಸಲು ವಿರೋಧ
ನೀರಿಗೇಕೆ ಡಿಮ್ಯಾಂಡ್‌?
ಬೆಂಗಳೂರಿನ ಕೊಳಚೆ ನೀರನ್ನು ಜಿಲ್ಲೆಗೆ ಸರಿಯಾಗಿ ಸಂಸ್ಕರಿಸದೆ ಹರಿಸುತ್ತಾರೆ. ಇದರಿಂದ ಜನರಿಗೆ ಸರಕಾರ ವಿಷವುಣಿಸಲು ಹೊರಟಿದೆ ಎಂದೇ ಆರೋಪಿಸಲಾಗಿತ್ತು. ಆದರೆ ಈಗ ಹಲವು ಕೆರೆಗಳು ತುಂಬಿಕೊಳ್ಳುತ್ತಿದಂತೆ ಕೆರೆಯ ಸುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರು ಬರಲಾರಂಭಿಸಿದೆ. ಅಂತರ್ಜಲದ ಮಟ್ಟ ಏರಿಕೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ. ಮೀನು ಸಾಕಾಣಿಕೆಯನ್ನು ಹಲವರು ಆರಂಭಿಸಿದ್ದಾರೆ.
ಸಂಸ್ಕರಿಸಿದ ನೀರು ಶೇ.40ರಷ್ಟು ಚರಂಡಿ ಪಾಲು; ಜಲಮಂಡಳಿ ಎಸ್‌ಟಿಪಿಯಲ್ಲಿ ನೀರು ಬಳಕೆಗೆ ನಿರಾಸಕ್ತಿ!
ಸುಧಾಕರ್‌ರಿಂದ ಭಗೀರಥ ಪ್ರಯತ್ನ
ಇನ್ನೊಂದೆಡೆ ಯೋಜನೆ ಸಿದ್ದರಾಮಯ್ಯ ಅವರ ಕಾಲದಲ್ಲೇ ಜಾರಿಯಾಗಿದ್ದರೂ ಅಂದು ಶಾಸಕರಾಗಿದ್ದ ಸುಧಾಕರ್‌ ಅವರ ಆಸಕ್ತಿ ಹೆಚ್ಚಿತ್ತು. ಸುಧಾಕರ್‌ ಸಚಿವರಾದ ನಂತರ ಕುಂಟುತ್ತ ಸಾಗಿದ್ದ ಯೋಜನೆಗೆ ಚುರುಕುಗೊಳಿಸಿದ್ದಾರೆ. ಡಾ. ಸುಧಾಕರ್‌ ಇಲ್ಲದಿದ್ದರೆ ಬೆಂಗಳೂರಿನಿಂದ ಬರುವಾಗಲೇ ನೀರು ಬೇರೆಡೆ ಹರಿಯುತ್ತಿತ್ತು ಎನ್ನುವ ವಾದವೂ ಇದೆ.
ಇನ್ನು ಮೂರು ತಿಂಗಳ ಒಳಗೆ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂಗೆ ಕೆಸಿ ವ್ಯಾಲಿ ನೀರು
ಬಿಜೆಪಿ ಸರಕಾರದಲ್ಲಿ ಸುಧಾಕರ್‌ ಸಚಿವರಾದ ದಿನವೇ ಕಂದವಾರ ಕೆರೆಗೆ ಎಚ್‌ ಎನ್‌ ವ್ಯಾಲಿ ನೀರು ಹರಿದಿತ್ತು. ಆದರೆ ಆನಂತರ ಕಿಡಿಗೇಡಿಗಳು ವಿದ್ಯುತ್‌ ವೈರ್‌ಗಳನ್ನು ಸುಟ್ಟು ಹಾಕುವುದು ಸೇರಿದಂತೆ ಹಲವು ಅಡೆತಡೆಗಳು ಎದುರಾದರೂ ಈ ಸಂಬಂಧ ಸಚಿವರು ಖಡಕ್‌ ಎಚ್ಚರಿಕೆ ಕೊಟ್ಟು ಅದನ್ನು ಸರಿಪಡಿಸಿ ನೀರು ಹರಿಯುವಂತೆ ಮಾಡಿದ್ದರು ಎನ್ನುವುದು ಸುಧಾಕರ್‌ ಬೆಂಬಲಿಗರ ಮಾತು. ಈ ಎರಡೂ ಪಕ್ಷಗಳ ನಡುವೆ ರೈತ ಸಂಘದವರು, ತಮ್ಮ ನಿರಂತರ ಹೋರಾಟಕ್ಕೆ ಮಣಿದು ರಾಜ್ಯ ಸರಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎನ್ನುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ