ಆ್ಯಪ್ನಗರ

ರಾಜಕೀಯ ಪ್ರಚಾರದ ವೇದಿಕೆ ಆಯ್ತಾ ಸಾಹಿತ್ಯ ಸಮ್ಮೇಳನ?

ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಪ್ರದಾಯ ್ನ ಮುಂದಿನ ಪೀಳಿಗೆಗೆ ಪರಿಚಯಿಸುವ ನೆಲೆಗಟ್ಟಿನಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳು ರಾಜಕಾರಣಿಗಳ ರಾಜಕೀಯದ ಪ್ರಚಾರದ ವೇದಿಕೆಗಳಾಗಿ ಬಳಕೆಯಾಗುತ್ತಿವೆಯೇ?ಎಂಬ ಪ್ರಶ್ನೆ ಇತ್ತೀಚಿಗೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳನ್ನು ಬಲವಾಗಿ ಕಾಡುತ್ತಿದೆ.

Vijaya Karnataka Web 23 Feb 2019, 5:00 am
ಸಂಸದ ಮೊಯ್ಲಿ ಸಾರಥ್ಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ | ಚರ್ಚೆಗೆ ಗ್ರಾಸವಾಯ್ತು ಜಿಲ್ಲಾ ಕಸಾಪ ನಡೆ
Vijaya Karnataka Web is literature conference become political campaign forum
ರಾಜಕೀಯ ಪ್ರಚಾರದ ವೇದಿಕೆ ಆಯ್ತಾ ಸಾಹಿತ್ಯ ಸಮ್ಮೇಳನ?


* ಎಂ.ಕೃಷ್ಣಪ್ಪ ಕೆಎನ್‌ಹಳ್ಳಿ, ಚಿಕ್ಕಬಳ್ಳಾಪುರ

ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಪ್ರದಾಯ ್ನ ಮುಂದಿನ ಪೀಳಿಗೆಗೆ ಪರಿಚಯಿಸುವ ನೆಲೆಗಟ್ಟಿನಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳು ರಾಜಕಾರಣಿಗಳ ರಾಜಕೀಯದ ಪ್ರಚಾರದ ವೇದಿಕೆಗಳಾಗಿ ಬಳಕೆಯಾಗುತ್ತಿವೆಯೇ?ಎಂಬ ಪ್ರಶ್ನೆ ಇತ್ತೀಚಿಗೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳನ್ನು ಬಲವಾಗಿ ಕಾಡುತ್ತಿದೆ.

ಅಸಲಿಗೆ ಇಂತಹ ಪ್ರಶ್ನೆ ಉದ್ಭವಿಸುವುದಕ್ಕೆ ಕಾರಣವೂ ಇದೆ. ಫೆ.23 ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಅವಿಭಜಿತ ಬೆಂಗಳೂರು ಉತ್ಸವ, ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಹಾಗೂ ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಶತಮಾನೋತ್ಸವ, ಪುತ್ಥಳಿಗಳ ಅನಾವರಣ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಚರ್ಚೆಗೆ ಗ್ರಾಸವಾಯ್ತು ಜಿಲ್ಲಾ ಕಸಾಪ ನಡೆ: ಕಸಾಪ ಜಿಲ್ಲಾ ಘಟಕಗಳು ಆಯಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬೇಕು. ಈ ಮೂಲಕ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಪರಿಚಯವನ್ನು ಜಿಲ್ಲೆಯ ಸಾಹಿತ್ಯ ಪ್ರೇಮಿಗಳಿಗೆ ಮಾಡಬೇಕು. ಆದರೆ, ಈ ಬಗ್ಗೆ ಇದುವರೆಗೂ ಕಿಂಚಿತ್ತೂ ಆಸಕ್ತಿ ತೋರದ ಜಿಲ್ಲಾ ಕಸಾಪ ಪದಾಧಿಕಾರಿಗಳು, ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕೋಸ್ಕರ ಮಾಡುವ ವೇದಿಕೆಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕೈ ತೊಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಕೇಂದ್ರ ಪರಿಷತ್‌ನ ನಿಯಮದಂತೆ ಪ್ರಸಕ್ತ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಈಗಾಗಲೇ ಆಯೋಜನೆ ಮಾಡಬೇಕಿತ್ತು. ಆದರೆ, ಜಿಲ್ಲಾಧ್ಯಕ್ಷರು ಒಳಗೊಂಡಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಬಗ್ಗೆ ಮೀನ ಮೇಷ ಮಾಡುತ್ತಿದ್ದಾರೆ. ಜಿಲ್ಲಾ ಸಮ್ಮೇಳನ ಆಗುವವರೆಗೂ ತಾಲೂಕು ಸಮ್ಮೇಳನಗಳನ್ನು ಮಾಡುವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧ್ಯಕ್ಷರು ಹೇಳುತ್ತಿರುವುದಾಗಿ ತಾಲೂಕು ಘಟಕಗಳ ಅಧ್ಯಕ್ಷರೇ ಸ್ವತಃ ಬೇಸರ ವ್ಯಕ್ತಪಡಿಸುತ್ತಿದ್ದು, ಜಿಲ್ಲೆಗೆ ಬದಲಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಘಟಕದ ಸಹಯೋಗದಲ್ಲಿ ಸಮ್ಮೇಳನ ಮಾಡುತ್ತಿರುವುದಾದರೂ ಏಕೆ?ಎಂಬುದರ ಸಾಕಷ್ಟು ವಿರೋಧಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ರಾಜಕೀಯ ಪ್ರೇರಿತ ಕಾರ್ಯಕ್ರಮ: ವಿಜಯಪುರದಲ್ಲಿ ಆಯೋಜಿಸಿರುವ ಸಮಾವೇಶ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಇಷ್ಟು ದಿನ ಮೌನವಾಗಿದ್ದ ಸಂಸದ ವೀರಪ್ಪ ಅವರು ಈಗ ದಿಢೀರನೇ ಕಾರ್ಯೋನ್ಮುರಾಗಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ಕಸಾಪ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಇದು ಕೇವಲ ಚುನಾವಣಾ ಗಿಮಿಕ್‌ ಮಾತ್ರ ಎಂಬ ಆರೋಪಗಳು ಕೇಳಿಬಂದಿದ್ದು, ಇಂತಹ ರಾಜಕೀಯ ವೇದಿಕೆಯಲ್ಲಿ ಕಸಾಪ ಸಮ್ಮೇಳನ ಆಯೋಜಿಸುವ ಪರಿಯಾದರೂ ಏನಿತ್ತು ಎಂಬ ಪ್ರಶ್ನೆ ಸಾಹಿತಿಗಳಲ್ಲೂ ಮೂಡಿದೆ.

ಜಿಲ್ಲಾ ಸಮ್ಮೇಳನಕ್ಕೆ ಆಸಕ್ತಿ ತೋರದ ಜಿಲ್ಲಾ ಕಸಾಪ : ಇನ್ನು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಮ್ಮೇಳವನ್ನು ಮಾಡಲು ಜಿಲ್ಲಾ ಕಸಾಪ ಹಿಂದೇಟು ಹಾಕುತ್ತಿದೆ. ಕಳೆದ ವರ್ಷ ಫೆಬ್ರುವರಿ ಅಂತ್ಯದ ವೇಳೆಗೆ ಎಲ್ಲಾ ತಾಲೂಕು ಸಮ್ಮೇಳನಗಳೂ ಮುಗಿದು ಜಿಲ್ಲಾ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಈ ಭಾರಿ ಸಮ್ಮೇಳನ ಆಯೋಜನೆ ಗೋಜಿಗೆ ಹೋಗಿಲ್ಲ. ಇನ್ನು ತಾಲೂಕು ಸಮ್ಮೇಳನಗಳನ್ನು ಆಯೋಜನೆ ಮಾಡಲು ತಾಲೂಕು ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರನ್ನು ಮನವಿ ಮಾಡಿರುವ ಬಗ್ಗೆಯೂ ಕೇಳಿಬಂದಿದ್ದು, ಜಿಲ್ಲಾ ಸಮ್ಮೇಳನಕ್ಕೂ ಮುನ್ನ ತಾಲೂಕು ಸಮ್ಮೇಳನಗಳನ್ನು ಯಾವುದೇ ಕಾರಣಕ್ಕೂ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಜಿಲ್ಲಾಧ್ಯಕ್ಷರು ನೀಡಿರುವುದಾಗಿ ತಿಳಿದುಬಂದಿದೆ.

ಒಟ್ನಲ್ಲಿ ಗಡಿ ಜಿಲ್ಲೆಗಳಲ್ಲಿ ಕನ್ನಡವನ್ನು ಹೆಚ್ಚು ಗಟ್ಟಿಗೊಳಿಸಬೇಕಾದ ಕಸಾಪ ಜಿಲ್ಲೆಯಲ್ಲಿ ಸಮ್ಮೇಳನಗಳನ್ನು ಆಯೋಜಿಸುವುದಕ್ಕಿಂತ ರಾಜಕೀಯ ಪ್ರೇರಿತ ವೇದಿಕೆಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಿ ಕೈ ತೊಳೆದುಕೊಳ್ಳುತ್ತಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

-----

ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ಮಾಡಲು ಯೋಗ್ಯತೆ, ಕಾಳಜಿ ಇಲ್ಲದ ಕಸಾಪದ ಜಿಲ್ಲಾಧ್ಯಕ್ಷರಿಗೆ ಪಕ್ಕದ ಜಿಲ್ಲೆಯಲ್ಲಿ ರಾಜಕಾರಣಿಗಳು ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಯಾವುದೇ ಪದಾಧಿಕಾರಿಗಳಿಗೆ ತಿಳಿಸದೇ ಕಸಾಪ ಸಹಯೋಗ ಮಾಡಿಕೊಂಡಿರುವುದು ಖಂಡನೀಯ ಮತ್ತು ಜಿಲ್ಲೆಯ ಜನತೆಗೆ ಮಾಡಿದ ಅಪಮಾನ.

-ಎಸ್‌.ಶಿವರಾಂ, ಹಿರಿಯ ಸಾಹಿತಿ


ಸಾಹಿತ್ಯ ಸಮ್ಮೇಳನ ಜಿಲ್ಲೆಯ ಎಲ್ಲಾ ಸಾಹಿತ್ಯಾಭಿಮಾನಿಗಳಿಗೂ ಸಂಬಂಧಿಸಿದ್ದು, ಅದನ್ನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಸಹಯೋಗ ಮಾಡಿಕೊಳ್ಳುವುದು ಸೂಕ್ತವಲ್ಲ. ಸಮ್ಮೇಳನ ಎಂದರೆ ವಿಚಾರಗೋಷ್ಠಿಗಳು, ಸಂವಾದ, ಚರ್ಚೆಗಳು ನಡೆಯಬೇಕು. ಇದ್ಯಾವುದೂ ಇಲ್ಲದೆ ಒಂದು ದಿನಕ್ಕೆ ಸಮ್ಮೇಳನಾ ಮಾಡಿಮುಗಿಸುವುದು ಸರಿಯಲ್ಲ.

-ಗೋಪಾಲಗೌಡ ಕಲ್ವಮಂಜಲಿ, ಸಾಹಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ