ಆ್ಯಪ್ನಗರ

ಹಾಸ್ಟೆಲ್‌ಗಳಿಗೆ ಪೌರಾಯುಕ್ತರ ದಿಢೀರ್‌ ಭೇಟಿ

ನಗರದಲ್ಲಿನ ಹಲವು ವಸತಿ ನಿಲಯಗಳಿಗೆ ನಗರಸಭೆ ಪೌರಾಯುಕ್ತ ಹಾಗೂ ನೋಡೆಲ್‌ ಅಧಿಕಾರಿಯೂ ಆದ ಜಿ.ಎನ್‌.ಚಲಪತಿ ದಿಢೀರ್‌ ಭೇಟಿ ನೀಡಿ, ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗಳಿಗೆ ಬೇಸರ ವ್ಯಕ್ತಪಡಿಸಿ ಸರಿಪಡಿಸಿಕೊಳ್ಳಲು ತಾಕೀತು ಮಾಡಿದರು.

Vijaya Karnataka 14 Sep 2019, 4:35 pm
ವಿದ್ಯಾರ್ಥಿಗಳÜ ಮಂಚದ ಮೇಲೆ ಮಲಗಿದ್ದ ಅನಧಿಕೃತ ವ್ಯಕ್ತಿ | ಬದಲಿಸದ ಸಿಎಂ, ಡಿಸಿ, ಸಿಇಒ ಹೆಸರು
Vijaya Karnataka Web 13SDL1_10

ಶಿಡ್ಲಘಟ್ಟ: ನಗರದಲ್ಲಿನ ಹಲವು ವಸತಿ ನಿಲಯಗಳಿಗೆ ನಗರಸಭೆ ಪೌರಾಯುಕ್ತ ಹಾಗೂ ನೋಡೆಲ್‌ ಅಧಿಕಾರಿಯೂ ಆದ ಜಿ.ಎನ್‌.ಚಲಪತಿ ದಿಢೀರ್‌ ಭೇಟಿ ನೀಡಿ, ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗಳಿಗೆ ಬೇಸರ ವ್ಯಕ್ತಪಡಿಸಿ ಸರಿಪಡಿಸಿಕೊಳ್ಳಲು ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಜಿಲ್ಲೆಯಲ್ಲಿನ ವಸತಿ ನಿಲಯಗಳ ವಸ್ತು ಸ್ಥಿತಿ ಅರಿಯಲು ಜಿಲ್ಲಾಧಿಕಾರಿಗಳು ನೋಡೆಲ್‌ ಅಧಿಕಾರಿಗಳನ್ನು ನೇಮಿಸಿದ್ದು ಈ ಹಿನ್ನಲೆಯಲ್ಲಿಇವರು ಭೇಟಿ ನೀಡಿದ್ದರು.

ಪರಿಶೀಲನೆ: ಮೊದಲಿಗೆ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ದಾಸ್ತಾನು ಮಾಡಿದ್ದ ಆಹಾರ ಸಾಮಗ್ರಿಗಳು, ಕಾಳು ಕಡಿ ಅಕ್ಕಿ ಬೇಳೆಯನ್ನು ಪರಿಶೀಲಿಸಿದರು. ಅಡುಗೆ ಮನೆ, ಶೌಚಾಲಯಗಳನ್ನು ವೀಕ್ಷಿಸಿದರು. ಹಾಸ್ಟೆಲ್‌ನಲ್ಲಿಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಹಾಗೂ ಹಾಸ್ಟೆಲ್‌ನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಾಜರಾತಿ ಖಾತ್ರಿಪಡಿಸಿಕೊಳ್ಳುವ ಬಯೋ ಮೆಟ್ರಿಕ್‌ ಪರಿಕರಗಳ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಹಾಸ್ಟೆಲ್‌ನಲ್ಲಿ ಮೆನುವಿನಂತೆ ತಿಂಡಿ ಊಟ ಕೊಡುತ್ತಾರಾ, ಸಾಂಬಾರಿಗೆ ಬಳಸುವ ತರಕಾರಿಗಳ ಗುಣಮಟ್ಟದ ಬಗ್ಗೆಯೂ ವಿದ್ಯಾರ್ಥಿಗಳನ್ನು ಕೇಳಿ ಮಾಹಿತಿ ಪಡೆದರು.

ಮೇಲ್ವಿಚಾರಕಿಗೆ ಸೂಚನೆ; ಹಾಸ್ಟೆಲ್‌ನ ಸುತ್ತಲೂ ಸ್ವಚ್ಚತೆ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು ಹಾಸ್ಟೆಲ್‌ನ ಮೇಲ್ವಿಚಾರಕಿ ಮುನಿರತ್ನ ಅವರಿಗೆ ಸ್ವಚ್ಚತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಹಾಸ್ಟೆಲ್‌ನಲ್ಲಿಅನಧಿಕೃತ ವ್ಯಕ್ತಿ: ನಂತರ ದೇವರಾಜು ಅರಸು ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಅನಧಿಕೃತ ವ್ಯಕ್ತಿ ಮಂಚದಲ್ಲಿಮಲಗಿದ್ದವರನ್ನು ಕಂಡು, ಸ್ವಚ್ಛತಾ ಸಿಬ್ಬಂದಿಯನ್ನು ಯಾರು ಇವರು ಎಂದಾಗ ಅವರಿಂದಲೂ ಸ್ಪಷ್ಟ ಉತ್ತರ ಸಿಗಲಿಲ್ಲ. ನಾವು ಇಲ್ಲಿಕೆಲಸ ಮಾಡುತ್ತಿದ್ದಾಗ ಆ ಕಡೆ ಯಾರೋ ಬಂದು ಮಲಗಿದ್ದಾರೆ ಎಂದು ಜಾರಿಕೊಂಡರು.

ಸಿಬ್ಬಂದಿ ವಿರುದ್ಧ ಗರಂ: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಯುಕ್ತರು, ಇದೇನು ಯಾರೆಂದರೆ ಅವರು ಬಂದು ಮಲಗಿದ್ದು ಹೋಗಲು ಇದೇನು ಲಾಡ್ಜ್‌ ಅಥವಾ ಧರ್ಮ ಛತ್ರವಾ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಸಂಬಂಧಿಸಿದ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.

ಫಲಕದಲ್ಲಿತಪ್ಪುಗಳು: ಹಾಗೆಯೇ ಹಾಸ್ಟೆಲ್‌ನ ಮಾಹಿತಿ ಫಲಕದಲ್ಲಿಹಲವಾರು ವಿಷಯಗಳು ತಪ್ಪು ತಪ್ಪಾಗಿ ಬರೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದ ಮುಖ್ಯಮಂತ್ರಿ, ಜಿಲ್ಲಾಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾಪಂಚಾಯಿತಿ ಸಿಇಒ ಸೇರಿ ಅನೇಕರು ಬದಲಾದರು ಹಾಸ್ಟೆಲ್‌ನ ಗೋಡೆಗಳ ಮೇಲೆ ಅವರ ಹೆಸರುಗಳೆ ಉಳಿದುಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿ ಕೂಡಲೆ ಬದಲಿಸುವಂತೆ ತಾಕೀತು ಮಾಡಿದರು.

ಶೂ, ಸಾಕ್ಸ್‌ ವಿತರಿಸಿಲ್ಲ:
ಕೆಲ ವಿದ್ಯಾರ್ಥಿಗಳ ಕಾಲಿಗೆ ಧರಿಸುವ ಶೂ ಹಾಗೂ ಸಾಕ್ಸ್‌ಗಳು ಕಿತ್ತು ಹೋಗಿರುವುದನ್ನು ಕಂಡು ಏಕೆಂದು ಪ್ರಶ್ನಿಸಿದಾಗ ಈ ವರ್ಷ ಇನ್ನೂ ಶೂ ಮತ್ತು ಸಾಕ್ಸ್‌ಗಳನ್ನು ಇನ್ನೂ ವಿತರಿಸಿಲ್ಲ. ಕಳೆದ ವರ್ಷದ್ದೇ ಹಾಕಿಕೊಂಡಿದ್ದೇವೆ ಎಂದರು. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸಯ್ಯೀದಾ, ರೆಡ್ಡಿ ಇನ್ನಿತರರು ಹಾಜರಿದ್ದರು.

ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ನಡೆಯುತ್ತಿರುವ ಹಾಸ್ಟೆಲ್‌ನ ವಸ್ತು ಸ್ಥಿತಿ ಅರಿಯಲು ನಗರ ಹಾಗೂ ಗ್ರಾಮೀಣ ಭಾಗದ ಎಲ್ಲವಸತಿ ನಿಲಯಗಳನ್ನು ವೀಕ್ಷಿಸಿ ವರದಿ ಸಲ್ಲಿಸಲು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ತಮ್ಮ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ, ಡಿಸಿಗೆ ಹಾಸ್ಟೆಲ್‌ಗಳಲ್ಲಿನ ವಸ್ತು ಸ್ಥಿತಿ ಕುರಿತು ಸಚಿತ್ರ ಸಮೇತ ವರದಿ ನೀಡಬೇಕಿದೆ.
-ಜಿ.ಎನ್‌.ಚಲಪತಿ, ಪೌರಾಯುಕ್ತ, ಶಿಡ್ಲಘಟ್ಟ ನಗರಸಭೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ