ಆ್ಯಪ್ನಗರ

ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬದ ಸಡಗರ

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

Vijaya Karnataka 6 Aug 2019, 3:47 pm
ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
Vijaya Karnataka Web CBP-5CBPD2


ನಾಗರ ಪಂಚಮಿ ಪ್ರಯುಕ್ತ ಮಹಿಳೆಯರು ಮತ್ತು ಮಕ್ಕಳು ನಾನಾ ಕಡೆ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಕೊಬ್ಬರಿ ಬಟ್ಟಲಿನಲ್ಲಿ ಹಾಲು ಎರೆದು ಭಕ್ತಿಯನ್ನು ಸರ್ಮಿಪಿಸಿದರು. ಇನ್ನೂ ಕೆಲವೆಡೆ ಅಶ್ವತ್ಥಕಟ್ಟೆಗಳ ಬಳಿಯಿರುವ ಹುತ್ತಕ್ಕೆ ಹಾಲೆರೆದರು.

ನಗರದ ಹೊರವಲಯದಲ್ಲಿರುವ ಶಕ್ತಿದೇವತೆ ನಾಗಲ ಮುದ್ದಮ್ಮ ದೇವಾಲಯ, ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ದೇವಾಲಯ, ನಂದಿಯ ಬೋಗನಂಧೀಶ್ವರ ದೇವಾಲಯ, ನಗರದ ಎಚ್‌.ಎಸ್‌.ಗಾರ್ಡನ್‌ನಲ್ಲಿರುವ ಸುಬ್ರಹ್ಮಣ್ಯೇಶ್ವರ ದೇವಾಲಯ, ಹಳೆ ಪೇಟೆ ಸುಬ್ರಹ್ಮಣ್ಯೇಶ್ವರ ದೇವಾಲಯ, ಮರಳುಸಿದ್ದೇಶ್ವರ ದೇವಾಲಯಗಳಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.

ಭಕ್ತರಲ್ಲಿ ನಂಬಿಕೆ: ನಾಗರ ಪಂಚಮಿ ಪೂಜೆಯಿಂದ ಸರ್ಪದೋಷವಿದ್ದರೆ ಪರಿಹಾರವಾಗುತ್ತದೆ, ಸಂತಾನ ಭಾಗ್ಯ ಲಭಿಸುತ್ತದೆ. ಅಲ್ಲದೇ ಅಣ್ಣ, ತಮ್ಮಂದಿರ ಸಂಬಂಧಗಳು ಗಟ್ಟಿಗೊಳ್ಳಲಿದೆ ಎಂಬ ನಂಬಿಕೆಯಿಂದ ಭಕ್ತರು ಪೂಜೆ ಸಲ್ಲಿಸುತ್ತಾರೆ.

ಸಂಭ್ರಮ: ನಗರದೆಲ್ಲೆಡೆ ಬೆಳಗ್ಗೆಯಿಂದ ಮಹಿಳೆಯರು ಗುಂಪಾಗಿ ಕೂಡಿಕೊಂಡು ನಾಗಮೂರ್ತಿಗಳಿರುವ ದೇವಾಲಯಗಳಿಗೆ ತೆರಳಿ ನಾಗಪ್ರತಿಮೆಗಳಿಗೆ, ಹುತ್ತಗಳಿಗೆ ಹಾಲೆರೆದು, ಅರಿಶಿಣ ದಾರ ಕಟ್ಟಿ ಭಕ್ತಿ ಸಲ್ಲಿಸಿದರು. ಯುವಕರು ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರೆ, ಯುವತಿಯರು ಜೋಕಾಲಿ ಆಡಿ ಹಬ್ಬಕ್ಕೆ ಮೆರಗು ತಂದರು.

ಅಣ್ಣ-ತಂಗಿಯ ಬಾಂಧವ್ಯವನ್ನು ತಿಳಿಸುವ ಹಬ್ಬ ಇದಾಗಿದೆ. ಈ ಹಬ್ಬದ ಬಳಿಕ ವರ ಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಾಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬಂದು ಜನರ ಸಂಭ್ರಮ ಹೆಚ್ಚಿಸಲಿದೆ. ಮನೆಯವರೆಲ್ಲ ಸೇರಿ ಎಲ್ಲರಿಗೂ ಒಳಿತಾಗಲಿ ಎಂದು ನಾಗ ದೇವತೆಯಲ್ಲಿ ಪ್ರಾರ್ಥಿಸುತ್ತಾರೆ ಎಂದು ಶಕ್ತಿದೇವತೆ ನಾಗಲ ಮುದ್ದಮ್ಮ ದೇವಾಲಯದ ಧರ್ಮದರ್ಶಿ ಗೋವಿಂದಯ್ಯ ಹೇಳಿದರು.

ಉಚಿತ ಹಾಲು, ಪ್ರಸಾದ ವ್ಯವಸ್ಥೆ
ನಾಗರಪಂಚಮಿ ಪ್ರಯುಕ್ತ ನಗರದ ಹೊರವಲಯದ ನಾಗಲ ಮುದ್ದಮ್ಮ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಲು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೂ ಉಚಿತ ಹಾಲಿನ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ