ಆ್ಯಪ್ನಗರ

ಶಿಡ್ಲಘಟ್ಟದಲ್ಲಿ ಮುಂದುವರಿದ ವರುಣ

ಮಳೆರಾಯನ ಆರ್ಭಟ ಎರಡನೇ ದಿನವೂ ಮುಂದುವರಿದಿದ್ದು ವೈ.ಹುಣಸೇನಹಳ್ಳಿಯ ಆಸುಪಾಸಿನಲ್ಲಿ ಬಿರುಗಾಳಿ ಸಮೇತ ಮಳೆಯ ಆರ್ಭಟಕ್ಕೆ ಹತ್ತಾರು ರೇಷ್ಮೆ ಹುಳು ಸಾಕಣೆ ಮನೆಗಳ ಚಾವಣಿ, ಪಾಲಿಹೌಸ್‌ಗಳ ಹೊದಿಕೆಗಳು ಗಾಳಿಗೆ ತೂರಿಹೋಗಿ, ಲಕ್ಷಾಂತರ ರೂಪಾಯಿಗಳು ನಷ್ಟ ಉಂಟಾಗಿದೆ.

Vijaya Karnataka 28 May 2019, 5:00 am
ಶಿಡ್ಲಘಟ್ಟ: ಮಳೆರಾಯನ ಆರ್ಭಟ ಎರಡನೇ ದಿನವೂ ಮುಂದುವರಿದಿದ್ದು ವೈ.ಹುಣಸೇನಹಳ್ಳಿಯ ಆಸುಪಾಸಿನಲ್ಲಿ ಬಿರುಗಾಳಿ ಸಮೇತ ಮಳೆಯ ಆರ್ಭಟಕ್ಕೆ ಹತ್ತಾರು ರೇಷ್ಮೆ ಹುಳು ಸಾಕಣೆ ಮನೆಗಳ ಚಾವಣಿ, ಪಾಲಿಹೌಸ್‌ಗಳ ಹೊದಿಕೆಗಳು ಗಾಳಿಗೆ ತೂರಿಹೋಗಿ, ಲಕ್ಷಾಂತರ ರೂಪಾಯಿಗಳು ನಷ್ಟ ಉಂಟಾಗಿದೆ.
Vijaya Karnataka Web rain contiunes in shidlghatta
ಶಿಡ್ಲಘಟ್ಟದಲ್ಲಿ ಮುಂದುವರಿದ ವರುಣ


ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಶೀಗೆಹಳ್ಳಿ, ಗಜ್ಜಿಗಾನಹಳ್ಳಿ, ಕದಿರಿನಾಯಕನಹಳ್ಳಿ, ಚನ್ನಹಳ್ಳಿ ಆಸುಪಾಸಿನಲ್ಲಿ ಮಳೆಯ ಆರ್ಭಟ, ಜೋರುಗಾಳಿಯ ರಭಸ ಹೆಚ್ಚಾಗಿತ್ತು.

ಬುಡಸಮೇತ ನೆಲಕ್ಕುರುಳಿವ ಮರ:
ರಸ್ತೆಯ ಅಕ್ಕಪಕ್ಕ ರೈತರ ಹೊಲ, ಗದ್ದೆಗಳಲ್ಲಿ ಬೆಳೆದು ನಿಂತಿದ್ದ ಬೃಹತ್‌ ಮರಗಳು ಕೂಡ ಬುಡಸಮೇತ ನೆಲಕ್ಕುರುಳಿವೆ. ಗಾಳಿಯ ಆರ್ಭಟ ಎಷ್ಟಿತ್ತೆಂದರೆ ಮನೆಗಳ ಚಾವಣಿಯ ಕಬ್ಬಿಣದ ತಗಡು ಶೀಟ್‌ಗಳು ಆಕಾಶದಲ್ಲಿ ತೂರಿಹೋಗಿ, ದೂರದ ವಿದ್ಯುತ್‌ ಕಂಬದ ಮೇಲೆ ನೇತಾಡುವಷ್ಟರ ಮಟ್ಟಿಗೆ ಜೋರಾದ ಬಿರುಗಾಳಿಯ ಅಬ್ಬರಕ್ಕೆ ರೈತಾಪಿ ವರ್ಗ ಬೆಚ್ಚಿಬಿದ್ದಿದ್ದಾರೆ.

ಬೆಳೆಗಳು ಮಣ್ಣು ಪಾಲು: ಸಾಮಾನ್ಯವಾಗಿ ಬಿರುಗಾಳಿಗೆ ಪಾಲಿಹೌಸ್‌ನ ಪ್ಲಾಸ್ಟಿಕ್‌ನ ಹೊದಿಕೆ ಹರಿದು ಹೋಗುತ್ತದೆ. ಆದರೆ ಭಾನುವಾರ ರಾತ್ರಿ ಬೀಸಿದ ಬಿರುಗಾಳಿಗೆ ಪಾಲಿಹೌಸ್‌ನ ಪಿಲ್ಲರ್‌ನ ಕಂಬಗಳು ಕಿತ್ತುಬಂದಿವೆ. ಸುಮಾರು 2-3 ಅಡಿ ಆಳಕ್ಕೆ ಗುಂಡಿ ತೋಡಿ ಅದರಲ್ಲಿ ಕಾಂಕ್ರೀಟ್‌ ತುಂಬಿ ಅಳವಡಿಸಿದ್ದ ಕಬ್ಬಿಣದ ಪಿಲ್ಲರ್‌ಗಳು ಕೂಡ ಕಿತ್ತು ಬಂದಿವೆ. ಪಾಲಿಹೌಸ್‌ನ ಒಳಗೆ ಇಟ್ಟಿದ್ದ ಬೆಳೆಗಳು ಮಣ್ಣುಪಾಲಾಗಿವೆ.

ವಿದ್ಯುತ್‌ ಸಂಪರ್ಕ ಕಡಿತ: ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದ ಐದಾರು ವಿದ್ಯುತ್‌ ಕಂಬಗಳು ಅರ್ಧಕ್ಕೆ ತುಂಡಾಗಿ ಬಿದ್ದಿವೆ. ಬಹಳಷ್ಟು ಕಂಬಗಳು ವಾಲಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಈ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದೆ.

ರೇಷ್ಮೆ ಹುಳುಗಳ ಸಾವು: ವಾಸದ ಮನೆಗಳಿಗಿಂತಲೂ ರೇಷ್ಮೆ ಹುಳು ಸಾಕಣೆ ಮನೆಗಳ ಚಾವಣಿಗಳು ಜೋರಾದ ಬಿರುಗಾಳಿಗೆ ತುತ್ತಾಗಿದ್ದು, ಹುಳು ಸಾಕಣೆ ಮನೆಯಲ್ಲಿದ್ದ ಹುಳುಗಳು ಮಳೆಯ ನೀರಲ್ಲಿ ನೆನೆದು ಹೋಗಿವೆ. ಮಳೆ ನೀರಿನಿಂದ ಹುಳುಗಳ ಹಿಚಿಕೆ ದುರ್ವಾಸನೆ ಬೀರತೊಡಗಿದೆ. ಚಾವಣಿ ಕಿತ್ತು ಮಳೆ ನೀರು ಮನೆಯ ತುಂಬಾ ತುಂಬಿಕೊಂಡಿದ್ದು ತಡರಾತ್ರಿ ಏನು ಮಾಡಲು ದಿಕ್ಕು ತೋಚದ ರೈತರು ಸುಮ್ಮನೆ ಕೈಕಟ್ಟಿ ತಮ್ಮ ಜೀವನ ಉಳಿಸಿಕೊಂಡಿದ್ದಾರೆ. ಕಣ್ಣ ಮುಂದೆಯೇ ಚಾವಣಿ ಹಾರಿಹೋದರು, ರೇಷ್ಮೆ ಹುಳುಗಳು ವಿಲವಿಲ ಒದ್ದಾಡಿ ಸತ್ತರೂ ಏನೂ ಮಾಡದ ಸ್ಥಿತಿ ರೈತನದ್ದು.

ಬೆದರಿದ ರಾಸುಗಳು: ಬಿರುಗಾಳಿಯ ಆರ್ಭಟಕ್ಕೆ ದನಕರುಗಳ ಶೆಡ್‌ನ ಚಾವಣಿ ಹಾರಿಕೊಂಡು ಹೋಗುವ ಸದ್ದಿಗೆ ದನಕರು, ಮೇಕೆ, ಕುರಿ, ಹಸುಗಳು ಬೆದರಿ ಕಿತ್ತುಕೊಂಡು ಹೊರಗೆ ಬಂದಿವೆ.

ಈ ಭಾಗದಲ್ಲಿ ನೀರಿನ ಅನುಕೂಲ ಇರುವ ರೈತರು ಟೊಮೇಟೊವನ್ನು ಬೆಳೆದಿದ್ದು, ಅದರ ಆಶ್ರಯಕ್ಕೆ ನೆಟ್ಟಿದ್ದ ನೀಲಗಿರಿ ಕಡ್ಡಿಗಳು ಗಾಳಿಗೆ ಕೊಚ್ಚಿಕೊಂಡು ಹೋಗಿದ್ದು, ಅದರಲ್ಲಿದ್ದ ಟೊಮೇಟೊ ನೆಲಕಚ್ಚಿವೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ ರೈತರ ಸ್ಥಿತಿ.

ಕಸಬಾ ಹೋಬಳಿಯ ಕಂದಾಯ ನಿರೀಕ್ಷ ಕ ವಿಶ್ವನಾಥ್‌, ಗ್ರಾಮ ಲೆಕ್ಕಿಗ ಸಂತೋಷ್‌, ಗ್ರಾಮ ಸಹಾಯಕ ಶಂಕರ್‌ ಸ್ಥಳಕ್ಕೆ ಭೇಟಿ ನೀಡಿ, ನಷ್ಟದ ಅಂದಾಜನ್ನು ಪರಿಶೀಲಿಸಿದರು.

ಅಧಿಕಾರಿಗಳಿಂದ ಪರಿಶೀಲನೆ
ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿಯಲ್ಲೂ ಬಿರುಗಾಳಿ ಸಮೇತ ಬಿದ್ದ ಆಲಿಕಲ್ಲು ಮಳೆಗೆ 2 ವಾಸದ ಮನೆ, 5 ಚಂದ್ರಿಕೆ ಶೆಡ್‌, ರೇಷ್ಮೆ ಹುಳು ಸಾಕಣೆ ಮನೆಯ ಚಾವಣಿ ಹಾರಿಹೋಗಿವೆ. ಲಕ್ಷಾಂತರ ರೂ. ನಷ್ಟವುಂಟಾಗಿದೆ. ಕಂದಾಯ ಇಲಾಖೆಯ ವಿಶ್ವನಾಥ್‌, ಪಿಡಿಒ ಅಂಜನ್‌ ಕುಮಾರ್‌, ಕಾರ್ಯದರ್ಶಿ ಶ್ರೀನಿವಾಸ್‌, ಗ್ರಾಪಂ ಸದಸ್ಯ ಎ.ಎಂ.ತ್ಯಾಗರಾಜ್‌ ಭೇಟಿ ನೀಡಿ, ನಷ್ಟದ ಅಂದಾಜನ್ನು ಪರಿಶೀಲಿಸಿದರು. ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ತಿಳಿಸಿದ್ದಾರೆ.

ಬಿರುಗಾಳಿ ಸಮೇತ ಸುರಿದ ಮಳೆಗೆ ಅಪಾರ ನಷ್ಟವುಂಟಾದ ಶೀಗೆಹಳ್ಳಿ ಹಾಗೂ ಆಸುಪಾಸಿನ ಗ್ರಾಮಗಳಿಗೆ ನಮ್ಮ ಸಿಬ್ಬಂದಿಯೊಂದಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದೇವೆ. ಮೊದಲಿಗೆ ವಾಸದ ಮನೆಗಳು, ನಂತರ ರೇಷ್ಮೆ ಹುಳು ಸಾಕಣೆ ಮನೆ, ಚಂದ್ರಿಕೆ ಶೆಡ್‌, ಪಾಲಿಹೌಸ್‌, ದನಕರುಗಳ ಕೊಟ್ಟಿಗೆ ವೀಕ್ಷಿಸಿ ನಷ್ಟದ ಅಂದಾಜನ್ನು ಲೆಕ್ಕ ಹಾಕಲಾಗುವುದು.= ಪ್ರತಿಯೊಬ್ಬರ ನಷ್ಟವನ್ನು ಇಲಾಖೆವಾರು ಕ್ರೂಢೀಕರಿಸಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.
-ವಿಶ್ವನಾಥ್‌ | ಕಂದಾಯ ನಿರೀಕ್ಷ ಕ, ಶಿಡ್ಲಘಟ್ಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ