ಆ್ಯಪ್ನಗರ

'ಹಿಂದಿ ಚಲನ್‌ ಹಿಂಪಡೆದ ಎಸ್‌ಬಿಐ'

ಕನ್ನಡ, ಇಂಗ್ಲೀಷ್‌ ಕಡೆಗಣಿಸಿ ಹಿಂದಿ ಭಾಷೆಯಲ್ಲಿ ಮಾತ್ರ ಇದ್ದ ಚಲನ್‌ ಕುರಿತು ವಿ.ಕದಲ್ಲಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚೆತ್ತ ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದೆ.

ವಿಕ ಸುದ್ದಿಲೋಕ 6 Aug 2017, 10:17 pm

'ಹಿಂದಿ ಚಲನ್‌ ಹಿಂಪಡೆದ ಎಸ್‌ಬಿಐ'

ವಿ.ಕ ಫಲಶೃತಿ

ಚಿಕ್ಕಬಳ್ಳಾಪುರ: ಕನ್ನಡ, ಇಂಗ್ಲೀಷ್‌ ಕಡೆಗಣಿಸಿ ಹಿಂದಿ ಭಾಷೆಯಲ್ಲಿ ಮಾತ್ರ ಇದ್ದ ಚಲನ್‌ ಕುರಿತು ವಿ.ಕದಲ್ಲಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚೆತ್ತ ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದೆ.

'ಕನ್ನಡ, ಇಂಗ್ಲೀಷ್‌ ಮಾಯ, ಎಲ್ಲ ಹಿಂದಿಮಯ' ಎಸ್‌ಬಿಐ ಧೋರಣೆಗೆ ಜನರ ಆಕ್ರೋಶ, ಬ್ಯಾಂಕ್‌ ಸಿಬ್ಬಂದಿಯಿಂದ ಉಡಾಫೆ ಉತ್ತರ ಶೀರ್ಷಿಕೆಯಡಿ ವಿ.ಕದಲ್ಲಿ ಶನಿವಾರ ಪ್ರಕಟಗೊಂಡ ವಿಸ್ತೃತ ವರದಿ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ವರದಿ ಬೆನ್ನಲ್ಲೇ ಎಸ್‌ಬಿಐನ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಶಾಖೆಗೆ ಮಾತ್ರವಲ್ಲದೆ ಇಡೀ ರಾಜ್ಯದ ಎಸ್‌ಬಿಐನ ಎಲ್ಲಾ ಶಾಖೆಗಳಿಗೂ ಎಲ್ಲಾ ಚಲನ್‌ಗಳಲ್ಲಿ ಕನ್ನಡವೂ ಒಳಗೊಂಡಂತೆ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಬಳಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಸ್‌ಬಿಐ ಚಿಕ್ಕಬಳ್ಳಾಪುರ ಶಾಖಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಕೆ.ವೆಂಕಟೇಶ್‌ಮೂರ್ತಿ ಈ ಸಂಬಂಧ ವಿ.ಕಗೆ ಲಿಖಿತ ಸ್ಪಷ್ಟೀಕರಣ ನೀಡಿದ್ದು, ಪತ್ರಿಕೆಯಲ್ಲಿ ಪ್ರಕಟವಾಗಿರುವ ಚಲನ್‌ ಮುದ್ರಿತವಾಗುವಾಗ ದೋಷಪೂರಿತವಾಗಿ ಒಂದೇ ಬದಿಯಲ್ಲಿ ಹಿಂದಿಯಲ್ಲಿ ಮಾತ್ರ ಮುದ್ರಿತವಾಗಿರುವುದಕ್ಕೆ ವಿಷಾದಿಸುತ್ತೇವೆ. ಸಾರ್ವಜನಿಕರ ಉಪಯೋಗಕ್ಕಾಗಿ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಿತವಾದ ಚಲನ್‌ಗಳನ್ನು ಶಾಖೆಗಳಲ್ಲಿ ಇರಿಸಿ ಸದಾ ಗ್ರಾಹಕರಿಗೆ ದೊರಕುವಂತೆ ಇನ್ನು ಮುಂದೆ ನೋಡಿಕೊಳ್ಳಲಾಗುವುದು. ನಮ್ಮ ಬ್ಯಾಂಕ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಇನ್ನು ಮುಂದೆ ಕನ್ನಡವನ್ನೂ ಒಳಗೊಂಡಂತೆ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಎಸ್‌ಬಿಐನ ಪ್ರಾದೇಶಿಕ ನಿಯಂತ್ರಣಾಲಯದ ಸೂಚನೆ ಮೇರೆಗೆ ಇನ್ನೊಮ್ಮೆ ಶಾಖೆಯ ಚಲನ್‌ಗಳ ಪರಿಶೀಲಿಸಿ ಹಿಂದಿ ಭಾಷಾ ಚಲನ್‌ಗಳನ್ನು ತಕ್ಷ ಣದಿಂದ ಜಾರಿಗೆ ಬರುವಂತೆ ವಾಪಸ್‌ ಪಡೆದು ಕನ್ನಡ ಭಾಷೆಯ ಚಲನ್‌ಗಳನ್ನು ಗ್ರಾಹಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಾಕ್ಸ್‌

ಪ್ರಧಾನ ವ್ಯವಸ್ಥಾಪಕರಿಂದ ಕ್ರಮದ ಎಚ್ಚರಿಕೆ

ತ್ರಿಭಾಷಾ ಸೂತ್ರ ಎಲ್ಲಾ ಶಾಖೆಗಳ ಚಲನ್‌ಗಳಲ್ಲಿ ಇರುವಂತೆ ನೋಡಿಕೊಳ್ಳುವುದು ಆಯಾ ಶಾಖೆಗಳ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಒಂದೇ ಭಾಷೆಯಿರುವ ಚಲನ್‌ಗಳನ್ನು ಬಳಕೆ ಮಾಡಬಾರದು. ಒಂದು ವೇಳೆ ಈ ರೀತಿಯ ಒಂದೇ ಭಾಷೆಯನ್ನು ಬಳಕೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ಸಂದೇಶ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕರಿಂದಲೇ ಎಲ್ಲಾ ಶಾಖೆಗಳಿಗೆ ರವಾನೆಯಾಗಿದೆ.

ಕೋಟ್‌:

ಎಸ್‌ಬಿಐನ ಪ್ರಧಾನ ವ್ಯವಸ್ಥಾಪಕರು ತ್ರಿಭಾಷಾ ಸೂತ್ರಗಳನ್ನು ಒಳಗೊಂಡ ಚಲನ್‌ಗಳ ಕಡ್ಡಾಯ ಬಳಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ಶಾಖೆಯಲ್ಲಿ ಹಿಂದಿ ಚಲನ್‌ಗಳು ಇದ್ದರೆ ತಕ್ಷ ಣ ವಾಪಸ್‌ ಪಡೆಯಲು ಹಾಗೂ ಚಲನ್‌ಗಳ ಕೊರತೆ ಇದ್ದಲ್ಲಿ ಸ್ಥಳೀಯ ಯಾವುದಾದರೂ ಶಾಖೆಯಿಂದ ತರಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಕನ್ನಡವನ್ನು ಒಳಗೊಂಡ ಚಲನ್‌ಗಳಿಲ್ಲದಿದ್ದ ಪಕ್ಷ ದಲ್ಲಿ ತಕ್ಷ ಣ ಮುದ್ರಣ ಮಾಡಲು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಈಗ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ಈ ರೀತಿ ಆಗಲು ಅವಕಾಶ ನೀಡುವುದಿಲ್ಲ.

ಬಿ.ಕೆ.ವೆಂಕಟೇಶಮೂರ್ತಿ, ಎಜಿಎಂ, ಎಸ್‌ಬಿಐ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ